ಭಾರತದ ಸ್ವಾತಂತ್ರ್ಯದ ನಂತರದ ಅತಿದೊಡ್ಡ ನಿರ್ಧಾರ; ಜಿಎಸ್‌ಟಿ ಸುಧಾರಣೆಗಳ ಕುರಿತು ಪ್ರಧಾನಿ ಮೋದಿ ಭಾಷಣ

ತೆರಿಗೆ ಸ್ಲ್ಯಾಬ್‌ಗಳನ್ನು ಶೇ. 5 ಮತ್ತು 18ಕ್ಕೆ ಸರಳಗೊಳಿಸುವ ಜಿಎಸ್‌ಟಿ ಮಂಡಳಿಯ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಜಿಎಸ್‌ಟಿ ಸುಧಾರಣೆಗಳು ದೇಶದ ಬೆಳವಣಿಗೆಗೆ 'ಡಬಲ್ ಡೋಸ್' ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಿನ್ನೆ ರಾತ್ರಿ ನಡೆದ ಜಿಎಸ್​ಟಿ ಮಂಡಳಿ ಸಭೆಯ ಬಳಿಕ ಪ್ರಸ್ತುತ ಜಾರಿಯಲ್ಲಿರುವ 4 ಸ್ಲ್ಯಾಬ್​​ಗಳ ಬದಲು ಎರಡೇ ಸ್ಲ್ಯಾಬ್​ ದರಗಳನ್ನು ಜಾರಿಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಭಾರತದ ಸ್ವಾತಂತ್ರ್ಯದ ನಂತರದ ಅತಿದೊಡ್ಡ ನಿರ್ಧಾರ; ಜಿಎಸ್‌ಟಿ ಸುಧಾರಣೆಗಳ ಕುರಿತು ಪ್ರಧಾನಿ ಮೋದಿ ಭಾಷಣ
Pm Modi Speech

Updated on: Sep 04, 2025 | 7:32 PM

ನವದೆಹಲಿ, ಸೆಪ್ಟೆಂಬರ್ 4: “ಜಿಎಸ್‌ಟಿ 2.0” ಅಡಿಯಲ್ಲಿ ಸರಳೀಕೃತ ಎರಡು-ಸ್ಲ್ಯಾಬ್ ರಚನೆಯನ್ನು ಸರ್ಕಾರ ಜಾರಿಗೆ ತಂದ ಒಂದು ದಿನದ ನಂತರ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ದೆಹಲಿಯಲ್ಲಿ ಆ ಬಗ್ಗೆ ಮಾತನಾಡಿದ್ದಾರೆ. ಜಿಎಸ್‌ಟಿ ಸುಧಾರಣೆಗಳನ್ನು (GST Reforms) ಭಾರತದ ಬೆಳವಣಿಗೆಗೆ ಡಬಲ್ ಡೋಸ್ ಆಗಿದೆ ಎಂದು ಶ್ಲಾಘಿಸಿದ್ದಾರೆ. “GST ಸ್ವತಂತ್ರ ಭಾರತದ ಅತಿದೊಡ್ಡ ಆರ್ಥಿಕ ಸುಧಾರಣೆಗಳಲ್ಲಿ ಒಂದಾಗಿತ್ತು. ವಾಸ್ತವವಾಗಿ, ಈ ಸುಧಾರಣೆಗಳು ದೇಶಕ್ಕೆ ಬೆಂಬಲ ಮತ್ತು ಬೆಳವಣಿಗೆಯ ಡಬಲ್ ಡೋಸ್ ಆಗಿದೆ. ಒಂದೆಡೆ, ದೇಶದ ಸಾಮಾನ್ಯ ಜನರು ಹಣವನ್ನು ಉಳಿಸುತ್ತಾರೆ, ಮತ್ತೊಂದೆಡೆ, ದೇಶದ ಆರ್ಥಿಕತೆಯನ್ನು ಬಲಪಡಿಸಲಾಗುತ್ತದೆ” ಎಂದಿದ್ದಾರೆ.

ಬುಧವಾರ ರಾತ್ರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವ್ಯಾಪಕ ಶ್ರೇಣಿಯ ಗ್ರಾಹಕ ಅಗತ್ಯ ವಸ್ತುಗಳು, ಔಷಧಿಗಳು ಮತ್ತು ವಾಹನಗಳ ಮೇಲಿನ ತೆರಿಗೆಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ತರ್ಕಬದ್ಧಗೊಳಿಸುವ ಜಿಎಸ್‌ಟಿ ಕೌನ್ಸಿಲ್‌ನ ಮಹತ್ವದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ಈ ವರ್ಷದ ನವರಾತ್ರಿಯಿಂದ ಜಾರಿಗೆ ಬರಲಿರುವ ಮುಂದಿನ ಪೀಳಿಗೆಯ ಸುಧಾರಣೆಗಳು ಎಂದು ಅವರು ಕರೆದಿದ್ದಾರೆ. “ಈಗ ಜಿಎಸ್‌ಟಿ ಇನ್ನೂ ಸರಳವಾಗಿದೆ. ಕೇವಲ 5% ಮತ್ತು 18% ಈ ಎರಡು ಸ್ಲ್ಯಾಬ್‌ಗಳು ಉಳಿದಿವೆ. ಇದು ಪ್ರತಿಯೊಬ್ಬ ನಾಗರಿಕರ ವ್ಯವಹಾರಕ್ಕೆ ಸುಲಭವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ದಸರಾಗೆ ಮೋದಿ ಸರ್ಕಾರದ ಉಡುಗೊರೆ; ನೂತನ ಜಿಎಸ್​ಟಿಯಿಂದ ಈ ವಸ್ತುಗಳ ಬೆಲೆ ಇಳಿಕೆ

ಜಿಎಸ್‌ಟಿ ಕೌನ್ಸಿಲ್ 12% ಮತ್ತು 28% ಸ್ಲ್ಯಾಬ್‌ಗಳನ್ನು ರದ್ದುಗೊಳಿಸಿತು. 5% ಮತ್ತು 18% ದರಗಳನ್ನು ಮಾತ್ರ ಉಳಿಸಿಕೊಂಡಿತು. ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ 2017ರಲ್ಲಿ ಜಿಎಸ್ಟಿ ಪರಿಚಯಿಸಿದ ನಂತರದ ಈ ಬದಲಾವಣೆಗಳು ಮಹತ್ವದ್ದಾಗಿದೆ. ಇದು ಮಧ್ಯಮವರ್ಗದವರಿಗೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಈ ಕ್ರಮದಿಂದಾಗಿ ಸಾಕಷ್ಟು ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಅಗತ್ಯ ವಸ್ತುಗಳು, ವೈಯಕ್ತಿಕ ಆರೈಕೆ ವಸ್ತುಗಳು, ರೆಸ್ಟೋರೆಂಟ್ ಊಟ, ಪ್ರಯಾಣ, ಗ್ಯಾಜೆಟ್‌ಗಳು ಮತ್ತು ಆಟೋಮೊಬೈಲ್‌ಗಳು ನೂತನ ಜಿಎಸ್​ಟಿ ದರದಿಂದಾಗಿ ಇನ್ಮುಂದೆ ಹೆಚ್ಚು ಕೈಗೆಟುಕುತ್ತವೆ.


ಇದನ್ನು ಐತಿಹಾಸಿಕ ಕ್ಷಣ ಎಂದು ಕರೆದ ಪ್ರಧಾನಿ ಮೋದಿ, ಸರಳೀಕೃತ ರಚನೆಯು ನಾಗರಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಲ್ಲದೆ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.


ಇದನ್ನೂ ಓದಿ: ಜನರಿಗೆ ಗುಡ್, ರಾಜ್ಯಕ್ಕೆ ಬ್ಯಾಡ್ ನ್ಯೂಸ್! ನೂತನ ಜಿಎಸ್​ಟಿಯಿಂದ ಕರ್ನಾಟಕಕ್ಕೆ 70 ಸಾವಿರ ಕೋಟಿ ನಷ್ಟದ ಅಂದಾಜು

“8 ವರ್ಷಗಳ ಹಿಂದೆ GST ಜಾರಿಗೆ ತಂದಾಗ ಹಲವು ದಶಕಗಳ ಕನಸು ನನಸಾಯಿತು. ಮೋದಿ ಪ್ರಧಾನಿಯಾದ ನಂತರ ಈ ಚರ್ಚೆ ಪ್ರಾರಂಭವಾಗಲಿಲ್ಲ. ಈ ಚರ್ಚೆಗಳು ಹಿಂದೆಯೂ ನಡೆಯುತ್ತಿದ್ದವು, ಆದರೆ ಯಾವುದೇ ಕೆಲಸ ಎಂದಿಗೂ ಆಗಲಿಲ್ಲ” ಎಂದು ಹಿಂದಿನ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ