ಹಳೇ ದ್ವೇಷ ಸಾವಿನಲ್ಲಿ ಅಂತ್ಯ; ರೋಹಿಣಿ ಕೋರ್ಟ್​​ನಲ್ಲಿ ಹತ್ಯೆಯಾದ ಗ್ಯಾಂಗ್​​ಸ್ಟರ್ ಜಿತೇಂದರ್ ಗೋಗಿ ಯಾರು?

ಹಳೇ ದ್ವೇಷ ಸಾವಿನಲ್ಲಿ ಅಂತ್ಯ; ರೋಹಿಣಿ ಕೋರ್ಟ್​​ನಲ್ಲಿ ಹತ್ಯೆಯಾದ ಗ್ಯಾಂಗ್​​ಸ್ಟರ್ ಜಿತೇಂದರ್ ಗೋಗಿ ಯಾರು?
ನ್ಯಾಯಾಲಯದಲ್ಲಿ ಶೂಟೌಟ್

Jitender Maan alias Gogi: ಪೊಲೀಸರ ಪ್ರಕಾರ, ಗೋಗಿ ಮತ್ತು ಆತನ ಎದುರಾಳಿ ಸುನಿಲ್ ಅಲಿಯಾಸ್ ಟಿಲ್ಲು ವರ್ಷಗಳಿಂದ ಅಲಿಪುರ ಮತ್ತು ಸೋನಿಪತ್‌ನಲ್ಲಿ ಸುಲಿಗೆ ದಂಧೆಗಳನ್ನು ನಡೆಸುತ್ತಿದ್ದರು. ಈ ಎರಡು ಗುಂಪುಗಳ ನಡುವಿನ ನಿರಂತರ ಜಗಳವು ಸಾವಿನಲ್ಲೇ ಕೊನೆಯಾಗುತ್ತಿತ್ತು

TV9kannada Web Team

| Edited By: Rashmi Kallakatta

Sep 24, 2021 | 4:17 PM


ದೆಹಲಿ: ಗ್ಯಾಂಗ್​​ಸ್ಟರ್  ಜಿತೇಂದರ್ ಮಾನ್ ಅಲಿಯಾಸ್ ಗೋಗಿ (Jitender Maan alias Gogi)ಅವರನ್ನು ಶುಕ್ರವಾರ ಮಧ್ಯಾಹ್ನ ರೋಹಿಣಿ ನ್ಯಾಯಾಲಯದೊಳಗೆ ಜೈಲಿನಲ್ಲಿದ್ದ ಗ್ಯಾಂಗ್ ಸ್ಟರ್ ಸುನೀಲ್ ಅಲಿಯಾಸ್ ಟಿಲ್ಲು ತಾಜಪುರಿಯಾ (Sunil alias Tillu Tajpuriya)  ನೇತೃತ್ವದ ಎದುರಾಳಿ ತಂಡದ ಇಬ್ಬರು ಸಶಸ್ತ್ರ ದಾಳಿಕೋರರು ಹತ್ಯೆ ಮಾಡಿದ್ದಾರೆ. ಗೋಗಿ ಜೊತೆಗಿದ್ದ ವಿಶೇಷ ಸೆಲ್​​ನ ಕೌಂಟರ್ ಇಂಟೆಲಿಜೆನ್ಸ್ ತಂಡದ ಸದಸ್ಯರು ದುಷ್ಕರ್ಮಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ವಕೀಲರ ವೇಷದಲ್ಲಿ ಬಂದಿದ್ದ ಇಬ್ಬರನ್ನು ಹತ್ಯೆಗೈದಿದ್ದಾರೆ. ಗೋಗಿಗೆ ಐದು-ಆರು ಬುಲೆಟ್ ಗಾಯಗಳಾಗಿವೆ ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಎದುರಾಳಿಗಳ ಗುಂಡಿಗೆ ಬಲಿಯಾದ ಗೋಗಿ
ಕೆಲವು ತಿಂಗಳ ಹಿಂದೆ ಗೋಗಿಯ ಸಹವರ್ತಿ ಕುಲದೀಪ್ ಅಲಿಯಾಸ್ ಫಜ್ಜನನ್ನು ಕರ್ಕಾರ್ಡೂಮ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಅಂದಿನಿಂದ ಕೌಂಟರ್ ಇಂಟೆಲಿಜೆನ್ಸ್ ತಂಡವು ಗೋಗಿ ಮತ್ತು ಆತನ ಸಹಚರರು ನ್ಯಾಯಾಲಯದ ವಿಚಾರಣೆಗೆ  ಬರುವಾಗ ಜತೆಗಿರುತ್ತಿತ್ತು.

ಇದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ, ಗೋಗಿ ಮತ್ತು ಟಿಲ್ಲು ಗ್ಯಾಂಗ್‌ನ ಸದಸ್ಯರಾದ ಸುನಿಲ್ ಮಾನ್ ಇಬ್ಬರೂ ನ್ಯಾಯಾಲಯ ಸಂಖ್ಯೆ 207 ರಲ್ಲಿ ಖುದ್ದು ಹಾಜರಾಗಬೇಕಿತ್ತು. ಉತ್ತರ ಶ್ರೇಣಿಯ ಸ್ಪೆಷಲ್ ಸೆಲ್ ತಂಡವು ಸುನೀಲ್ ಮಾನ್ ಜೊತೆಗಿದ್ದರು, ಅವರು ಗೋಗಿಗಿಂತ ಅರ್ಧ ಗಂಟೆ ಮೊದಲು ಅಲ್ಲಿಗೆ ಬಂದಿದ್ದರು. ಮಧ್ಯಾಹ್ನ 1.15 ರ ಸುಮಾರಿಗೆ ಗೋಗಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆ ಸಮಯದಲ್ಲಿ, ಇಬ್ಬರು ವಾಂಟೆಡ್ ಕ್ರಿಮಿನಲ್‌ಗಳು ಉತ್ತರಪ್ರದೇಶದ ಬಾಗ್‌ಪತ್ ನಿವಾಸಿ ರಾಹುಲ್ ಮತ್ತು ಬಕ್ಕರ್‌ವಾಲಾ ಗ್ರಾಮದ ಮೋರಿಸ್ ಎಂದು ಗುರುತಿಸಲ್ಪಟ್ಟರು. ಅವರು ವಕೀಲರ ವೇಷದಲ್ಲಿ ಬಂದು ಗೋಗಿ ಮೇಲೆ ಗುಂಡು ಹಾರಿಸಿದರು. ಗೋಗಿಗೆ ಐದರಿಂದ ಆರು ಬುಲೆಟ್ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನ್ಯಾಯಾಲಯದ ಒಳಗೆ “ಸಂಪೂರ್ಣ ಅವ್ಯವಸ್ಥೆ” ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. “ಇಬ್ಬರು ದಾಳಿಕೋರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ” ಎಂದು ಅವರು ಹೇಳಿದರು. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಗೋಗಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಗುಂಡೇಟಿನಿಂದ ಸಾವಿಗೀಡಾದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಗೋಗಿ ಮತ್ತು ಆತನ ಎದುರಾಳಿ ಸುನಿಲ್ ಅಲಿಯಾಸ್ ಟಿಲ್ಲು ವರ್ಷಗಳಿಂದ ಅಲಿಪುರ ಮತ್ತು ಸೋನಿಪತ್‌ನಲ್ಲಿ ಸುಲಿಗೆ ದಂಧೆಗಳನ್ನು ನಡೆಸುತ್ತಿದ್ದರು. ಈ ಎರಡು ಗುಂಪುಗಳ ನಡುವಿನ ನಿರಂತರ ಜಗಳವು ಸಾವಿನಲ್ಲೇ ಕೊನೆಯಾಗುತ್ತಿತ್ತು. ಕಳೆದ ಆರು ವರ್ಷಗಳಲ್ಲಿ, ಎರಡು ಗ್ಯಾಂಗ್‌ಗಳ 10 ಕ್ಕೂ ಹೆಚ್ಚು ಸದಸ್ಯರು ಕೊಲ್ಲಲ್ಪಟ್ಟರು, ಇನ್ನೂ ಅನೇಕರು ಪ್ರಾಣಪಾಯದಿಂದ ಪಾರಾಗಿದ್ದರು.

ತನಿಖೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಗೋಗಿ ಮತ್ತು ಟಿಲ್ಲು ನಡುವಿನ ವೈರತ್ವ ಅವರ ಕಾಲೇಜು ದಿನಗಳ ಹಿಂದಿನದು, ಇಬ್ಬರೂ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದರು ಮತ್ತು ವಿದ್ಯಾರ್ಥಿ ರಾಜಕೀಯದಲ್ಲಿ ಮುಖಾಮುಖಿಯಾಗಿ ಜಗಳವಾಡಿದ್ದರು. 2012ರಲ್ಲಿ ಗೋಗಿ ಮತ್ತು ಆತನ ಸಹಚರರು ಟಿಲ್ಲುವಿನ ಆಪ್ತರಾಗಿದ್ದ ವಿಕಾಸ್ ಮೇಲೆ ಗುಂಡು ಹಾರಿಸಿದಾಗ ವಿವಾದವು ಹಿಂಸಾತ್ಮಕ ತಿರುವು ಪಡೆಯಿತು. 2015ರಲ್ಲಿ, ಸೋನೀಪತ್ ಪೊಲೀಸರು ಟಿಲ್ಲುವನ್ನು ಬಂಧಿಸಿ ಜೈಲಿಗಟ್ಟಿದರು. ಪ್ರಸ್ತುತ, ಟಿಲ್ಲು ಸೋನಿಪತ್ ಜೈಲಿನಲ್ಲಿ ಇದ್ದಾನೆ. ಗೋಗಿಯು ಟಿಲ್ಲುಗೆ ತಕ್ಕ ಉತ್ತರ ನೀಡುವ ಅವಕಾಶವನ್ನು ಹುಡುಕುತ್ತಿದ್ದಾಗ, ಆತನನ್ನು ಹರಿಯಾಣದ ಸಿಐಎ ಸೋನಿಪತ್‌ನಿಂದ ವಶಕ್ಕೆ ಪಡೆದು ದೆಹಲಿ ಪೊಲೀಸರಿಗೆ ಒಪ್ಪಿಸಿತು.
ಪೊಲೀಸರ ಪ್ರಕಾರ, ಗೋಗಿಯು ಟಿಲ್ಲುವನ್ನು ಹತ್ಯೆ ಮಾಡಲು ಕಾದಿದ್ದನು. 2016 ರಲ್ಲಿ ಪೊಲೀಸ್ ಸಿಬ್ಬಂದಿ ಆತನನ್ನು ನ್ಯಾಯಾಲಯದ ವಿಚಾರಣೆಗಾಗಿ ಹರಿಯಾಣ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಆತ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಗೋಗಿ ನಂತರ ಟಿಲ್ಲುವಿನ ಎಲ್ಲಾ ಸಹಚರರನ್ನು ಹತ್ಯೆಮಾಡಿದ್ದು ಕಳೆದ ವರ್ಷ ಗುರ್‌ಗಾಂವ್‌ನಿಂದ ಬಂಧಿಸಲ್ಪಟ್ಟನು.


ಇದನ್ನೂ ಓದಿ: ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ: ಎದುರಾಳಿಯಿಂದ ಗ್ಯಾಂಗ್​​ಸ್ಟರ್ ಜಿತೇಂದರ್ ಗೋಗಿ ಹತ್ಯೆ, 3 ಸಾವು

(Dreaded jailed gangster Jitender Maan alias Gogi shot dead in Rohini court rivalry between Gogi and Tillu)

 

Follow us on

Related Stories

Most Read Stories

Click on your DTH Provider to Add TV9 Kannada