ಜಮ್ಮು ಏರ್​ಫೋರ್ಸ್ ಸ್ಟೇಶನ್​​ನಲ್ಲಿ ಅವಳಿ ಸ್ಫೋಟ ನಡೆಸಲು ಡ್ರೋನ್​ ಬಳಕೆ; ಇಂಥ ಪ್ರಯೋಗ ಇದೇ ಮೊದಲು

| Updated By: Lakshmi Hegde

Updated on: Jun 27, 2021 | 12:06 PM

ಜಮ್ಮು ಏರ್​ಪೋರ್ಟ್​​ನ ತಾಂತ್ರಿಕ ವಲಯದಲ್ಲಿರುವ ಹೆಲಿಪ್ಯಾಡ್​ ಸಮೀಪದಲ್ಲಿ ಈ ಅವಳಿ ಸ್ಫೋಟಗಳು ನಡೆದಿದೆ. ಇದು ಕಡಿಮೆ ಸಾಂದ್ರತೆಯ ಸ್ಫೋಟವಾಗಿದ್ದು ಯಾರದ್ದೂ ಪ್ರಾಣ ಹಾನಿಯಾಗಿಲ್ಲ. ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಏರ್​ಫೋರ್ಸ್ ಸ್ಟೇಶನ್​​ನಲ್ಲಿ ಅವಳಿ ಸ್ಫೋಟ ನಡೆಸಲು ಡ್ರೋನ್​ ಬಳಕೆ; ಇಂಥ ಪ್ರಯೋಗ ಇದೇ ಮೊದಲು
ಬಾಂಬ್​ ಸ್ಫೋಟದಿಂದ ಮೇಲ್ಛಾವಣಿ ಒಡೆದಿರುವುದು
Follow us on

ಜಮ್ಮು ವಿಮಾನನಿಲ್ದಾಣದಲ್ಲಿರುವ ಏರ್​ಫೋರ್ಸ್​ ಸ್ಟೇಶನ್​ ಒಳಗೆ ನಿನ್ನೆ ತಡರಾತ್ರಿ ಅವಳಿ ಸ್ಫೋಟ ಉಂಟಾಗಿದ್ದು, ಒಂದು ಬಾಂಬ್​ ಕಟ್ಟಡದ ಮೇಲ್ಛಾವಣಿಯಿಂದ ಸ್ಫೋಟಗೊಂಡಿದ್ದರೆ, ಇನ್ನೊಂದು ನೆಲದಲ್ಲಿ ಸ್ಫೋಟವಾಗಿದೆ. 5 ನಿಮಿಷಗಳ ಅಂತರದಲ್ಲಿ ನಡೆದ ಈ ಎರಡು ಸ್ಫೋಟಗಳ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಏರ್​ಫೋರ್ಸ್​​ ​ಸ್ಟೇಶನ್​​ನ್ನು ಸ್ಫೋಟಿಸಲು ಡ್ರೋನ್​ ಬಳಸಿದ್ದಾಗಿ ಪ್ರಾಥಮಿಕ ಹಂತದ ತನಿಖೆಯಲ್ಲೇ ಗೊತ್ತಾಗಿದೆ. ಹೀಗೆ ಸ್ಫೋಟಕವನ್ನು ಎಸೆಯಲು ಎದುರಾಳಿ ಪಡೆಯ ಸೈನಿಕರು ಡ್ರೋನ್​ ಬಳಕೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.

ಜಮ್ಮು ಏರ್​ಪೋರ್ಟ್​​ನ ತಾಂತ್ರಿಕ ವಲಯದಲ್ಲಿರುವ ಹೆಲಿಪ್ಯಾಡ್​ ಸಮೀಪದಲ್ಲಿ ಈ ಅವಳಿ ಸ್ಫೋಟಗಳು ನಡೆದಿದೆ. ಇದು ಕಡಿಮೆ ಸಾಂದ್ರತೆಯ ಸ್ಫೋಟವಾಗಿದ್ದು ಯಾರದ್ದೂ ಪ್ರಾಣ ಹಾನಿಯಾಗಿಲ್ಲ. ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಏರ್​ಪೋರ್ಟ್ ಹೊರಗೆ ನಿಲ್ಲಿಸಲಾಗಿದ್ದ ಯುದ್ಧ ವಿಮಾನವನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಈ ಏರ್​ಫೋರ್ಸ್​ ಸ್ಟೇಶನ್​​ನಿಂದ ಭಾರತ-ಪಾಕಿಸ್ತಾನ ಗಡಿ 14 ಕಿಮೀ ದೂರ ಇದೆ. ಈ ಹಿಂದೆ ಡ್ರೋಣ್​​ಗಳನ್ನು ಬಳಸಿ ಭಾರತೀಯ ಭೂಪ್ರದೇಶದ 12 ಕಿಮೀ ಒಳಗೆ ಶಸ್ತ್ರಾಸ್ತ್ರಗಳನ್ನು ಬಿಸಾಡಿದ ಉದಾಹರಣೆಗಳು ಇವೆ. ಅಂದರೆ ಪಾಕಿಸ್ತಾನ ಇಲ್ಲಿ ಜಮ್ಮು-ಕಾಶ್ಮೀರ, ಪಂಜಾಬ್​ಗಳಲ್ಲಿರುವ ಉಗ್ರರಿಗೆ ಡ್ರೋನ್​ ಮೂಲಕ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ. ಹೀಗೆ ಶಸ್ತ್ರಾಸ್ತ್ರ ಪೂರೈಕೆ ಡ್ರೋನ್​ಗಳನ್ನು ಭಾರತೀಯ ಸೇನಾ ಪಡೆಗಳು ಹೊಡೆದು ಉರುಳಿಸಿದ್ದೂ ಇದೆ. ಆದರೆ ಡ್ರೋನ್​ಗಳ ಮೂಲಕ ಸ್ಫೋಟಿಸಿದ್ದು ಇದೇ ಮೊದಲು ಎಂದೂ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಬಗ್ಗೆ ಚರ್ಚಿಸಲು ಹಿರಿಯ ಪೊಲೀಸ್​ ಅಧಿಕಾರಿಗಳು ಮತ್ತು ಭಾರತೀಯ ವಾಯು ಪಡೆ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೀದಿ ಪ್ರಾಣಿಗಳಿಗೆ ಆಸರೆಯಾದ ಕೋಲಾರದ ವ್ಯಕ್ತಿ; ನಾಯಿ, ಕೋತಿಗಳಿಗೆ ನಿತ್ಯ ಆಹಾರ ನೀಡಿ ಪೋಷಣೆ

Published On - 12:06 pm, Sun, 27 June 21