ದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಕೇಂದ್ರ ಆಯವ್ಯಯ ಬಜೆಟ್ ನಿಗದಿಯಂತೆ ಫೆಬ್ರವರಿ 1 ರಂದು ಮಂಡನೆಯಾಗಲುದ್ದು, ಬಜೆಟ್ ಪ್ರತಿಗಳನ್ನು ಮುದ್ರಣ ಮಾಡದೇ ಇರಲು ಸರ್ಕಾರ ನಿರ್ಧರಿಸಿದೆ! ಈ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಿಂದ ಅನುಮತಿಯನ್ನೂ ಪಡೆಯಲಾಗಿದ್ದು, ಸಂಸದರಿಗೆ ಸಾಫ್ಟ್ ಕಾಪಿ ನೀಡುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ಕೊವಿಡ್ ಹರಡುವ ಭಯದಿಂದ ಇಂತಹ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸಮಜಾಯಿಷಿ ನೀಡಿದೆ.
ದೇಶದಲ್ಲಿ 1947ರಿಂದಲೂ ಬಜೆಟ್ ಪ್ರತಿಗಳನ್ನು ಮುದ್ರಿಸುವ ಸಂಪ್ರದಾಯವಿದೆ. ಇಷ್ಟು ವರ್ಷಗಳ ಕಾಲ ಪಾಲಿಸಿಕೊಂಡು ಬಂದಿದ್ದ ಈ ಪರಂಪರೆಯನ್ನು ಕೊರೊನಾ ನಿಮಿತ್ತ ಮೊಟಕುಗೊಳಿಸಲಾಗುತ್ತಿದೆ. ಆಯವ್ಯಯದ ಪ್ರತಿಗಳನ್ನು ಮುದ್ರಿಸಲು ಏಕಕಾಲಕ್ಕೆ 100 ಜನ ಬೇಕಾಗುತ್ತದೆ. ಆದರೆ, ಕೊರೊನಾ ಸಂದರ್ಭದಲ್ಲಿ ಹೀಗೆ ಹೆಚ್ಚು ಜನರನ್ನು ಒಂದೆಡೆ ಸೇರಿಸುವುದು ಸಮಂಜಸವಲ್ಲ ಎಂಬ ಕಾರಣಕ್ಕೆ ಈ ಸಲ ಪೇಪರ್ಲೆಸ್ ಬಜೆಟ್ ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಆಯವ್ಯಯ ಮಂಡಿಸಲಿದ್ದಾರೆ. ಜನವರಿ 29 ರಂದು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದು, ಜನವರಿ 29 ರಂದೇ ಆರ್ಥಿಕ ಸಮೀಕ್ಷೆಯ ವರದಿ ಲೋಕಸಭೆಯಲ್ಲಿ ಮಂಡನೆ ಆಗಲಿದೆ. ಅದಕ್ಕೂ ಮುನ್ನ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆ ಸಭಾಪತಿ ಪೇಪರ್ಲೆಸ್ ಬಜೆಟ್ ಕುರಿತು ಸಂಸದರ ಮನವೊಲಿಸಲಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ; ಬಜೆಟ್ ಅಧಿವೇಶನ ದೈನಂದಿನ ಕಲಾಪ ಅವಧಿ ಮೊಟಕು
Published On - 4:48 pm, Mon, 11 January 21