₹20 ಲಕ್ಷ ಬಹುಮಾನದ ಆಸೆಗೆ ನಕಲಿ ಎನ್ಕೌಂಟರ್: ಸೇನಾ ಕ್ಯಾಪ್ಟನ್ ವಿರುದ್ಧ ಆರೋಪ ಪಟ್ಟಿ
ಕಳೆದ ವರ್ಷ ಜುಲೈ 18ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಮಶಿಪುರದಲ್ಲಿ ನಡೆದ ಎನ್ಕೌಂಟರ್ನಲ್ಲಿ ರಜೌರಿ ಜಿಲ್ಲೆಯ ಇಮ್ತಿಯಾಜ್ ಅಹಮದ್, ಅಬ್ರಾರ್ ಅಹಮದ್ ಮತ್ತು ಮೊಹಮ್ಮದ್ ಇಬ್ರಾರ್ ಎಂಬ ಮೂವರು ಯುವಕರನ್ನು ಹತ್ಯೆ ಮಾಡಿ ಅವರಿಗೆ ಉಗ್ರರೆಂದು ಹಣೆಪಟ್ಟಿ ಕಟ್ಟಲಾಗಿತ್ತು.
ಶ್ರೀನಗರ: ₹ 20 ಲಕ್ಷದ ಬಹುಮಾನ ಹಣ ಪಡೆಯುವ ಆಸೆಯಿಂದ ನಕಲಿ ಎನ್ಕೌಂಟರ್ ನಡೆಸಿದ ಸೇನಾ ಕ್ಯಾಪ್ಟನ್ ಭೂಪಿಂದರ್ ಸಿಂಗ್ ವಿರುದ್ಧ ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದಾರೆ. ಕಳೆದ ವರ್ಷ ಜುಲೈ 18ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಮಶಿಪುರದಲ್ಲಿ ನಡೆದ ಎನ್ಕೌಂಟರ್ನಲ್ಲಿ ರಜೌರಿ ಜಿಲ್ಲೆಯ ಇಮ್ತಿಯಾಜ್ ಅಹಮದ್, ಅಬ್ರಾರ್ ಅಹಮದ್ ಮತ್ತು ಮೊಹಮ್ಮದ್ ಇಬ್ರಾರ್ ಎಂಬ ಮೂವರು ಯುವಕರನ್ನು ಹತ್ಯೆ ಮಾಡಿ ಅವರಿಗೆ ಉಗ್ರರೆಂದು ಹಣೆಪಟ್ಟಿ ಕಟ್ಟಲಾಗಿತ್ತು.
ಸೇನಾ ಕ್ಯಾಪ್ಟನ್ ಭೂಪಿಂದರ್ ಸಿಂಗ್ ಸದ್ಯ ಸೇನಾ ಕಸ್ಟಡಿಯಲ್ಲಿದ್ದು ಅವರನ್ನು ಕೋರ್ಟ್ ಮಾರ್ಷಲ್ಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತನಿಖಾ ತಂಡ ರಜೌರಿ ಜಿಲ್ಲೆಯ ಚೀಫ್ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ 75 ಸಾಕ್ಷಿಗಳ ಹೆಸರು ನಮೂದಿಸಿದೆ. ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿನ ಆರೋಪಿಗಳ ಫೋನ್ ಕರೆಗಳ ಮಾಹಿತಿಯನ್ನೂ ನೀಡಿದೆ. ಭೂಪಿಂದರ್ ಸಿಂಗ್ ಜತೆ ತಬೀಶ್ ನಾಜಿರ್ ಮತ್ತು ಬಿಲಾಲ್ ಅಹ್ಮದ್ ಲೋನ್ ಅವರು ಪ್ರಕರಣದ ಆರೋಪಿಗಳಾಗಿದ್ದಾರೆ ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಬಿಲಾಲ್ ಅಹ್ಮದ್ ಲೋನ್ ಈಗಾಗಲೇ ಮೆಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಎನ್ಕೌಂಟರ್ನಲ್ಲಿ ಹತ್ಯೆಯಾದ ಯುವಕರು ಉಗ್ರರಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾದ ಹಿನ್ನೆಲೆಯಲ್ಲಿ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಸೆಪ್ಟೆಂಬರ್ ತಿಂಗಳಲ್ಲಿ ಸೇನಾಪಡೆ ಆದೇಶಿಸಿತ್ತು. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ (ಎಎಫ್‌ಎಸ್‌ಪಿಎ) ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಸೇನಾಪಡೆ ಮೀರಿದೆ ಎಂಬುದನ್ನು ಮನಗಂಡು ಸೇನಾಪಡೆ ಶಿಸ್ತು ಕ್ರಮಗಳನ್ನು ಕೈಗೊಂಡಿತ್ತು.
ಜಮ್ಮು-ಕಾಶ್ಮೀರ ವಿವಾದಿತ ಎನ್ಕೌಂಟರ್: ಮಗನ ಶವ ಹೂಳಲು ಗುಂಡಿ ತೋಡಿದ ತಂದೆ
Published On - 4:09 pm, Mon, 11 January 21