ಜನವರಿ 16ರ ಬಳಿಕ ಕೊವಿಡ್ ಲಸಿಕೆ ವಿತರಣೆ: ಕೊವ್ಯಾಕ್ಸಿನ್ ಪಡೆಯಲು ಕಾಂಗ್ರೆಸ್ ವಿರೋಧ
ಸಂಕ್ರಾಂತಿ ಬಳಿಕ ಕೊವಿಡ್ ಲಸಿಕೆ ವಿತರಣೆಯಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸೆರಮ್ ಸಂಸ್ಥೆ ಹಾಗೂ ಭಾರತ್ ಬಯೋಟೆಕ್ ಕಂಪೆನಿಗಳ ಕೊವಿಡ್ ಲಸಿಕೆ ಸಂಕ್ರಾಂತಿ ಬಳಿಕ ವಿತರಣೆಯಾಗಲಿದೆ.
ದೆಹಲಿ: ಭಾರತದಲ್ಲಿ ಜನವರಿ 16ರಿಂದ ಕೊವಿಡ್ ಲಸಿಕೆ ವಿತರಣೆಯಾಗಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸೆರಮ್ ಸಂಸ್ಥೆ ಹಾಗೂ ಭಾರತ್ ಬಯೋಟೆಕ್ ಕಂಪೆನಿಗಳ ಕೊವಿಡ್ ಲಸಿಕೆ ಸಂಕ್ರಾಂತಿ ಬಳಿಕ ವಿತರಣೆಯಾಗಲಿದೆ. ಸೆರಮ್ ಸಂಸ್ಥೆ ಹೆಚ್ಚಿನ ಲಸಿಕೆ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಸೆರಮ್, ಈಗಾಗಲೇ 4-5 ಕೋಟಿ ಡೋಸ್ ಲಸಿಕೆ ಸಂಗ್ರಹ ಮಾಡಿಕೊಂಡಿದೆ. ಹೀಗಾಗಿ, ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಲಸಿಕೆ ಹೆಚ್ಚಾಗಿ ವಿತರಣೆ ಮಾಡಲಾಗುವ ಬಗ್ಗೆ ತಿಳಿದುಬಂದಿದೆ.
ಕೊವಿಶೀಲ್ಡ್ ಪೂರೈಕೆ ಬಳಿಕ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಬಳಕೆ ಮಾಡಲಾಗುವುದು ಎಂದು ತಿಳಿಯಲಾಗಿದೆ. ಕೇಂದ್ರ ಸರ್ಕಾರಕ್ಕೆ ಲಸಿಕೆ ಪೂರೈಕೆಯ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಲಸಿಕೆ ಪಡೆಯುವ ಜನರಿಗೆ ಕೂಡ, ಯಾವ ಕಂಪೆನಿ ಲಸಿಕೆ ಎಂದು ತಿಳಿಸಲಾಗುತ್ತದೆ. ಲಸಿಕೆ ಪಡೆದ ವ್ಯಕ್ತಿಗೆ ಇ-ಪ್ರಮಾಣಪತ್ರ ನೀಡಲಾಗುತ್ತದೆ.
ಆದರೆ, ಪಂಜಾಬ್, ಛತ್ತೀಸ್‌ಗಢ ರಾಜ್ಯಗಳಿಂದ ಲಸಿಕೆ ಸ್ವೀಕರಿಸಲು ವಿರೋಧ ವ್ಯಕ್ತವಾಗಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಸ್ವೀಕರಿಸಲು ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗ ಮುಕ್ತಾಯಗೊಂಡಿಲ್ಲ. ಲಸಿಕೆಯ ಸುರಕ್ಷತೆ, ಪರಿಣಾಮಕಾರಿತನದ ಮಾಹಿತಿ ಸಿಕ್ಕಿಲ್ಲ. ಹಾಗಾಗಿ, ಕೊವ್ಯಾಕ್ಸಿನ್ ಲಸಿಕೆ ಬೇಡ ಎಂದು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ವಿರೋಧ ಸೂಚಿಸಿವೆ. ಜೊತೆಗೆ, ಜನವರಿ 16 ರಿಂದ ಕೊರೋನಾ ಲಸಿಕೆ ವಿತರಣೆ ಹಿನ್ನಲೆಯಲ್ಲಿ, ಜನವರಿ 17 ರ ಪೊಲಿಯೋ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಪ್ರಧಾನಿ ಸಭೆಗೆ ಕ್ಷಣಗಣನೆ; ಲಸಿಕೆ ವಿತರಣೆ ಬಗ್ಗೆ ಏನು ಮಾತಾಡ್ತಾರೆ ನಮೋ.. ಹೆಚ್ಚಿದ ಕುತೂಹಲ
Published On - 4:52 pm, Mon, 11 January 21