ನವದೆಹಲಿ: ಭಾರತವನ್ನು ಡಿಜಿಟಲೀಕರಣ ಮಾಡಲು ಪಣ ತೊಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಮೂಲಕ ಹಣ ಪಾವತಿ ಮಾಡುವ ಇ-ರುಪಿ (E-RUPI) ಸೇವೆಗೆ ಇಂದು ಚಾಲನೆ ನೀಡಿದ್ದಾರೆ. ಈಗಾಗಲೇ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ವಾಟ್ಸಾಪ್ ಪೇ ಮುಂತಾದ ಡಿಜಿಟಲ್ ಪೇಮೆಂಟ್ ಆಯ್ಕೆಗಳಿವೆಯಲ್ಲ ಎಂದು ನೀವು ಹುಬ್ಬೇರಿಸಬಹುದು. ಆದರೆ, ಈ ಇ-ರುಪಿ ಬಹಳ ವಿಶೇಷವಾಗಿದ್ದು, ಇದರ ಮೂಲಕ ಇಂಟರ್ನೆಟ್, ಸ್ಮಾರ್ಟ್ಫೋನ್ಗಳು ಇಲ್ಲದೆಯೂ ವೋಚರ್ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿದೆ.
ಇಂದು ಈ ಇ-ರುಪಿ ಸೇವೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಆರಂಭಿಕವಾಗಿ ಈ ಸೇವೆ ಆರೋಗ್ಯಕ್ಕೆ ಸಂಬಂಧಿಸಿದ ಹಣ ಪಾವತಿಗೆ ಅನುಕೂಲವಾಗಲಿದೆ. ಖಾಸಗಿ ಕೇಂದ್ರಗಳಲ್ಲಿ ಹಣ ಪಾವತಿ ಮಾಡಿ ಕೊವಿಡ್ ಲಸಿಕೆ ಪಡೆಯುವವರು, ಅಥವಾ ಯಾರಾದರೂ ತಮ್ಮ ಸುತ್ತಮುತ್ತಲಿನ 100 ಜನರ ಕೊವಿಡ್ ಲಸಿಕೆಗೆ ಸಹಾಯ ಮಾಡುವವರಿದ್ದರೆ ಅವರು ಇ-ರುಪಿ ವೋಚರ್ ನೀಡಬಹುದು. ಆಗ ಆ ವೋಚರ್ನಲ್ಲಿರುವ ಹಣವನ್ನು ಲಸಿಕೆಗೆ ಮಾತ್ರ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಆಹಾರ ವಿತರಣೆ, ಆರೋಗ್ಯ ಸೇವೆಗಳು ಸೇರಿದಂತೆ ಬೇರೆ ವಲಯಗಳಿಗೆ ಈ ಇ-ರುಪಿ ಸೇವೆಯನ್ನು ಅಳವಡಿಕೆ ಮಾಡಲಾಗುವುದು ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರೀಪೇಯ್ಡ್ ಆಗಿರುವ ಇ-ರುಪಿ ವೋಚರ್ಗಳನ್ನು ಗಿಫ್ಟ್ ಕಾರ್ಡ್ಗಳ ರೀತಿ ಬಳಸಬಹುದು. ಕಾರ್ಡ್ನ ಕೋಡ್ ಅನ್ನು ಎಸ್ಎಂಎಸ್ ಮೂಲಕ ಅಥವಾ ಕ್ಯೂ ಆರ್ ಕೋಡ್ ಮೂಲಕ ಶೇರ್ ಮಾಡಬಹುದು. ಸದ್ಯಕ್ಕೆ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಈ ವೋಚರ್ ಅನ್ನು ಬಳಸಲು ಅನುಮತಿ ನೀಡಲಾಗಿದೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ಈ ಡಿಜಿಟಲ್ ಸೇವೆಯನ್ನು ಚಾಲನೆಗೆ ತರಲಾಗಿದೆ. ಈ ವೋಚರ್ ಕೊಟ್ಟ ವ್ಯಕ್ತಿ ಇದನ್ನು ಯಾವ ಉದ್ದೇಶಕ್ಕಾಗ ನೀಡಿದ್ದಾರೋ ಅದಕ್ಕೆ ಮಾತ್ರ ಉಪಯೋಗಿಸಲು ಸಾಧ್ಯವಿರುತ್ತದೆ.
ಸ್ಮಾರ್ಟ್ಫೋನ್ ಇಲ್ಲದವರು ಎಸ್ಎಂಎಸ್ ಅಥವಾ ಕ್ಯೂ ಆರ್ ಕೋಡ್ ಬಳಕೆ ಮಾಡಿ ಹಣವನ್ನು ಪಾವತಿ ಮಾಡುವ ಆಯ್ಕೆ ಇದರಲ್ಲಿದೆ. ಇದರಿಂದ ಇಂಟರ್ನೆಟ್ ವ್ಯವಸ್ಥೆ ಇಲ್ಲದ ಫೋನ್ಗಳನ್ನು ಬಳಸುವವರಿಗೆ ಕೂಡ ಡಿಜಿಟಲ್ ಪೇಮೆಂಟ್ಗೆ ಅನುಕೂಲವಾಗಲಿದೆ. ನೆಟ್ ಬ್ಯಾಂಕಿಂಗ್, ಆನ್ಲೈನ್ ಪೇಮೆಂಟ್ ಆ್ಯಪ್ಗಳನ್ನು ಬಳಸದೆ ಸುಲಭವಾಗಿ ಹಣ ಪಾವತಿ ಮಾಡುವ ಆಯ್ಕೆಯೇ ಇ-ರುಪಿ. ಇದು ಇ-ವೋಚರ್ ಆಧಾರಿತವಾಗಿ ಕಾರ್ಯ ನಿರ್ವಹಿಸಲಿದೆ.
ಹಣಕಾಸು ಸೇವೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದಲ್ಲಿ ಉ-ರುಪಿಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂಗಳಿಗೆ ಇರುವಂತೆ ಇದಕ್ಕೂ ಯುಪಿಐ ಐಡಿ ಇರಲಿದೆ. ಕ್ಯೂಆರ್ ಕೋಟ್ ಅಥವಾ ಎಸ್ಎಂಎಸ್ ಆಧಾರಿತವಾದ ಇ-ವೋಚರ್ ಮೂಲಕ ಮೊಬೈಲ್ ಬಳಕೆದಾರರು ಹಣ ಪಾವತಿ ಮಾಡಬಹುದು.
ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಈ ವೋಚರ್ಗಳನ್ನು ನೀಡಬಹುದು. ಎಸ್ಬಿಐ, ಹೆಚ್ಡಿಎಫ್ಸಿ, ಕೆನರಾ, ಆ್ಯಕ್ಸಿಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಇಂಡಸ್ ಇಂಡ್, ಐಸಿಐಸಿಐ ಬ್ಯಾಂಕ್ಗಳಲ್ಲಿ ಈ ಇ-ರುಪಿ ವ್ಯವಸ್ಥೆಯಿದೆ.
ಇದನ್ನೂ ಓದಿ: e- RUPI: ಪ್ರಧಾನಿ ನರೇಂದ್ರ ಮೋದಿಯಿಂದ ಆಗಸ್ಟ್ 2ಕ್ಕೆ ಇ-ರುಪಿಗೆ ಚಾಲನೆ; ಏನಿದರ ವೈಶಿಷ್ಟ್ಯ ತಿಳಿಯಿರಿ
ಏನಿದು e-RUPI ವೋಚರ್? ಇದರ ಅನುಕೂಲಗಳೇನು? ಯಾವ ಬ್ಯಾಂಕ್ಗಳಲ್ಲಿ ಸಿಗುತ್ತವೆ?
(E RUPI: Prime Minister Narendra Modi Launches E-RUPI Digital Voucher Based Digital Payment System Today)
Published On - 5:18 pm, Mon, 2 August 21