
ನವದೆಹಲಿ, ಸೆಪ್ಟೆಂಬರ್ 30: ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೊಸ ಮತದಾರರ ನೋಂದಣಿಗೆ ಸಂಬಂಧಿಸಿದ ಫಾರಂ 6ರ ಹೆಚ್ಚುವರಿ ಎಸ್‌ಐಆರ್ ಘೋಷಣಾಪತ್ರವನ್ನು ಹಿಂಪಡೆದಿದೆ. ಈ ಕ್ರಮವು ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ರಾಜ್ಯಗಳಲ್ಲಿ ಹೊಸ ಮತದಾರರ ನೋಂದಣಿ ಪ್ರಕ್ರಿಯೆಯನ್ನು ಗಣನೀಯವಾಗಿ ಸರಳಗೊಳಿಸಲಿದೆ. ವಿವಾದಕ್ಕೆ ಕಾರಣವಾಗಿದ್ದ ಈ ಷರತ್ತಿನ ರದ್ದತಿಯು ಸಾರ್ವಜನಿಕರ ಹಾಗೂ ಇತರೆ ಚುನಾವಣಾ ಆಯುಕ್ತರ ಆಕ್ಷೇಪಗಳಿಗೆ ಚುನಾವಣಾ ಆಯೋಗದ ಪ್ರತಿಕ್ರಿಯೆಯಾಗಿದೆ.
ಫಾರಂ 6 ಎನ್ನುವುದು ಭಾರತೀಯ ಚುನಾವಣಾ ಆಯೋಗವು ನಿರ್ದಿಷ್ಟಪಡಿಸಿದ ಅಧಿಕೃತ ಅರ್ಜಿಯಾಗಿದೆ. 18 ವರ್ಷ ತುಂಬಿದ ಅಥವಾ ತುಂಬುತ್ತಿರುವ ಯಾವುದೇ ಅರ್ಹ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಈ ನಮೂನೆಯನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಈ ಅರ್ಜಿಯ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅವಕಾಶವಿದೆ. ಆದರೆ, ಈಸಿಐ ನೆಟ್ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದ ಆನ್‌ಲೈನ್ ಫಾರಂ 6ನಲ್ಲಿ ಚುನಾವಣಾ ಆಯೋಗವು ಹೊಸದೊಂದು ಘೋಷಣಾ ವಿಭಾಗವನ್ನು ಸೇರಿಸಿತ್ತು.
ಈ ವಿಭಾಗದ ಅನ್ವಯ, ಹೊಸದಾಗಿ ನೋಂದಾಯಿಸಿಕೊಳ್ಳುವ ಯುವ ಮತದಾರರು ತಮ್ಮ ಪೋಷಕರು ಅಥವಾ ಅಜ್ಜ ಅಜ್ಜಿಯಂದಿರ ಹೆಸರುಗಳು ಹಿಂದಿನ ಕರಡು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿವೆಯೇ ಇಲ್ಲವೇ ಎಂಬುದರ ಬಗ್ಗೆ ವಿವರಗಳನ್ನು ನೀಡಬೇಕಾಗಿತ್ತು. ಈ ಪ್ರಶ್ನೆಯು ಕಡ್ಡಾಯವಲ್ಲ ಎಂದು ನಮೂದಿಸಿದ್ದರೂ, ಆನ್‌ಲೈನ್‌ನಲ್ಲಿ ಆ ಪ್ರಶ್ನೆಗೆ ಉತ್ತರ ನೀಡದೆ ಇದ್ದರೆ ಅರ್ಜಿ ಪ್ರಕ್ರಿಯೆಯು ಮುಂದಕ್ಕೆ ಸಾಗುತ್ತಿರಲಿಲ್ಲ. ವಾಸ್ತವವಾಗಿ ಇದು ಕಡ್ಡಾಯದ ಸ್ವರೂಪ ಪಡೆದುಕೊಂಡಿತ್ತು. ಇದರಿಂದಾಗಿ ಅನೇಕ ಹೊಸ ಮತದಾರರು ನೋಂದಣಿ ಪ್ರಕ್ರಿಯೆಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗಿತ್ತು, ಅಸಮಾಧಾನ ವ್ಯಕ್ತಪಡಿಸಿದ್ದರು.
ಮತ್ತಷ್ಟು ಓದಿ:
ಈ ಹೆಚ್ಚುವರಿ ಷರತ್ತಿನ ವಿರುದ್ಧ ತೀವ್ರ ಸಾರ್ವಜನಿಕ ಆಕ್ಷೇಪಗಳು ವ್ಯಕ್ತವಾಗಿದ್ದವು. ಅದಷ್ಟೇ ಅಲ್ಲದೆ, ಚುನಾವಣಾ ಆಯೋಗದೊಳಗೆ ಇಬ್ಬರು ಆಯುಕ್ತರು ಈ ನಿಯಮದ ವಿರುದ್ಧ ಧ್ವನಿಯೆತ್ತಿದ್ದರು. ಅವರು ಈ ಪ್ರಕ್ರಿಯೆಯನ್ನು “ಕಾನೂನುಬಾಹಿರ” ಎಂದು ಕರೆದಿದ್ದು, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧವೂ ಆಕ್ಷೇಪಗಳು ವ್ಯಕ್ತವಾಗಿದ್ದವು. “ಈ ರೀತಿ ಎಲ್ಲಾ ಮಾಡಿಬಿಟ್ಟರೆ ಹೆಂಗಾಗುತ್ತೆ? ಏನಿದು? ಈ ಕಾರಣಾಂತರಗಳಿಂದ ಇದು ಈ ಪ್ರಕ್ರಿಯೆನೇ ಸರಿಯಾಗ್ತಾ ಇಲ್ಲ” ಎಂದು ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಬಹಿರಂಗ ವಿರೋಧವು ವಿಷಯವನ್ನು ಮತ್ತಷ್ಟು ಗಂಭೀರಗೊಳಿಸಿದ್ದವು.
ವಿಡಿಯೋ
ಹಲವಾರು ಪ್ರಶ್ನೆಗಳು ಮತ್ತು ವಿರೋಧಗಳು ಎದ್ದ ಹಿನ್ನೆಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗವು ಈ ಫಾರಂ 6ರ ಎಸ್‌ಐಆರ್ ಘೋಷಣಾಪತ್ರವನ್ನು ಹಿಂಪಡೆಯುವ ನಿರ್ಧಾರವನ್ನು ಕೈಗೊಂಡಿದೆ. ಈಸಿಐ ನೆಟ್ ವೆಬ್‌ಸೈಟ್‌ನಿಂದ ಈ ಹೆಚ್ಚುವರಿ ಷರತ್ತನ್ನು ತೆಗೆದುಹಾಕಲಾಗಿದೆ. ಈ ನಿರ್ಧಾರವು ಎಸ್‌ಐಆರ್ ಪ್ರಕ್ರಿಯೆ ಮುಕ್ತಾಯಗೊಂಡ ರಾಜ್ಯಗಳಿಗೆ ಅನ್ವಯವಾಗುತ್ತದೆ. ಅಂತಹ ರಾಜ್ಯಗಳಲ್ಲಿ ಹೊಸ ಮತದಾರರು ಈ ಹೆಚ್ಚುವರಿ ಘೋಷಣಾಪತ್ರವನ್ನು ಸಲ್ಲಿಸಬೇಕಾಗಿಲ್ಲ. ಆದಾಗ್ಯೂ, ಎಸ್‌ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವ ರಾಜ್ಯಗಳಲ್ಲಿ ಮೊದಲಿದ್ದ ಸ್ಥಿತಿಯೇ ಮುಂದುವರೆಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಈ ಕ್ರಮವು ಹೊಸ ಮತದಾರರ ನೋಂದಣಿಯನ್ನು ಸರಳವಾಗಿಸುವುದಲ್ಲದೆ, ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಆಯೋಗವು ಸಾರ್ವಜನಿಕ ಮತ್ತು ಆಂತರಿಕ ಅಭಿಪ್ರಾಯಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಂಡಿರುವುದು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Wed, 30 September 26