ದೆಹಲಿ ಅಬಕಾರಿ ಹಗರಣದಲ್ಲಿ ಕೆಸಿಆರ್​ ಪುತ್ರಿಗೆ ಇಡಿ ಶಾಕ್; ನಾನು ಯಾರಿಗೂ ಹೆದರಲ್ಲ ಎಂದ ಕವಿತಾ

ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ಚುನಾವಣೆ ಬರಲಿದೆ. ಹೀಗಾಗಿ ಮೋದಿ ಬರುವ ಮುನ್ನ ಇಡಿ, ಸಿಬಿಐ ದಾಳಿ ನಡೆಯುತ್ತದೆ. ಈ ಸಂದರ್ಭದಲ್ಲಿ ಇಡಿ, ಸಿಬಿಐ ಮೂಲಕ ಕೇಸ್​ ಹಾಕಿಸುವುದು ಸಾಮಾನ್ಯವಾಗಿದೆ ಎಂದು ಕೆಸಿಆರ್​ ಪುತ್ರಿ ಕವಿತಾ ಹೇಳಿದ್ದಾರೆ.

ದೆಹಲಿ ಅಬಕಾರಿ ಹಗರಣದಲ್ಲಿ ಕೆಸಿಆರ್​ ಪುತ್ರಿಗೆ ಇಡಿ ಶಾಕ್; ನಾನು ಯಾರಿಗೂ ಹೆದರಲ್ಲ ಎಂದ ಕವಿತಾ
ಕೆ. ಕವಿತಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 01, 2022 | 12:25 PM

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದ (Delhi Liquor Policy Scam) ಪ್ರಮುಖ ಆರೋಪಿ ವಿಜಯ್ ನಾಯರ್ ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಇಡಿ ಆರೋಪ ಮಾಡಿದೆ. ಆತ ಈ ಪ್ರಕರಣದಲ್ಲಿ ಶರತ್ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಮಗಳು ಕೆ. ಕವಿತಾ (K Kavitha) ಮತ್ತು ಮಗುಂತ ಶ್ರೀನಿವಾಸುಲು ರೆಡ್ಡಿ ಒಡೆತನದ ಸೌತ್ ಗ್ರೂಪ್ ನಿಂದ 100 ಕೋಟಿ ರೂ.ಗಳಷ್ಟು ಲಂಚ ಪಡೆದಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆಯ ವರದಿಯಲ್ಲಿ ಇದೇ ಮೊದಲ ಬಾರಿಗೆ ತೆಲಂಗಾಣ ಮುಖ್ಯಮಂತ್ರಿ, ಟಿಆರ್ ಎಸ್ ಪಕ್ಷದ ಸಂಸ್ಥಾಪಕ ಚಂದ್ರಶೇಖರ್ ರಾವ್ (KCR) ಪುತ್ರಿ ಕೆ. ಕವಿತಾ ಅವರ ಹೆಸರನ್ನು ಕೂಡ ಪ್ರಸ್ತಾಪಿಸಿದೆ.

ಕವಿತಾ ಅವರು ತೆಲಂಗಾಣದ ವಿಧಾನಪರಿಷತ್ತಿನ ಸದಸ್ಯೆ ಕೂಡ ಆಗಿದ್ದಾರೆ. ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಪುತ್ರಿ ಕವಿತಾಗೆ ಇಡಿ ಶಾಕ್ ಎದುರಾಗಿದ್ದು, ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿ ಕೆಸಿಆರ್ ಪುತ್ರಿ​​ ಕವಿತಾ ಹೆಸರನ್ನು ಇಡಿ ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಎಂಎಲ್​ಸಿ ಹಾಗೂ ಕೆಸಿಆರ್​ ಪುತ್ರಿ ಕವಿತಾ, ನಾನು ತನಿಖೆಗೆ ಸಿದ್ಧಳಿದ್ದೇನೆ. ಯಾರಿಗೂ ಹೆದರುವ ಮಾತೇ ಇಲ್ಲ ಎಂದಿದ್ದಾರೆ. ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ. ಇಡಿ ಅಧಿಕಾರಿಗಳ ತನಿಖೆ ಎದುರಿಸಲು ನಾನು ಸಿದ್ಧಳಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಸಂಸದನಿಗೆ ಚಪ್ಪಲಿಯೇಟು ಕೊಡುವುದಾಗಿ ಕೆಸಿಆರ್​ ಪುತ್ರಿ ಕವಿತಾ ಎಚ್ಚರಿಕೆ

ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ಚುನಾವಣೆ ಬರಲಿದೆ. ಹೀಗಾಗಿ ಮೋದಿ ಬರುವ ಮುನ್ನ ಇಡಿ, ಸಿಬಿಐ ದಾಳಿ ನಡೆಯುತ್ತದೆ. ಈ ಸಂದರ್ಭದಲ್ಲಿ ಇಡಿ, ಸಿಬಿಐ ಮೂಲಕ ಕೇಸ್​ ಹಾಕಿಸುವುದು ಸಾಮಾನ್ಯವಾಗಿದೆ. ತನಿಖಾ ಸಂಸ್ಥೆಗಳನ್ನು ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಡಿ, ಸಿಬಿಐ ದಾಳಿಗೆ ನಾವು ಹೆದರುವುದಿಲ್ಲ. ತೆಲಂಗಾಣ ಜನತೆ ಆಶೀರ್ವಾದ ಇರುವವರೆಗೆ ಯಾರಿಗೂ ಹೆದರುವುದಿಲ್ಲ ಎಂದು ಹೈದರಾಬಾದ್​​ನಲ್ಲಿ ಕವಿತಾ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕೆಸಿಆರ್‌ಗೆ ಸವಾಲು; ದೇವಸ್ಥಾನದಲ್ಲಿ ಒದ್ದೆ ಬಟ್ಟೆಯಲ್ಲಿ ಪ್ರತಿಜ್ಞೆ ಮಾಡಿದ ತೆಲಂಗಾಣ ಬಿಜೆಪಿ ಮುಖ್ಯಸ್ಥ

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕವಿತಾ, ‘ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಪ್ರಧಾನಿ ಮೋದಿಯವರಿಗಿಂತ ಮೊದಲು ಇಡಿ ಬರುತ್ತದೆ ಎಂದು ಪ್ರತಿ ಮಗುವಿಗೂ ಗೊತ್ತಿದೆ. ನೀವು ನಮ್ಮನ್ನು ಕಂಬಿಯ ಹಿಂದೆ ಹಾಕಬಹುದು. ಆದರೆ ನಾವು ಇನ್ನೂ ಜನರಿಗಾಗಿ ಕೆಲಸ ಮಾಡುತ್ತೇವೆ. ಇಂತಹ ಚೀಪ್ ತಂತ್ರಗಳನ್ನು ಬಿಜೆಪಿ ಬಿಡಬೇಕು. ತೆಲಂಗಾಣದಲ್ಲಿ ಟಿಆರ್‌ಎಸ್ ಸರ್ಕಾರ ಸುಗಮವಾಗಿ ಸಾಗುತ್ತಿದೆ. ನಮ್ಮ ಸರ್ಕಾರವನ್ನು ಉರುಳಿಸುವ ಬಿಜೆಪಿಯ ಷಡ್ಯಂತ್ರವನ್ನು ನಾವು ಬಹಿರಂಗಪಡಿಸಿದ್ದೇವೆ. ಅದಕ್ಕೆ ಜನರೇ ಸಾಕ್ಷಿ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಕುದುರೆ ವ್ಯಾಪಾರದಲ್ಲಿ ವಿಫಲವಾದರೆ, ಅದು ಕೇಂದ್ರೀಯ ಸಂಸ್ಥೆಗಳನ್ನು ಅಂತಹ ರಾಜ್ಯಗಳಲ್ಲಿ ಬಳಸಿಕೊಳ್ಳುತ್ತದೆ ಎಂದು ಕವಿತಾ ಗಂಭೀರ ಆರೋಪ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Thu, 1 December 22