ಮತಾಂತರಕ್ಕೆ ವಿದೇಶದಿಂದ ಹಣಕಾಸಿನ ನೆರವು; ಮೊಹಮ್ಮದ್ ಉಮರ್ ಗೌತಮ್ ನಿವಾಸ, ಶೈಕ್ಷಣಿಕ ಕೇಂದ್ರಗಳ ಮೇಲೆ ಇ.ಡಿ.ದಾಳಿ
ಉತ್ತರಪ್ರದೇಶದ ಲಖನೌನಲ್ಲಿ ಉಮರ್ ಗೌತಮ್ ನಡೆಸುತ್ತಿದ್ದ ಅಲ್ ಹಸನ್ ಶಿಕ್ಷಣ ಮತ್ತು ಕಲ್ಯಾಣ ಪ್ರತಿಷ್ಠಾನ ಹಾಗೂ ಮಾರ್ಗದರ್ಶನ ಶಿಕ್ಷಣ ಮತ್ತು ಕಲ್ಯಾಣ ಸೊಸೈಟಿಯ ಕಚೇರಿಗಳ ಮೇಲೆ ಇ.ಡಿ.ದಾಳಿ ನಡೆಸಿದೆ.
ಕಿವುಡ ಮಕ್ಕಳು ಮತ್ತು ಬಡಜನರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ. ಅದಕ್ಕೆ ವಿದೇಶಗಳಿಂದ ಹಣ ಪೂರೈಕೆಯಾಗುತ್ತಿದೆ ಎಂಬ ಆರೋಪ ಇತ್ತೀಚೆಗೆ ಕೇಳಿಬರುತ್ತಿದೆ. ಈ ಆರೋಪ ಸಂಬಂಧ ಜಾರಿ ನಿರ್ದೇಶನಲಾಯ (ಇ.ಡಿ.) ಇಂದು ದೆಹಲಿ-ಉತ್ತರಪ್ರದೇಶಗಳ ಸುಮಾರು 6ಕಡೆಗಳಲ್ಲಿ ದಾಳಿ ನಡೆಸಿದೆ. ರಾಷ್ಟ್ರರಾಜಧಾನಿ ಮತ್ತು ಅದರ ನೆರೆ ರಾಜ್ಯಗಳಲ್ಲಿ ದಾಳಿ ನಡೆಸಿದ್ದಾಗಿ ಇಡಿ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ.
ಇಸ್ಲಾಮಿಕ್ ದವಾಹ್ ಕೇಂದ್ರದ ಮುಖ್ಯಸ್ಥ, ಈಗಾಗಲೇ ಬಂಧಿತನಾಗಿರುವ ಮೊಹಮ್ಮದ್ ಉಮರ್ ಗೌತಮ್ ಹಾಗೂ ಆತನ ಸಹಚರರು ತುಂಬ ದೊಡ್ಡಮಟ್ಟದಲ್ಲಿ ಮತಾಂತರ ನಡೆಸುತ್ತಿದ್ದರು. ದೇಶಾದ್ಯಂತ ಅವನ ಸಂಸ್ಥೆಯ ಶಾಖೆಗಳಿದ್ದು, ಎಲ್ಲ ಕಡೆಗಳಲ್ಲೂ ಬಲವಂತವಾಗಿ ಮತಾಂತರ ಮಾಡುವ ಕಾರ್ಯಕ್ಕೆ ಇಳಿದಿದ್ದರು. ಈ ಕಾನೂನು ಬಾಹಿರ ಮತಾಂತರ ಕಾರ್ಯ ನಡೆಸಲು ಉಮರ್ ಗೌತಮ್ನ ಸಂಸ್ಥೆಗೆ ವಿದೇಶಗಳಿಂದ ಅಪಾರ ಪ್ರಮಾಣದಲ್ಲಿ ಹಣ ಸಂದಾಯವಾದ ಬಗ್ಗೆ ದೋಷಾರೋಪಣೆ ಮಾಡುವಂಥ ಹಲವು ದಾಖಲೆಗಳು ಇಂದು ಇ.ಡಿ.ಗೆ ದೊರೆತಿದೆ ಎಂದು ಹೇಳಲಾಗಿದೆ.
ಈ ಇಸ್ಲಾಮಿಕ್ ದಾವಾಹ್ ಕೇಂದ್ರದ ಸ್ಥಾಪಕ ಉಮರ್ ಗೌತಮ್ನನ್ನು ಹಿಂದೆಯೇ ಉತ್ತರ ಪ್ರದೇಶ ಆ್ಯಂಟಿ ಟೆರರ್ ಸ್ಕ್ವಾಡ್ ಬಂಧಿಸಿದೆ. ಈತನ ಸಹಚರ ಮುಫ್ತಿ ಕ್ವಾಜಿ ಜಹಂಗೀರ್ ಅಲಾಂ ಕ್ವಾಸ್ಮಿಯನ್ನೂ ಸಹ ಅರೆಸ್ಟ್ ಮಾಡಲಾಗಿದೆ. ಇವರಿಬ್ಬರೂ ದೆಹಲಿಯ ಜಾಮಿಯಾ ನಗರ ನಿವಾಸಿಗಳಾಗಿದ್ದರು. ಇವರ ಸಂಘಟನೆಗೆ ಪಾಕಿಸ್ತಾನದ ಗುಪ್ತಚರ ದಳ (ISI) ಮತ್ತು ಬೇರೆ ಕೆಲವು ವಿದೇಶಿ ಏಜೆನ್ಸಿಗಳು ಹಣ ಸಂದಾಯ ಮಾಡುತ್ತಿವೆ. ಧಾರ್ಮಿಕ ಮತಾಂತರಕ್ಕೆಂದೇ ಹಣಕಾಸಿನ ನೆರವು ನೀಡುತ್ತಿವೆ ಎಂದು ಪೊಲೀಸರು ಹೇಳಿದ್ದರು.
ಇಂದು ದೆಹಲಿಯಲ್ಲಿರುವ ಇಸ್ಲಾಮಿಕ್ ದವಾಹ್ ಕೇಂದ್ರ, ಮೊಹಮ್ಮದ್ ಉಮರ್ ಗೌತಮ್ ಮತ್ತು ಮುಫ್ತಿ ಕ್ವಾಜಿ ಜಹಂಗೀರ್ ಕ್ವಾಸ್ಮಿ ನಿವಾಸಗಳ ಮೇಲೆ ಇ.ಡಿ.ರೇಡ್ ಮಾಡಿದೆ. ಉತ್ತರಪ್ರದೇಶದ ಲಖನೌನಲ್ಲಿ ಉಮರ್ ಗೌತಮ್ ನಡೆಸುತ್ತಿದ್ದ ಅಲ್ ಹಸನ್ ಶಿಕ್ಷಣ ಮತ್ತು ಕಲ್ಯಾಣ ಪ್ರತಿಷ್ಠಾನ ಹಾಗೂ ಮಾರ್ಗದರ್ಶನ ಶಿಕ್ಷಣ ಮತ್ತು ಕಲ್ಯಾಣ ಸೊಸೈಟಿಯ ಕಚೇರಿಗಳ ಮೇಲೆ ಇ.ಡಿ.ದಾಳಿ ನಡೆಸಿದೆ. ಈ ಪ್ರಕರಣವನ್ನು ಉತ್ತರ ಪ್ರದೇಶ ಉಗ್ರ ನಿಗ್ರಹ ದಳ ಬೇಧಿಸಿ, ಆರೋಪಿಗಳನ್ನು ಅರೆಸ್ಟ್ ಮಾಡಿದೆ. ಅದರ ಬೆನ್ನಲ್ಲೇ ಅಕ್ರಮ ಹಣವರ್ಗಾವಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯ ಉಮರ್ ಗೌತಮ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಳಿವಯಸ್ಸಿನಲ್ಲೂ ಓಡಾಡಿ ಕೆಲಸ ಮಾಡುತ್ತಿದ್ದಾರೆ: ವಿನಯ್ ಗುರೂಜಿ
ED conducted raids on six places in Delhi and Uttar Pradesh in connection with forcibly converted Case