ಸಿಧಿ: ಮಧ್ಯಪ್ರದೇಶದ (Madhya Pradesh) ಸಿಧಿ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಪತ್ರಕರ್ತರು (Journalist) ಸೇರಿದಂತೆ 8 ಮಂದಿಯನ್ನು ಅರೆಬೆತ್ತಲೆಯಾಗಿ ನಿಲ್ಲಿಸಿರುವ ಚಿತ್ರವು ವೈರಲ್ ಆದ ನಂತರ “ಆತ್ಮಹತ್ಯೆಯಿಂದ ಸಾಯುವ ಯಾವುದೇ ಸಂದರ್ಭಗಳನ್ನು ತಪ್ಪಿಸಲು” ಅವರನ್ನು ಒಳ ಉಡುಪಿನಲ್ಲಿ ನಿಲ್ಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರಲ್ಲಿ ಮಾತನಾಡಿದ ಎಸ್‌ಎಚ್‌ಒ ಮನೋಜ್ ಸೋನಿ, “ಎಲ್ಲರೂ ಪತ್ರಕರ್ತರು ಎಂದು ಹೇಳುವ ಫೋಟೋ ವೈರಲ್ ಆಗುತ್ತಿದೆ. ಅವರೆಲ್ಲರೂ ಪತ್ರಕರ್ತರಲ್ಲ, ಅವರಲ್ಲಿ ಒಬ್ಬರು ಮಾತ್ರ ಯೂಟ್ಯೂಬರ್ (Youtuber) ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಉಳಿದವರು ಆರೋಪಿಯ ಸ್ನೇಹಿತರು ಮತ್ತು ಸಂಬಂಧಿಕರು ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ “ಪ್ರಸಿದ್ಧ ವ್ಯಕ್ತಿಗಳು ಮತ್ತು ರಾಜಕಾರಣಿಗಳನ್ನು ನಿಂದನೆ” ಮಾಡಿದ್ದಕ್ಕಾಗಿ ನೀರಜ್ ಕುಂದರ್ ಎಂದು ಗುರುತಿಸಲಾದ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು. ನಂತರ ಬಂಧನ ಖಂಡಿಸಿ ಪತ್ರಕರ್ತನೆಂದು ಹೇಳಿಕೊಂಡಿರುವ ಯೂಟ್ಯೂಬರ್ ಕನಿಷ್ಕ್ ತಿವಾರಿ ಸೇರಿದಂತೆ ಸುಮಾರು 30 ಜನರ ಗುಂಪು ಪ್ರತಿಭಟನೆ ನಡೆಸಿತು. “ಸೋಷಿಯಲ್ ಮೀಡಿಯಾದಲ್ಲಿ ನಕಲಿ ಐಡಿಯಿಂದ ಖ್ಯಾತನಾಮರನ್ನು, ರಾಜಕೀಯ ವ್ಯಕ್ತಿಗಳನ್ನು ಮತ್ತು ಮಹಿಳೆಯರನ್ನು ನಿಂದನೆ ಮಾಡಿದ್ದ ನೀರಜ್ ಕುಂದರ್ ವಿರುದ್ಧ ಕೆಲವು ದಿನಗಳ ಹಿಂದೆ ಎಫ್‌ಐಆರ್ ದಾಖಲಿಸಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು ಜೈಲಿಗೆ ಕಳುಹಿಸಲಾಗಿದೆ. ಇದನ್ನು ವಿರೋಧಿಸಿ, ಅವರ ಸ್ನೇಹಿತರು ಮತ್ತು ಕುಟುಂಬದವರು ಸುಮಾರು 30 ಸಂಖ್ಯೆಯಲ್ಲಿ ‘ಧರಣಿ’ ಕುಳಿತು ಅವರ ಬಂಧನದ ವಿರುದ್ಧ ಪ್ರತಿಭಟಿಸಿದ್ದರು ಎಂದು ಎಸ್ಎಚ್ಒ ಹೇಳಿದ್ದಾರೆ.
ಯೂಟ್ಯೂಬರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅವರು ಪೊಲೀಸರು ಮತ್ತು ಆಡಳಿತದ ವಿರುದ್ಧ ಪ್ರತಿಭಟಿಸಲು ಜನರನ್ನು ಪ್ರಚೋದಿಸುತ್ತಿದ್ದರು ಎಂದಿದ್ದಾರೆ ಸೋನಿ. ವೈರಲ್ ಚಿತ್ರದ ಬಗ್ಗೆ ಕೇಳಿದಾಗ, ಪೊಲೀಸ್ ಅಧಿಕಾರಿಗಳು ಪತ್ರಕರ್ತರನ್ನು ವಿವಸ್ತ್ರಗೊಳಿಸಿದ್ದಾರೆ ಎಂಬ ಮಾಹಿತಿಯು ಸುಳ್ಳು. ಒಳಉಡುಪಿನಲ್ಲಿ ಅವರನ್ನು ನಿಲ್ಲಿಸಲಾಗಿದೆ. ಬಟ್ಟೆಯಿದ್ದರೆ ಅವರು ಅದನ್ನುಪಯೋಗಿಸಿ ಆತ್ಮಹತ್ಯೆ ಮಾಡಿಕೊಂಡರೆ? ಈ ನಿಟ್ಟಿನಲ್ಲಿ ಅವರನ್ನು ಅರೆಬೆತ್ತಲೆ ಮಾಡಲಾಗಿದೆ ಎಂದಿದ್ದಾರೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸೇರಿದಂತೆ ಎಂಟು ಮಂದಿ ತಮ್ಮ ಉಡುಪುಗಳನ್ನು ಕಳಚಿ ಒಳ ಉಡುಪಿನಲ್ಲಿ ನಿಂತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಧ್ಯಪ್ರದೇಶ ಪೊಲೀಸರು ಗುರುವಾರ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ.
“ಉಪವಿಭಾಗೀಯ ಪೊಲೀಸ್ ಅಧಿಕಾರಿ ಗಾಯತ್ರಿ ತಿವಾರಿ ಅವರು ಈ ವಿಷಯದ ಬಗ್ಗೆ ವಿಚಾರಣೆ ನಡೆಸುತ್ತಾರೆ ಮತ್ತು ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಅಪರಾಧಿಗಳು ಮಾಡಿದ ಅಪರಾಧವನ್ನು ಲೆಕ್ಕಿಸದೆಯೇ, ಅಂತಹ ಕ್ರಮ (ವಿವಸ್ತ್ರಗೊಳಿಸುವಿಕೆ) ಸ್ವೀಕಾರಾರ್ಹವಲ್ಲ” ಎಂದು ಸಿದ್ಧಿ ಎಸ್ಪಿ ಮುಖೇಶ್ ಶ್ರೀವಾಸ್ತವ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಈ ಫೋಟೊ ಏಪ್ರಿಲ್ 2 ರಂದು ಕ್ಲಿಕ್ ಮಾಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ “ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ವಿರುದ್ಧ ವರದಿ ಮಾಡಿದ್ದಕ್ಕಾಗಿ ಯೂಟ್ಯೂಬ್ ಪತ್ರಕರ್ತರನ್ನು ಪೊಲೀಸ್ ಠಾಣೆಯಲ್ಲಿ ವಿವಸ್ತ್ರಗೊಳಿಸಲಾಯಿತು ಎಂಬ ಬರಹದೊಂದಿದೆ ಇದನ್ನು ಶೇರ್ ಮಾಡಲಾಗಿದೆ.
ಬಿಜೆಪಿ ಶಾಸಕ ಮತ್ತು ಅವರ ಕುಟುಂಬಕ್ಕೆ ಮಾನಹಾನಿ ಮಾಡಿದ ಪ್ರಕರಣದಲ್ಲಿ ರಂಗಭೂಮಿ ಕಲಾವಿದ ನೀರಜ್ ಕುಂದರ್ ಅವರನ್ನು ಕೊತ್ವಾಲಿ ಪೊಲೀಸರು ಏಪ್ರಿಲ್ 2 ರಂದು ಬಂಧಿಸಿದ್ದಾರೆ ಎಂದು ಎಸ್ಪಿ ಶ್ರೀವಾಸ್ತವ ಹೇಳಿದ್ದಾರೆ. ಬಿಜೆಪಿ ಶಾಸಕರೊಬ್ಬರು ಮಾರ್ಚ್ 16 ರಂದು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆಯ ಸಮಯದಲ್ಲಿ, ಪೊಲೀಸರು ಪೋಸ್ಟ್‌ಗಳು ಮತ್ತು ಐಪಿ ವಿಳಾಸದ ಕುರಿತು ಫೇಸ್‌ಬುಕ್‌ನಿಂದ ವಿವರಗಳನ್ನು ಕೇಳಿದರು. ತನಿಖೆಯ ನಂತರ ನೀರಜ್ ಕುಂದರ್ ಜೊತೆ ನಂಟು ಇರುವುದು ಕಂಡು ಬಂದಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
MP | Police station in-charge Kotwali Sidhi and a sub-inspector suspended and attached to the Police Lines in connection with the matter where a group of men, including a journalist & YouTuber, was seen only in their underwear inside a police station in a viral photo (in pic). pic.twitter.com/qgapFfo3HP
— ANI (@ANI) April 8, 2022
ಪೊಲೀಸ್ ಠಾಣೆಯೊಳಗೆ 8 ಮಂದಿಯನ್ನು ಒಳ ಉಡುಪಿನಲ್ಲಿ ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಪ್ರಭಾರಿ ಕೊತ್ವಾಲಿ ಸಿಧಿ ಮತ್ತು ಸಬ್ ಇನ್ಸ್ಪೆಕ್ಟರ್ನ್ನು ಅಮಾನತುಗೊಳಿಸಲಾಗಿದೆ.