ಏಲೂರು ನಿಗೂಢ ಕಾಯಿಲೆ: ತನಿಖೆಗೆ ಶಿಸ್ತು ಸಮಿತಿ ರಚಿಸಿದ ಆಂಧ್ರ ಸರ್ಕಾರ

ಅಸ್ವಸ್ಥರಾಗುತ್ತಿರುವ ಬಹುತೇಕರಲ್ಲಿ ಪ್ರಜ್ಞಾಹೀನತೆ, ಮೈನಡುಕ, ನೊರೆ ಉಗುಳುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಂಡಿವೆ.

ಏಲೂರು ನಿಗೂಢ ಕಾಯಿಲೆ: ತನಿಖೆಗೆ ಶಿಸ್ತು ಸಮಿತಿ ರಚಿಸಿದ ಆಂಧ್ರ ಸರ್ಕಾರ
Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 11, 2020 | 7:22 PM

ಏಲೂರು (ಆಂಧ್ರಪ್ರದೇಶ): ನಿಗೂಢ ಕಾಯಿಲೆಯ ಲಕ್ಷಣ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ವಿಜಯವಾಡದಲ್ಲಿ ಸಾವಿಗೀಡಾಗಿದ್ದಾರೆ. ಡಿ.6ರಿಂದ 10ರವರೆಗೆ ಒಟ್ಟು 597 ಮಂದಿಯಲ್ಲಿ ನಿಗೂಢ ಕಾಯಿಲೆಯ ರೋಗ ಲಕ್ಷಣ ಕಾಣಿಸಿಕೊಂಡಿತ್ತು. 515 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಆಂಧ್ರ ಪ್ರದೇಶದ ಸರ್ಕಾರ ಹೇಳಿದೆ.

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ನಿಗೂಢ ಕಾಯಿಲೆಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಆಂಧ್ರ ಸರ್ಕಾರ ಶಿಸ್ತು ಸಮಿತಿಯೊಂದನ್ನು ರೂಪಿಸಿದೆ. ಈ ಸಮಿತಿಯು ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಮಾರ್ಗ ಮತ್ತು ಭವಿಷ್ಯದಲ್ಲಿ ಈ ರೀತಿಯ ರೋಗಗಳು ಕಾಣಿಸಿಕೊಳ್ಳದಂತೆ ತಡೆಯುವ ಕ್ರಮಗಳನ್ನು ಸೂಚಿಸಲಿದೆ. 21 ಸದಸ್ಯರಿರುವ ಈ ಸಮಿತಿಗೆ ರಾಜ್ಯದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿದ್ದು, ಐಎಎಸ್ ಅಧಿಕಾರಿಗಳು ಮತ್ತು ಹಲವಾರು ಸಂಸ್ಥೆಗಳ ವಿಜ್ಞಾನಿಗಳು ಇದ್ದಾರೆ.

ಡಿ.7ರಂದು ಏಲೂರಿನಲ್ಲಿ ವ್ಯಕ್ತಿಯೊಬ್ಬರು ನಿಧನರಾಗಿದ್ದರು. ಆದರೆ ಆ ವ್ಯಕ್ತಿಯ ಸಾವಿಗೆ ನಿಗೂಢ ಕಾಯಿಲೆ ಕಾರಣವಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಸಾವಿಗೀಡಾದ ಒಬ್ಬ ವ್ಯಕ್ತಿಗೆ ಕ್ಷಯ ಮತ್ತು ಇನ್ನೊಬ್ಬರಿಗೆ ಕೋವಿಡ್ ರೋಗ ಬಾಧಿಸಿತ್ತು ಎಂದು ಏಲೂರು ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ.ಎ.ವಿ.ಆರ್. ಮೋಹನ್ ಹೇಳಿದ್ದಾರೆ.

ಗುರುವಾರ ರೋಗ ಲಕ್ಷಣ ಕಾಣಿಸಿಕೊಂಡ 31 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ನಾಲ್ವರ ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಆದರೆ ಇವರಿಗೆ ನಿಗೂಢ ಕಾಯಿಲೆ ಇದೆ ಎಂದು ಅನಿಸುತ್ತಿಲ್ಲ ಎಂದು ಸರ್ಕಾರ ಹೇಳಿದೆ.

ಅಸ್ವಸ್ಥರಾಗುತ್ತಿರುವ ಬಹುತೇಕರಲ್ಲಿ ಪ್ರಜ್ಞಾಹೀನತೆ, ಮೈನಡುಕ, ನೊರೆ ಉಗುಳುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಂಡಿವೆ.

ಏಲೂರು ನಿಗೂಢ ಕಾಯಿಲೆಗೆ ಕಲುಷಿತ ಆಹಾರ ಕಾರಣ: ತನಿಖೆ ನಡೆಸಲಿದ್ದಾರೆ ತಜ್ಞರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada