ನ್ಯಾಯಾಂಗದಲ್ಲಿ ರಾಜಕೀಯ ಪಕ್ಷಪಾತ ಇಲ್ಲದಂತೆ ನೋಡಿಕೊಳ್ಳಿ: ಮಮತಾ ಬ್ಯಾನರ್ಜಿ

|

Updated on: Jun 29, 2024 | 7:17 PM

ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ಕಲ್ಕತ್ತಾ ಹೈಕೋರ್ಟ್ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ,ನ್ಯಾಯಾಂಗವು ಸಾಮಾನ್ಯ ನಾಗರಿಕರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಅವರಿಗೆ ಎಲ್ಲಿ ನ್ಯಾಯ ಸಿಗುತ್ತದೆ? ಯಾವುದೇ ದೌರ್ಜನ್ಯಗಳು ನಡೆದಾಗ, ನ್ಯಾಯಾಂಗದಿಂದ ಮಾತ್ರ ಸಮಸ್ಯೆಯನ್ನು ಪರಿಹರಿಸಬಹುದು ಎಂದು ನಾವು ಬಹಳ ಭರವಸೆಯಿಂದ ಯೋಚಿಸುತ್ತೇವೆ ಎಂದು ಹೇಳಿದ್ದಾರೆ.

ನ್ಯಾಯಾಂಗದಲ್ಲಿ ರಾಜಕೀಯ ಪಕ್ಷಪಾತ ಇಲ್ಲದಂತೆ ನೋಡಿಕೊಳ್ಳಿ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us on

ಕೊಲ್ಕತ್ತಾ ಜೂನ್ 29: ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ (West Bengal)  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee), ನ್ಯಾಯಾಂಗವು ಯಾವುದೇ ರಾಜಕೀಯ ಪಕ್ಷಪಾತದಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ (Supreme Court), ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳ ನ್ಯಾಯಾಧೀಶರಿಗೆ ವಿನಂತಿಸಿದರು. ನಿಮ್ಮೆಲ್ಲರಿಗೂ ನನ್ನ ವಿನಮ್ರ ವಿನಂತಿ. ಇದು ನನ್ನ ಮನವಿ. ದಯವಿಟ್ಟು ನ್ಯಾಯಾಂಗದಲ್ಲಿ ರಾಜಕೀಯ ಪಕ್ಷಪಾತ ಇಲ್ಲದಂತೆ ನೋಡಿಕೊಳ್ಳಿ. ನ್ಯಾಯಾಂಗ ಶುದ್ಧವಾಗಿರಬೇಕು. ಸಂಪೂರ್ಣ ಶುದ್ಧ. ಪ್ರಾಮಾಣಿಕ ಮತ್ತು ಪವಿತ್ರ ಆಗಿರಬೇಕು ಎಂದು ಮಮತಾ ಹೇಳಿದ್ದಾರೆ.

ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ಕಲ್ಕತ್ತಾ ಹೈಕೋರ್ಟ್ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರವರು. ಕಾರ್ಯಕ್ರಮದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಇತರರು ಉಪಸ್ಥಿತರಿದ್ದರು.

ನ್ಯಾಯಾಂಗವು ಸಾಮಾನ್ಯ ನಾಗರಿಕರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಅವರಿಗೆ ಎಲ್ಲಿ ನ್ಯಾಯ ಸಿಗುತ್ತದೆ? ಯಾವುದೇ ದೌರ್ಜನ್ಯಗಳು ನಡೆದಾಗ, ನ್ಯಾಯಾಂಗದಿಂದ ಮಾತ್ರ ಸಮಸ್ಯೆಯನ್ನು ಪರಿಹರಿಸಬಹುದು ಎಂದು ನಾವು ಬಹಳ ಭರವಸೆಯಿಂದ ಯೋಚಿಸುತ್ತೇವೆ. ನ್ಯಾಯಾಂಗವು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಸಹಾಯ ಮಾಡುವ ದೊಡ್ಡ ಸ್ತಂಭ ಎಂದು ನಾವು ಭಾವಿಸುತ್ತೇವೆ ಎಂದು ಮಮತಾ  ಹೇಳಿದ್ದಾರೆ.

ಲೋಕಸಭೆ ಚುನಾವಣೆಯ ಪೂರ್ವದಲ್ಲಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಪ್ರಮುಖ ನಾಯಕರು, ಪಕ್ಷದ ವರಿಷ್ಠರು ಸೇರಿದಂತೆ, ನ್ಯಾಯಾಂಗದ ಒಂದು ವಿಭಾಗವು ಬಿಜೆಪಿ ನಾಯಕರ ಪ್ರಭಾವದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಆಗಾಗ್ಗೆ ಆರೋಪಿಸಿದ್ದರು.

“ಉದ್ಯೋಗ ಕಳೆದುಕೊಂಡ ಎಲ್ಲ ಅರ್ಹ ವ್ಯಕ್ತಿಗಳಿಗೆ ಈ ಸವಾಲಿನ ಸಮಯದಲ್ಲಿ ಟಿಎಂಸಿ ಅವರ ಜತೆ ನಿಲ್ಲುತ್ತದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ಯಾವುದೇ ಅರ್ಹ ಅಭ್ಯರ್ಥಿಗೆ ತೊಂದರೆಯಾಗಲು ನಾವು ಬಿಡುವುದಿಲ್ಲ. ಬಿಜೆಪಿಯಿಂದ ಪ್ರಭಾವಿತವಾಗಿರುವ ನ್ಯಾಯಾಂಗದ ಒಂದು ವಿಭಾಗದ ಈ ನಡೆ ಖಂಡನೀಯ” ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪೂರ್ವ ಮಿಡ್ನಾಪುರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರವು ನೀಡಿದ್ದ ಒಬಿಸಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ನ ಇತ್ತೀಚಿನ ತೀರ್ಪಿನ ಬಗ್ಗೆ ನ್ಯಾಯಾಂಗದ ಮೇಲೆ ದಾಳಿ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರ‍್ಯಾಲಿಯಲ್ಲಿ ಟಿಎಂಸಿಯನ್ನು ತರಾಟೆಗೆ ತೆಗೆದುಕೊಂಡರು.

“ನ್ಯಾಯಾಧೀಶರ ಮೇಲೆ ಈಗ ಗೂಂಡಾಗಳನ್ನು ಬಿಡುತ್ತಾರೆಯೇ ಎಂದು ನಾನು ಟಿಎಂಸಿಯನ್ನು ಕೇಳಲು ಬಯಸುತ್ತೇನೆ. ಟಿಎಂಸಿ ನ್ಯಾಯಾಂಗವನ್ನು ಹೇಗೆ ಹತೋಟಿಗೆ ತರುತ್ತಿದೆ ಎಂಬುದನ್ನು ಇಡೀ ರಾಷ್ಟ್ರವೇ ನೋಡುತ್ತಿದೆ ಎಂದು ಉತ್ತರ 24 ಪರಗಣದಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಮೋದಿ ಹೇಳಿದ್ದರು.

“ನಮ್ಮ ಮುಂದೆ ಬರುವ ಅತ್ಯಂತ ಕೆಟ್ಟ ಕ್ರಿಮಿನಲ್ ಪ್ರಕರಣಗಳಲ್ಲಿ, ನಮ್ಮ ಮುಂದೆ ಒಬ್ಬ ಮನುಷ್ಯ ಇರುತ್ತಾನೆ ಎಂಬುದು ಎಲ್ಲ ನ್ಯಾಯಾಧೀಶರಿಗೆ ತಿಳಿದಿದೆ. ನಾವು ಶಿಕ್ಷೆಯ ಅಧಿಕಾರವನ್ನು ಚಲಾಯಿಸುವಾಗ, ನಾವು ಅದನ್ನು ಸಹಾನುಭೂತಿಯ ಭಾವದಿಂದ ಮಾಡುತ್ತೇವೆ, ಹಾಗೆಯೇ ಅನ್ಯಾಯಕ್ಕೊಳಗಾದ ಸಂತ್ರಸ್ತರ ಕುಟುಂಬಕ್ಕೆ ನಾವು ಕರ್ತವ್ಯ ಪ್ರಜ್ಞೆಯಿಂದ ಮಾಡುತ್ತೇವೆ ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.

“ಸಾಂವಿಧಾನಿಕ ನೈತಿಕತೆಯು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರಿಗೆ ಮಾತ್ರವಲ್ಲ, ಆದರೆ ಜಿಲ್ಲಾ ನ್ಯಾಯಾಂಗವೇ ಆಗಿದೆ. ಸಾಮಾನ್ಯ ನಾಗರಿಕರ ಸಂವಹನವು ಜಿಲ್ಲಾ ನ್ಯಾಯಾಂಗದಿಂದ ಮೊದಲ ಮತ್ತು ಅಗ್ರಗಣ್ಯವಾಗಿ ಪ್ರಾರಂಭವಾಗುತ್ತದೆ. ಸ್ವಾತಂತ್ರ್ಯದ ನಂತರ ಸುಪ್ರೀಂ ಕೋರ್ಟ್ 37,000 ತೀರ್ಪುಗಳನ್ನು ನೀಡಿದೆ. ನಾವು ಸಂವಿಧಾನದಿಂದ ಮಾನ್ಯತೆ ಪಡೆದ ಪ್ರತಿಯೊಂದು ಭಾಷೆಯ ತೀರ್ಪುಗಳನ್ನು ಅನುವಾದಿಸುತ್ತಿದ್ದೇವೆ. ಇಲ್ಲಿಯವರೆಗೆ 51,000 ಅನುವಾದಗಳನ್ನು ಮಾಡಲಾಗಿದೆ ಎಂದು ಸಿಜೆಐ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈ ಹಿಂದೆ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸಲು ಖರ್ಚು ಮಾಡುತ್ತಿದ್ದ ಹಣವನ್ನು ನಿಲ್ಲಿಸಲಾಗಿದೆ ಎಂದು ಬ್ಯಾನರ್ಜಿ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

“ಹಿಂದೆ ಕೇಂದ್ರವು ತ್ವರಿತ ನ್ಯಾಯಾಲಯಗಳಿಗೆ ನೆರವು ನೀಡುತ್ತಿತ್ತು. ಸುಮಾರು ಎಂಟು ವರ್ಷಗಳ ಹಿಂದೆ ಸೌಲಭ್ಯವನ್ನು ಹಿಂತೆಗೆದುಕೊಳ್ಳಲಾಯಿತು. 88 ತ್ವರಿತ ನ್ಯಾಯಾಲಯಗಳನ್ನು ನಡೆಸುತ್ತಿರುವ ಏಕೈಕ ರಾಜ್ಯ ನಮ್ಮದು. ಕನಿಷ್ಠ 55 ಮಹಿಳಾ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಾಗಿವೆ ”ಎಂದು ಅವರು ಹೇಳಿದರು.

ಇದನ್ನೂ ಓದಿ: NEET ವಿವಾದ; ಕಾಂಗ್ರೆಸ್ ಚರ್ಚೆ ಬಯಸುವುದಿಲ್ಲ, ಅವರಿಗೆ ಅವ್ಯವಸ್ಥೆ ಮಾತ್ರ ಬೇಕು: ಧರ್ಮೇಂದ್ರ ಪ್ರಧಾನ್

ನ್ಯಾಯಾಂಗದ ಮೇಲೆ ದಾಳಿ ನಡೆಸುತ್ತಿರುವ ಟಿಎಂಸಿಗೆ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ಟಿಎಂಸಿ ವರಿಷ್ಠರಿಗೆ ತಿರುಗೇಟು ನೀಡಿದೆ.

“ಅವರಿಗೆ ನೈತಿಕ ಹಕ್ಕಿಲ್ಲ. ವರ್ಷವಿಡೀ, ಟಿಎಂಸಿ ನ್ಯಾಯಾಂಗದ ಮೇಲೆ ದೂಷಣೆ ಮತ್ತು ದಾಳಿ ನಡೆಸುತ್ತದೆ. ನ್ಯಾಯಾಧೀಶರ ಮನೆಗಳ  ಗೋಡೆಗಳ ಮೇಲೆ ಅವರ ಮಾನಹಾನಿ ಮಾಡಲು ಪೋಸ್ಟರ್‌ಗಳನ್ನು ಹಾಕಲಾಗಿದೆ. ಸಾರ್ವಜನಿಕ ಹಣದ ವೆಚ್ಚದಲ್ಲಿ ಅಪರಾಧಿಗಳನ್ನು ರಕ್ಷಿಸಲು ಪಕ್ಷವು ಸುಪ್ರೀಂಕೋರ್ಟ್‌ಗೆ ಹೋಗುತ್ತದೆ. ಟಿಎಂಸಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಮತ್ತು ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ