AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEET-UG ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಭಾಗಿ: ಕಾಂಗ್ರೆಸ್ ಆರೋಪ

ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಮತ್ತು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿಂಗ್ ಗೋಹಿಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಗೋಧ್ರಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ಆಧರಿಸಿ ಆರೋಪ ಮಾಡಿದ್ದಾರೆ.

NEET-UG ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಭಾಗಿ: ಕಾಂಗ್ರೆಸ್ ಆರೋಪ
ಶಕ್ತಿಸಿಂಗ್ ಗೋಹಿಲ್
ರಶ್ಮಿ ಕಲ್ಲಕಟ್ಟ
|

Updated on: Jun 29, 2024 | 8:12 PM

Share

ದೆಹಲಿ ಜೂನ್ 29: ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರು,ಜೈ ಜಲರಾಮ್ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರೊಂದಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ) (NEET-UG)ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ (Congress) ಪಕ್ಷ ಆರೋಪಿಸಿದೆ. ಕಾಂಗ್ರೆಸ್ ರಾಜ್ಯಸಭಾ ಸಂಸದ ಮತ್ತು ಗುಜರಾತ್ (Gujarat) ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿಂಗ್ ಗೋಹಿಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಗೋಧ್ರಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ಆಧರಿಸಿ ಆರೋಪ ಮಾಡಿದ್ದಾರೆ.

ಈ ಆರೋಪಗಳು ನೀಟ್ ಪರೀಕ್ಷೆಯ ಕುರಿತು ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಕಳವಳಗಳನ್ನು ತೀವ್ರಗೊಳಿಸುವ ನಿರೀಕ್ಷೆಯಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೊಂಡಿದೆ. ಅವರ ಸಚಿವರು ‘ಸಬ್ ಚಂಗಾ ಸಿ’ (ಎಲ್ಲಾ ಚೆನ್ನಾಗಿದೆ) ಎಂದು ಹೇಳಿದ್ದಾರೆ. ಆದಾಗ್ಯೂ, ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದ ವಿದ್ಯಾರ್ಥಿಗಳ ಪೋಷಕರು ನೀಡಿದ ಹಲವಾರು ಖಾಲಿ ಚೆಕ್‌ಗಳ ಜೊತೆಗೆ ತನಿಖೆಯ ಸಮಯದಲ್ಲಿ ಕೋಟ್ಯಂತರ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೋಧ್ರಾದಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ಡಿವೈಎಸ್ಪಿ ಒಪ್ಪಿಕೊಂಡಿದ್ದಾರೆ ಎಂದು ಗೋಹಿಲ್ ಹೇಳಿದರು.

ಕಾಂಗ್ರೆಸ್ ಸುದ್ದಿಗೋಷ್ಠಿ

ಅಫಿಡವಿಟ್ ಪ್ರಕಾರ, ಒಡಿಶಾ, ಮಹಾರಾಷ್ಟ್ರ, ಗುಜರಾತ್ ಮತ್ತು ಬಿಹಾರದ ವಿದ್ಯಾರ್ಥಿಗಳಿಂದ ಖಾಲಿ ಚೆಕ್‌ಗಳೊಂದಿಗೆ ದೊಡ್ಡ ಮೊತ್ತದ ಹಣವನ್ನು ಮುಂಗಡವಾಗಿ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಆದ್ಯತೆಯ ಪರೀಕ್ಷಾ ಕೇಂದ್ರ ಜಯ ಜಲರಾಮ್ ಶಾಲೆಯನ್ನು ಆಯ್ಕೆ ಮಾಡಲು ಕೇಳಿಕೊಂಡರು. ಇದಕ್ಕಾಗಿ 10 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದೆ. ವಿದ್ಯಾರ್ಥಿಯು ಪ್ರವೇಶ ಪಡೆಯುವ ಕಾಲೇಜಿಗೆ ಅನುಗುಣವಾಗಿ ಮೊತ್ತವು ಬದಲಾಗುವುದರಿಂದ ಖಾಲಿ ಚೆಕ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಗೋಹಿಲ್ ಆರೋಪಿಸಿದ್ದಾರೆ.

ಪೊಲೀಸರು ಹಗರಣದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ರೋಲ್ ಸಂಖ್ಯೆಗಳ ಪಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ. ಹಣ ಪಡೆದವರನ್ನು ಗುರುತಿಸಲು ರೋಲ್ ಸಂಖ್ಯೆಗಳನ್ನು ಕಂದು ಮತ್ತು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ತಾವು ಖಚಿತವಾಗಿರುವ ಉತ್ತರಗಳನ್ನು ಮಾತ್ರ ಭರ್ತಿ ಮಾಡಲು ಸೂಚಿಸಲಾಗಿದೆ. ಪರೀಕ್ಷೆಯ ನಂತರ, ಬೇರೆಯವರು ತಮ್ಮ OMR ಶೀಟ್‌ಗಳಲ್ಲಿ ಉಳಿದ ಉತ್ತರಗಳನ್ನು ಸೀಲ್ ಮಾಡುವ ಮೊದಲು ಪೂರ್ಣಗೊಳಿಸುತ್ತಾರೆ ಎಂದು ಗೋಹಿಲ್ ಹೇಳಿದ್ದಾರೆ.  ಜೈ ಜಲರಾಮ್ ಎಜುಕೇಶನ್ ಟ್ರಸ್ಟ್‌ನಲ್ಲಿ ಪರೀಕ್ಷಾ ಕೇಂದ್ರದ ಉಪ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ ಮತ್ತು ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದ ಪ್ರಮುಖ ಆರೋಪಿ ತುಷಾರ್ ಭಟ್ ಹೆಸರು ಹಗರಣದಲ್ಲಿದೆ. ಮತ್ತೊಬ್ಬ ಆರೋಪಿ ಪುರುಷೋತ್ತಮ್ ಮಹಾವೀರ್ ಪ್ರಸಾದ್, ಗೋಧ್ರಾ ಜಿಲ್ಲೆಯ ನೀಟ್‌ನ ನಗರ ಸಂಯೋಜಕ ಮತ್ತು ಅದೇ ಪರೀಕ್ಷಾ ಕೇಂದ್ರದ ಪ್ರಾಂಶುಪಾಲರಾಗಿದ್ದಾರೆ. ಉತ್ತರ ಪತ್ರಿಕೆಗಳನ್ನು ಸೀಲ್ ಮಾಡುವ ಜವಾಬ್ದಾರಿ ಇವರಿಬ್ಬರ ಮೇಲಿತ್ತು.

ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಪಟ್ಟಣದ ಜಲರಾಮ್ ಶಾಲೆಯ ಶಾಲಾ ಪ್ರಾಂಶುಪಾಲರು ಸೇರಿದಂತೆ ಐವರನ್ನು ಈ ತಿಂಗಳ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ನೀಟ್-ಯುಜಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಹಾಯ ಮಾಡಲು ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿತ್ತು.

ಬಂಧಿತರಾದ ಪರಶುರಾಮ್ ಬಿಂದನಾಥ್, ಬಿನೋದ್ ಆನಂದ್ ಮತ್ತು ಆರಿಫ್ ವಹೋರಾ ಅವರು ಪೋಷಕರನ್ನು ಭೇಟಿ ಮಾಡಿ ಹಣ ಮತ್ತು ಖಾಲಿ ಚೆಕ್‌ಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊತ್ತಿದ್ದರು. ಅವರ ಮನೆಗಳ ಮೇಲೆ ನಡೆದ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಮತ್ತು ಖಾಲಿ ಚೆಕ್‌ಗಳು ಪತ್ತೆಯಾಗಿವೆ. ವಹೋರಾ ಅವರು ಬಿಜೆಪಿಯ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: NEET ವಿವಾದ; ಕಾಂಗ್ರೆಸ್ ಚರ್ಚೆ ಬಯಸುವುದಿಲ್ಲ, ಅವರಿಗೆ ಅವ್ಯವಸ್ಥೆ ಮಾತ್ರ ಬೇಕು: ಧರ್ಮೇಂದ್ರ ಪ್ರಧಾನ್

ಅವರು ಉತ್ತರ ಪತ್ರಿಕೆಗಳನ್ನು ಪೆಟ್ಟಿಗೆಗಳಲ್ಲಿ ಸೀಲ್ ಮಾಡಿ ನಂತರ ಸೀಲುಗಳನ್ನು ತೆರೆದರು. ಉತ್ತರಗಳನ್ನು ಗುರುತಿಸಿದರು ಮತ್ತು ನಂತರ ರೆಸ್ಟೋರೆಂಟ್ ನಲ್ಲಿ ಅದನ್ನು ಮತ್ತೆ ಸೀಲ್ ಮಾಡಿದರು. ಅದಕ್ಕೆ ಸಿಸಿಟಿವಿ ದೃಶ್ಯ ಸಾಕ್ಷ್ಯವಿದೆ ಎಂದು ಗೋಹಿಲ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ