ಸಮಾನ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದಾಕ್ಷಣ ಸಮಾನ ವೇತನ ತತ್ವವನ್ನು ಅನ್ವಯಿಸಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ. ಪೂರ್ವ ಮಧ್ಯ ರೈಲ್ವೆಯ ಗ್ರೇಡ್ 2 ಪ್ರೈವೇಟ್ ಸೆಕ್ರಟರಿ ಹುದ್ದೆಯು ಕೇಂದ್ರ ಸಚಿವಾಲಯದ ಸ್ಟೆನೊಗ್ರಾಫರ್ ಸೇವೆಗೆ ಸರಿಸಮಾನದ ಹುದ್ದೆಯಾಗಿದೆ. ಹೀಗಾಗಿ ಅಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಗುತ್ತಿರುವ ವೇತನ ನಮಗೂ ಸಿಗಬೇಕು ಎಂಬ ಅರ್ಜಿದಾರರ ವಾದವನ್ನು ಆಲಿಸಿದ ವೇತನ ಆಯೋಗದ ಶಿಫಾರಸುಗಳಲ್ಲಿ ಮಧ್ಯಪ್ರವೇಶಿಸಲು ಆಗದು ಎಂದು ಹೇಳಿತು.
6ನೇ ವೇತನ ಆಯೋಗದ ವರದಿಯನ್ನು ಪ್ರಸ್ತಾಪಿಸಿದ ನ್ಯಾಯಾಲಯವು, ವೇತನದ ಶಿಫಾರಸು ಮಾಡುವಾಗಲೇ ಆಯೋಗವು ಸಚಿವಾಲಯ ಮತ್ತು ಕ್ಷೇತ್ರೀಯ ಕಾರ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪರಿಸ್ಥಿತಿಯನ್ನು ವಿಚಾರವನ್ನು ಪರಿಗಣಿಸಿದೆ ಎಂದು ಹೇಳಿತು.
ಸಚಿವಾಲಯದ ನೌಕರರು ಮತ್ತು ಹೊರಗಿನ ನೌಕರರ ಬಗ್ಗೆ ಪ್ರತ್ಯೇಕ ಶಿಫಾರಸುಗಳನ್ನು ಮಾಡಲಾಗಿದೆ. ಈ ಎರಡೂ ಶಿಫಾರಸುಗಳನ್ನು ಪ್ರತ್ಯೇಕವಾಗಿ ಮಾಡಿದ್ದರೂ, ಎರಡೂ ವೃಂದಗಳನ್ನು ಸಾಧ್ಯವಾದ ಮಟ್ಟಿಗೂ ಸಮಾನ ನೆಲೆಯಲ್ಲಿ ಪರಿಗಣಿಸುವಂತೆ ಸೂಚಿಸಲಾಗಿದೆ. ಎರಡೂ ವೃಂದಗಳನ್ನು ಎಲ್ಲ ನೆಲೆಗಳಲ್ಲಿಯೂ ಒಂದೇ ಎಂದು ವೇತನ ಆಯೋಗವು ಪರಿಗಣಿಸಿದ್ದರೆ ಎರಡು ಪ್ರತ್ಯೇಕ ಶಿಫಾರಸುಗಳನ್ನು ಮಾಡುತ್ತಿರಲಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ಅಸಮಾನತೆಯ ವಿಚಾರ ಪ್ರಸ್ತಾಪಿಸಿರುವ ಅರ್ಜಿದಾರರೊಬ್ಬರು, ಸಮಾನ ಹುದ್ದೆಗೆ ಸಮಾನ ವೇತನ ಸಿಗುತ್ತಿಲ್ಲ ಎಂದು ಹೇಳಿದ್ದರು. ಈ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಸಹಾಯಕರು ಮತ್ತು ಅದರ ಮೇಲಿನ ಕೆಲ ಹುದ್ದೆಗಳವರೆಗೆ ಮಾತ್ರ ಸಮಾನ ಸವಲತ್ತು ಒದಗಿಸಲು ಸಾಧ್ಯ. ಅಲ್ಲಿಂದಾಚೆಗಿನ ವೃತ್ತಿಯಲ್ಲಿ ಸಮಾನತೆ ಎಂಬುದನ್ನು ಎಂಥ ಕೆಲಸ ಮಾಡುತ್ತಿದ್ದಾರೆ ಎನ್ನುವುದರ ಆಧಾರದ ಮೇಲೆ ಪರಿಗಣಿಸಬೇಕಾಗುತ್ತದೆ. ವೃತ್ತಿಯಲ್ಲಿ ಮುನ್ನಡೆ ಎನ್ನುವುದು ಹಲವು ಅಂಶಗಳನ್ನು, ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ ಎಂದು ಅಭಿಪ್ರಾಯಪಟ್ಟಿತು.
‘ಭಾರತ ಸರ್ಕಾರ ಮತ್ತು ತಾರಿತ್ ರಂಜನ್ ದಾಸ್ ಪ್ರಕರಣದಲ್ಲಿ ವೇತನ ಆಯೋಗ ಹೇಳಿದ ಮಾತುಗಳನ್ನು ನಾವು ಗಮನಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ತತ್ವನ್ನು ಕೇವಲ ಹುದ್ದೆಯನ್ನು ಆಧರಿಸಿ ಅನುಷ್ಠಾನಗೊಳಿಸಲು ಆಗುವುದಿಲ್ಲ. 5ನೇ ವೇತನ ಆಯೋಗದ ಶಿಫಾರಸುಗಳನ್ನು ಸಹ ಕಾರ್ಯನಿರ್ವಹಣೆಯ ಅಗತ್ಯಗಳನ್ನು ಆಧರಿಸಿಯೇ ವಿಶ್ಲೇಷಿಸಬೇಕಾಗುತ್ತದೆ. ಈ ವಿಚಾರದಲ್ಲಿ ಸಮಾನತೆಯ ತತ್ವವನ್ನು ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು’ ಎಂದು ನ್ಯಾಯಮೂರ್ತಿಗಳು ಹೇಳಿದರು. ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಸ್ಟೆನೊಗ್ರಾಫರ್ಗೆ ಸಂಬಂಧಿಸಿದ ಪ್ರಕರಣದಲ್ಲಿ ವೇತನ ಆಯೋಗವು ಮೇಲಿನಂತೆ ಅಭಿಪ್ರಾಯಪಟ್ಟಿತ್ತು.
‘ಒಬ್ಬ ಸ್ಟೆನೊಗ್ರಾಫರ್ ಯಾವುದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ, ಅಂದರೆ ಹಿರಿಯ ಅಧಿಕಾರಿಯ ಕಚೇರಿಯಲ್ಲಿದ್ದೂ, ಅಧೀನ ಅಧಿಕಾರಿಯ ಕಚೇರಿಯಲ್ಲಿದ್ದರೂ ಅವರ ಕೆಲಸದ ಸ್ವರೂಪ ಒಂದೇ ಆಗಿರುತ್ತದೆ. ವೇತನ ಆಯೋಗವು ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ತನ್ನ ಶಿಫಾರಸುಗಳನ್ನು ನೀಡಿರುತ್ತದೆ. ಎಲ್ಲ ಸಂದರ್ಭಗಳಲ್ಲೂ ಎಲ್ಲ ರೀತಿಯ ಸಮಾನತೆ ನೀಡಲು ಆಗುವುದಿಲ್ಲ ಎಂದು ವೇತನ ಆಯೋಗ ಹೇಳಿದೆ. ಹೀಗಾಗಿ ಈ ವಿಚಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಆಗುವುದಿಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದರು.
(Equal Pay For Equal Work Principle Cannot Be Applied Merely On Basis Of Designation says Supreme Court)
ಇದನ್ನೂ ಓದಿ: Salary Hike: ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಜಾಸ್ತಿ ಆಗುತ್ತಿದೆ ಗೊತ್ತೆ? ಇಲ್ಲಿದೆ ಲೆಕ್ಕಾಚಾರ
ಇದನ್ನೂ ಓದಿ: Recruitment 2021: ವಿಪ್ರೋದಲ್ಲಿ ಉದ್ಯೋಗಾವಕಾಶ: ವೇತನ ಬರೋಬ್ಬರಿ 3.5 ಲಕ್ಷ ರೂ.