
ಈರೋಡ್, ಅಕ್ಟೋಬರ್ 20: ಕೇವಲ ನಾಲ್ಕು ಪವನ್ ಚಿನ್ನದ ತಾಳಿ ಸರಕ್ಕಾಗಿ ಸಹೋದ್ಯೋಗಿ ಮಹಿಳಾ ನರ್ಸ್ ಒಬ್ಬರನ್ನು ಬೈಕ್‌ನಲ್ಲಿ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ 23ವರ್ಷದ ನರ್ಸ್ ಸರವಣನ್ ಎಂಬಾತನನ್ನು ಈರೋಡ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ರಾಮನಾಥಪುರಂ ಮೂಲದ ಉಥಿರಾ ತಿರುಪ್ಪೂರು ಜಿಲ್ಲೆಯ ಪಲ್ಲಗೌಂಡಂಪಾಲಯಂನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಕ್ಟೋಬರ್ 15 ರಂದು ಕರ್ತವ್ಯಕ್ಕೆ ತೆರಳಿದ್ದ ಅವರು ನಾಪತ್ತೆಯಾಗಿದ್ದರು. ಅಕ್ಟೋಬರ್ 17 ರಂದು ಪೆರುಂಡುರೈನ ವಿಜಯಮಂಗಲಂ ಟೋಲ್ ಗೇಟ್ ಸಮೀಪ ಅವರ ಮೃತದೇಹ ಪತ್ತೆಯಾಗಿತ್ತು.
ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆಕೆಯ ಆಭರಣ ಕದಿಯಲು ಸಂಚು ರೂಪಿಸಿದ್ದ ಸಹೋದ್ಯೋಗಿ ಸರವಣನ್, ಉಥಿರಾ ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ಚಿನ್ನದ ಸರ ದೋಚಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕೊಲೆ ಪ್ರಕರಣವು ತಮಿಳುನಾಡಿನಲ್ಲಿ ಕದಡಿದ ಕಾನೂನು-ಸುವ್ಯವಸ್ಥೆಯ ಕುರಿತಾದ ಬಿಸಿಬಿಸಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ವಿಪಕ್ಷ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಆಡಳಿತಾರೂಢ ಟಿವಿಕೆ (TVK) ಸರ್ಕಾರದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊಲೀಸ್ ಇಲಾಖೆಯನ್ನೂ ಔಟ್‌ಸೋರ್ಸ್ ಮಾಡಿದ್ದೀರಾ?: ಮುಖ್ಯಮಂತ್ರಿಗಳು ಹೆಸರಿಗೆ ಮಾತ್ರ ಗೃಹ ಖಾತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇತರ ಇಲಾಖೆಗಳನ್ನು ಸಚಿವರಿಗೆ ಹಂಚಿದಂತೆ ಪೊಲೀಸ್ ಇಲಾಖೆಯನ್ನೂ ಬೇರೆಯವರಿಗೆ ಹೊರಗುತ್ತಿಗೆ ನೀಡಿದ್ದಾರೆಯೇ ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ ತಡರಾತ್ರಿ ವಕೀಲನ ಕೊಲೆ! ಮನೆಗೆ ನುಗ್ಗಿ ಹಣೆಗೆ ಗುಂಡಿಟ್ಟು ಹತ್ಯೆ
ಮುಖ್ಯಮಂತ್ರಿಗಳ ನಿರ್ಲಕ್ಷ್ಯ ರಾಜ್ಯದಲ್ಲಿ ಜೀವಗಳನ್ನು ಬಲಿ ಪಡೆಯುತ್ತಿದೆ.ಡ್ರಗ್ಸ್ ಬಿಡಿ, ಕ್ರೀಡೆ ಆರಿಸಿ ಎಂದು ಪ್ರಚಾರ ಮಾಡುವ ಸಿಎಂ, ಮೊದಲು ವಿಶ್ರಾಂತಿ ಬಿಟ್ಟು ಗೃಹ ಇಲಾಖೆಯ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು” ಎಂದು ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದರು.
ಹತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬ ಜಾಮೀನಿನ ಮೇಲೆ ಹೊರಬಂದ ಬೆನ್ನಲ್ಲೇ ಭಾನುವಾರ ಶಿವಗಂಗಾದಲ್ಲಿ ಸೇಡು ತೀರಿಸಿಕೊಳ್ಳಲು ಹತ್ಯೆಯಾಗಿರುವುದನ್ನು ಉಲ್ಲೇಖಿಸಿದ ಸ್ಟಾಲಿನ್, ಜಾಮೀನಿನ ಮೇಲೆ ಹೊರಬರುವ ಸಮಾಜಘಾತುಕರ ಮೇಲೆ ಪೊಲೀಸರಿಗೆ ನಿಗಾ ಇಡಲು ಸಾಧ್ಯವಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಶ್ರೀಲಂಕಾಕ್ಕೆ ಸುಮಾರು 135 ಕೆಜಿ ಮೆಥಾಂಫೆಟಮೈನ್ ಸಾಗಿಸಲು ಯತ್ನಿಸಿದ ಆರೋಪದ ಮೇಲೆ ಟಿವಿಕೆ ಪಕ್ಷದ ಪದಾಧಿಕಾರಿಯಾಗಿದ್ದ ಬೂಬಾಲನ್ ಎಂಬಾತನನ್ನು ತನಿಖಾ ಸಂಸ್ಥೆಗಳು ಬಂಧಿಸಿದ್ದು, ವಿಪಕ್ಷಗಳಿಗೆ ಸರ್ಕಾರದ ವಿರುದ್ಧ ಮುಗಿಬೀಳಲು ದೊಡ್ಡ ಅಸ್ತ್ರವಾಗಿದೆ. ಆದಾಗ್ಯೂ, ಆರೋಪ ಕೇಳಿಬಂದ ತಕ್ಷಣವೇ ಬೂಬಾಲನ್‌ನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಟಿವಿಕೆ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ವಿಜಯ್, ಕಳೆದ ಕೆಲವು ತಿಂಗಳುಗಳಲ್ಲಿ ನಡೆದಿರುವ ಅಪರಾಧಗಳಿಗೆ ಕೇವಲ ನಮ್ಮ ಸರ್ಕಾರವೇ ಹೊಣೆಯಲ್ಲ. ಹಿಂದಿನ ಡಿಎಂಕೆ ಆಡಳಿತದ ಅವಧಿಯಲ್ಲೇ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗಿತ್ತು. ನಮ್ಮ ಸರ್ಕಾರ ಅಪರಾಧ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರತ್ಯುತ್ತರ ನೀಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ