ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಿದ್ದು ಚುನಾವಣೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ: ಅಮಿತ್ ಶಾ

| Updated By: ರಶ್ಮಿ ಕಲ್ಲಕಟ್ಟ

Updated on: Mar 06, 2022 | 5:20 PM

ಉಕ್ರೇನ್ ಬಿಕ್ಕಟ್ಟನ್ನು ಸರ್ಕಾರ ನಿರ್ವಹಿಸಿದ ರೀತಿ, ವಿಶೇಷವಾಗಿ ವಿದ್ಯಾರ್ಥಿಗಳ ಸ್ಥಳಾಂತರಿಸುವಿಕೆ, ಮತದಾನದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಕೇಳಿದಾಗ ಅದು ಸಕಾರಾತ್ಮಕವಾಗಿರುತ್ತದೆ ಎಂದು ಅಮಿತ್ ಶಾ ಹೇಳಿದರು.

ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಿದ್ದು ಚುನಾವಣೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ: ಅಮಿತ್ ಶಾ
ಅಮಿತ್ ಶಾ
Follow us on

ದೆಹಲಿ: ಯುದ್ಧ ಪೀಡಿತ ಉಕ್ರೇನ್‌ನಿಂದ (Ukraine) ಭಾರತೀಯರನ್ನು ಯಶಸ್ವಿಯಾಗಿ ಸ್ಥಳಾಂತರಿಸಿರುವುದು ವಿಧಾನಸಭಾ ಚುನಾವಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಸರ್ಕಾರವು ಜನವರಿಯಿಂದಲೇ ಅಲ್ಲಿನ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದೆ ಎಂದು ಅವರು ಹೇಳಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಶಾ ಈ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲಿ ಅವರು ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಉತ್ತರ ಪ್ರದೇಶ ಸೇರಿದಂತೆ ಎಲ್ಲಾ ನಾಲ್ಕು ಚುನಾವಣೆಯ ರಾಜ್ಯಗಳಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಮರಳುತ್ತದೆ ಮತ್ತು ಪಂಜಾಬ್‌ನಲ್ಲಿ ಹೆಚ್ಚಿನ ಸೀಟು ಗಳಿಸಲಿದೆ ಎಂದಿದ್ದಾರೆ. ಉಕ್ರೇನ್ ಬಿಕ್ಕಟ್ಟನ್ನು ಸರ್ಕಾರ ನಿರ್ವಹಿಸಿದ ರೀತಿ, ವಿಶೇಷವಾಗಿ ವಿದ್ಯಾರ್ಥಿಗಳ ಸ್ಥಳಾಂತರಿಸುವಿಕೆ, ಮತದಾನದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಕೇಳಿದಾಗ ಅದು ಸಕಾರಾತ್ಮಕವಾಗಿರುತ್ತದೆ ಎಂದು ಅವರು ಹೇಳಿದರು. ಜನವರಿಯಿಂದ ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ಸರ್ಕಾರವು ಗಮನಿಸುತ್ತಿದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ನಿಷ್ಠುರವಾಗಿ ವರ್ತಿಸುತ್ತಿದ್ದಾರೆ ಎಂದು ಶಾ ಹೇಳಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಸರ್ಕಾರ ಫೆಬ್ರವರಿ 15 ರ ಹಿಂದೆಯೇ ಸಲಹೆಯನ್ನು ನೀಡಿದೆ ಎಂದು ಅವರು ಹೇಳಿದರು. ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ವಿರುದ್ಧ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿತು. “13,000 ಕ್ಕೂ ಹೆಚ್ಚು ನಾಗರಿಕರು ಭಾರತವನ್ನು ತಲುಪಿದ್ದಾರೆ ಮತ್ತು ಹೆಚ್ಚಿನ ವಿಮಾನಗಳು ಬರುತ್ತಿವೆ. ಈ ಪ್ರಕ್ರಿಯೆಯು ಚುನಾವಣೆಗಳ ಮೇಲೆ ಮತ್ತು ಜನರ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ” ಎಂದು ಶಾ ಹೇಳಿದರು.

ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ಸರ್ಕಾರವು ‘ಆಪರೇಷನ್ ಗಂಗಾ’ವನ್ನು ಪ್ರಾರಂಭಿಸಿತು.
“ಸರ್ಕಾರವು ರಷ್ಯನ್ ಭಾಷೆ ಮಾತನಾಡುವ ತಂಡಗಳನ್ನು ಉಕ್ರೇನ್‌ನ ಹತ್ತಿರದ ನಾಲ್ಕು ದೇಶಗಳಿಗೆ ಕಳುಹಿಸಿದೆ ಮತ್ತು ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಿದೆ. ಮಾರ್ಚ್ 4 ರವರೆಗೆ, ನಾವು ಉಕ್ರೇನ್‌ನಿಂದ 16,000 ನಾಗರಿಕರನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಶಾ ಹೇಳಿದರು.


ರಷ್ಯಾದ ಮಿಲಿಟರಿ ಆಕ್ರಮಣದಿಂದಾಗಿ ಫೆಬ್ರವರಿ 24 ರಿಂದ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿದ್ದು, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಅದರ ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮತ್ತು ಪೋಲೆಂಡ್ ಮೂಲಕ ಏರ್ ಲಿಫ್ಟ್ ಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ ಏಳು ಹಂತದ ವಿಧಾನಸಭಾ ಚುನಾವಣೆಯ ಕೊನೆಯ ಚುನಾವಣೆ ಮಾರ್ಚ್ 7 ರಂದು ನಡೆಯಲಿದೆ. ಮಾರ್ಚ್ 10 ರಂದು ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ಮತಗಳ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಪುಣೆ: ಒಲೆಕ್ಟ್ರಾ ಗ್ರೀನ್‌ಟೆಕ್‌ನ 150 ಇ-ಬಸ್‌ಗಳಿಗೆ ಪ್ರಧಾನಿ ಮೋದಿ ಚಾಲನೆ; ಮಾಹಿತಿ ಹಂಚಿಕೊಂಡ MEIL