ಶ್ರೀನಗರದ ಜನನಿಬಿಡ ರಸ್ತೆಯಲ್ಲಿ ಗ್ರೆನೇಡ್ ದಾಳಿ: ಓರ್ವ ನಾಗರಿಕ ಸಾವು, ಹಲವರಿಗೆ ಗಾಯ
ಶ್ರೀನಗರದ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಭಾನುವಾರ ನಡೆದ ಗ್ರೆನೇಡ್ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ಪೊಲೀಸರು ಮತ್ತು ನಾಗರಿಕರಾಗಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ (Srinagar) ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಭಾನುವಾರ ನಡೆದ ಗ್ರೆನೇಡ್ ದಾಳಿಯಲ್ಲಿ(Grenade attack) ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ಪೊಲೀಸರು ಮತ್ತು ನಾಗರಿಕರಾಗಿದ್ದಾರೆ. ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕ ರಾಕೇಶ್ ಬಲಾವಾಲ್, 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ರಾಜಧಾನಿಯ ಅಮೀರಾ ಕಡಲ್ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಂತಿದ್ದ ಭದ್ರತಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ತಿಳಿಸಿದೆ. ಸಮೀಪದ ಎಸ್‌ಎಂಎಚ್‌ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಕನ್ವಾಲ್‌ಜೀತ್ ಸಿಂಗ್, ಗಾಯಗೊಂಡಿರುವ 21 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು. “ಗಾಯಗೊಂಡವರಲ್ಲಿ ಒಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕಲಾಗಿದೆ. ಎಲ್ಲಾ ಗಾಯಾಳುಗಳ ಗುರುತುಗಳು ನಮ್ಮ ಬಳಿ ಇನ್ನೂ ಇಲ್ಲ” ಎಂದು ಹೇಳಿದರು. ಅಮೀರ ಕಡಲ್ ಒಂದು ವಾಣಿಜ್ಯ ಪ್ರದೇಶವಾಗಿದ್ದು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
Jammu and Kashmir: Several injured including police personnel in a grenade attack at Amira Kadal market, Srinagar. All the injured have been shifted to hospital: Police pic.twitter.com/mfhDhlKD2v
— ANI (@ANI) March 6, 2022
ಹರಿ ಸಿಂಗ್ ಹೈ ಸ್ಟ್ರೀಟ್‌ನಲ್ಲಿ ಭದ್ರತಾ ಪಡೆಗಳ ತಂಡವೊಂದು ಕರ್ತವ್ಯಕ್ಕೆ ನಿಂತಿದ್ದು, ಈ ದಾಳಿಯಲ್ಲಿ ಯಾವುದೇ ಜವಾನನಿಗೆ ಗಾಯವಾಗಿಲ್ಲ ಎಂದು ಡಿಐಜಿ ಸಿಆರ್‌ಪಿಎಫ್ ಕಿಶೋರ್ ಪ್ರಸಾದ್ ಹೇಳಿದ್ದಾರೆ. “ಕೆಲವು ನಾಗರಿಕರಿಗೆ ಗಾಯಗಳಾಗಿವೆ” ಎಂದು ಅವರು ಹೇಳಿದರು.
ಇದಾದ ಕೂಡಲೇ ಶ್ರೀನಗರದ ಮೇಯರ್ ಜುನೈದ್ ಅಜೀಂ ಮಟ್ಟು ಟ್ವಿಟರ್‌ನಲ್ಲಿ, “ಹರಿ ಸಿಂಗ್ ಹೈ ಸ್ಟ್ರೀಟ್‌ನಲ್ಲಿ ನಡೆದ ಗ್ರೆನೇಡ್ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಈ ಬರ್ಬರ, ಪ್ರಜ್ಞಾಶೂನ್ಯ ಭಯೋತ್ಪಾದನಾ ದಾಳಿಯಲ್ಲಿ ಗಾಯಗೊಂಡವರಿಗೆ ನನ್ನ ಪ್ರಾರ್ಥನೆಗಳು” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಿದ್ದು ಚುನಾವಣೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ: ಅಮಿತ್ ಶಾ
Published On - 5:34 pm, Sun, 6 March 22