
ನವದೆಹಲಿ, ಆಗಸ್ಟ್ 17: ಚುನಾವಣಾ ಆಯೋಗಕ್ಕೆ ಎಲ್ಲಾ ರಾಜಕೀಯ ಪಕ್ಷಗಳೂ ಒಂದೇ. ಯಾವುದಕ್ಕೂ ತಾರತಮ್ಯ ಮಾಡುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಹೇಳಿದ್ದಾರೆ. ಚುನಾವಣಾ ಆಯೋಗವು ಆಡಳಿತ ಪಕ್ಷಕ್ಕೆ ಪೂರಕವಾಗಿ ಕೆಲಸ ಮಾಡತ್ತಿದೆ ಎನ್ನುವ ಆರೋಪಕ್ಕೆ ಸಿಇಸಿ ಉತ್ತರ ನೀಡಿದ್ದಾರೆ. ದೆಹಲಿಯಲ್ಲಿ (Delhi) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜ್ಞಾನೇಶ್ ಕುಮಾರ್, ಮತಗಳ್ಳತನ ಆಗಿದೆ ಎನ್ನುವ ಆರೋಪಕ್ಕೂ ಉತ್ತರ ಕೊಟ್ಟಿದ್ದಾರೆ.
ಬೂತ್ ಮಟ್ಟದ ಅಧಿಕಾರಿಗಳು ರಾಜಕೀಯ ಪಕ್ಷಗಳೊಂದಿಗೆ ಸೇರಿ ಡ್ರಾಫ್ಟ್ ರಚಿಸುತ್ತಾರೆ. ಅದಾದ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು 45 ದಿನಗಳು ಸಮಯಾವಕಾಶ ಕೊಡಲಾಗಿರುತ್ತದೆ. ಈ ಅವಧಿ ಬಹಳ ಮುಖ್ಯ. ತಪ್ಪುಗಳಾಗಿದ್ದಲ್ಲಿ ತಿದ್ದಿಕೊಳ್ಳಬಹುದು. ಅದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಹೊಂದಿರುತ್ತವೆ. ಆ 45 ದಿನಗಳ ಅವಧಿಯಲ್ಲಿ ಆಕ್ಷೇಪಣೆಗಳು ಬರದೆ ಈಗ ಬಂದರೆ ಹೇಗೆ? ಇದು ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಮುಖ್ಯ ಚುನಾವಣಾ ಆಯುಕ್ತರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಇಂದಿನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಮತದಾರರ ಅಧಿಕಾರ ಯಾತ್ರೆ’
ಚುನಾವಣಾ ಆಯೋಗದ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತಗಳ್ಳತನ ಆಗಿದೆ ಎನ್ನುವ ಆರೋಪ ಸರಿಯಾದುದಲ್ಲ. ಸುಳ್ಳು ಹೇಳುವ ಮೂಲಕ ತಾವು ಸಂವಿಧಾನವನ್ನು ಅಪಮಾನಿಸುತ್ತಿದ್ದೀರಿ. ಆಯೋಗದ ಹೆಗಲು ಮೇಲೆ ಬಂದೂಕು ಇಟ್ಟು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಸುಳ್ಳು ಆರೋಪಗಳಿಗೆ ಚುನಾವಣಾ ಆಯುಕ್ತ ಹೆದರುವುದಿಲ್ಲ ಎಂದು ಜ್ಞಾನೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ವೋಟರ್ ಐಡಿ ಕಾರ್ಡ್ ಹೊಂದಿರುವ ಹಲವಾರು ಪ್ರಕರಣಗಳಿವೆ ಎನ್ನುವ ಆರೋಪದ ಬಗ್ಗೆಯೂ ಮುಖ್ಯ ಚುನಾವಣಾ ಆಯುಕ್ತರು ಉತ್ತರ ಕೊಟ್ಟಿದ್ದಾರೆ. ಆ ರೀತಿ ಬಹು ಐಡಿ ಕಾರ್ಡ್ ಹೇಗೆ ಆಗಿರುತ್ತವೆ ಎನ್ನುವ ವಿವರಣೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: RSS ಭಾರತ ದೇಶದ ತಾಲಿಬಾನ್: ವಿವಾದದ ಕಿಡಿಹೊತ್ತಿಸಿದ ಕೈ ಹಿರಿಯ ನಾಯಕ ಬಿಕೆ ಹರಿಪ್ರಸಾದ್
ಒಂದು ಸ್ಥಳದಲ್ಲಿ ವೋಟರ್ ಐಡಿ ಹೊಂದಿರುವ ವ್ಯಕ್ತಿ ಬೇರೆ ಊರಿಗೆ ಹೋದಾಗ ಅಲ್ಲಿ ವೋಟರ್ ಐಡಿ ಪಡೆಯಬಹುದು. ಹಿಂದಿನ ಸ್ಥಳದಲ್ಲಿದ್ದ ವೋಟರ್ ಐಡಿ ಹಾಗೆಯೇ ಉಳಿದುಕೊಳ್ಳುವ ಸಂಭವ ಇರುತ್ತದೆ. ಫಾರ್ಮ್ ಸಲ್ಲಿಸಿ ಹಿಂದಿನದನ್ನು ತೆಗೆದುಹಾಕಬಹುದು. ಹಾಗೆ ಮಾಡದೇ ಇದ್ದಾಗ ಬೇರೆ ಬೇರೆ ಸ್ಥಳಗಳಲ್ಲಿನ ವೋಟರ್ ಐಡಿಗಳು ಉಳಿದುಕೊಳ್ಳಬಹುದು ಎಂದು ಜ್ಞಾನೇಶ್ ಕುಮಾರ್ ವಿವರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Sun, 17 August 25