
ನವದೆಹಲಿ, ಸೆಪ್ಟೆಂಬರ್ 19: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್) ಭಯೋತ್ಪಾದಕ ಯಾಸಿನ್ ಮಲಿಕ್ (Yasin Malik), 2006ರಲ್ಲಿ ಪಾಕಿಸ್ತಾನದಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಸ್ಥಾಪಕ ಮತ್ತು 26/11 ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನನ್ನು ಭೇಟಿಯಾದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವೈಯಕ್ತಿಕವಾಗಿ ನನಗೆ ಧನ್ಯವಾದ ಸಲ್ಲಿಸಿದ್ದರು ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾನೆ.
ಆಗಸ್ಟ್ 25ರಂದು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್, ಪಾಕಿಸ್ತಾನದಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ಅವರನ್ನು ಭೇಟಿ ಮಾಡಲು ಪ್ರಯತ್ನ ಪಟ್ಟಿದ್ದಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದಾಗ ಕೃತಜ್ಞತೆ ಸಲ್ಲಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಜಮ್ಮು ಕಾಶ್ಮೀರ ವಿಮೋಚನಾ ಪಡೆಯ ಆಗಿನ ಕಮಾಂಡರ್-ಇನ್-ಚೀಫ್ ಯಾಸಿನ್ ಮಲಿಕ್, 2006ರಲ್ಲಿ ಎಲ್‌ಇಟಿ ಭಯೋತ್ಪಾದಕನನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ಗೆ ಉಗ್ರ ಯಾಸಿನ್ ಮಲಿಕ್ ಖುದ್ದು ಹಾಜರಿ: ತಿಹಾರ್ ಜೈಲಿನ ನಾಲ್ವರು ಸಿಬ್ಬಂದಿ ಅಮಾನತು
ಆಗಸ್ಟ್ 25ರಂದು ಯಾಸಿನ್ ಮಲಿಕ್ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಮಾಜಿ ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರು, ವಿದೇಶಿ ರಾಜತಾಂತ್ರಿಕರು, ಉನ್ನತ ಗುಪ್ತಚರ ಬ್ಯೂರೋ (ಐಬಿ) ಅಧಿಕಾರಿಗಳು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕಾಪಾಡುವ ಕೇಂದ್ರ ಸರ್ಕಾರದ ಪ್ರಯತ್ನಗಳಲ್ಲಿ ಭಾಗಿಯಾಗಿರುವ ಇತರರೊಂದಿಗೆ ಅವರು ನಡೆಸಿದ ಸ್ಪಷ್ಟ ಸಭೆಗಳ ವಿವರಗಳಿವೆ.
ಎಲ್‌ಇಟಿ ಭಯೋತ್ಪಾದಕ ಹಫೀಜ್ ಸಯೀದ್ ಅವರನ್ನು ಭೇಟಿಯಾದ ಬಗ್ಗೆ ಯಾಸಿನ್ ಮಲಿಕ್ ಹೇಳಿದ್ದು, ಈ ಸಭೆ ಭಾರತದ ಹಿರಿಯ ಐಬಿ ಅಧಿಕಾರಿಗಳ ಆದೇಶದ ಮೇರೆಗೆ ನಡೆದಿದೆ ಎಂದು ಹೇಳಿಕೊಂಡಿದ್ದಾರೆ. ಹಫೀಜ್ ಸಯೀದ್ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದು, 2008ರ ಮುಂಬೈ ಭಯೋತ್ಪಾದಕ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ದಾಳಿಗಳ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ.
ಇದನ್ನೂ ಓದಿ: ‘ಮನಮೋಹನ್ ಸಿಂಗ್ ನೀಡಿದ್ದ ಪ್ರಧಾನಿ ಹುದ್ದೆಯನ್ನು ರಾಹುಲ್ ಗಾಂಧಿ ತಿರಸ್ಕರಿಸಿದ್ದರು’; ಪಪ್ಪು ಯಾದವ್
“ಫೆಬ್ರವರಿ 2006ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನವದೆಹಲಿಯಲ್ಲಿ ಔಪಚಾರಿಕ ಮಾತುಕತೆಗಾಗಿ ನನ್ನನ್ನು ಆಹ್ವಾನಿಸಿದರು. ಆ ಸಭೆಯ ಸಮಯದಲ್ಲಿ ಮನಮೋಹನ್ ಸಿಂಗ್ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಲು ಭಾರತ ಶ್ರಮಿಸುತ್ತಿದೆ ಎಂದು ನನಗೆ ಹೇಳಿದರು. ಹಾಗೇ, ಶಾಂತಿಗಾಗಿ ಕೆಲಸ ಮಾಡಲು ಐಬಿ ಸೂಚನೆಯ ಮೇರೆಗೆ ಹಫೀಜ್ ಸಯೀದ್ ಅವರನ್ನು ಭೇಟಿಯಾಗಿದ್ದಾಗಿ ಕೃತಜ್ಞತೆ ಸಲ್ಲಿಸಿದರು” ಎಂದು ಯಾಸಿನ್ ಮಲಿಕ್ ಹೇಳಿಕೊಂಡಿದ್ದಾರೆ.
2022ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಯಾಸಿನ್ ಮಲಿಕ್, ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆಯೊಡ್ಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿತ್ವಕ್ಕೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಸರ್ಕಾರ ಆರೋಪಿಸಿದೆ. ಅವರು ಈಗ ತಿಹಾರ್ ಜೈಲಿನಲ್ಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 pm, Fri, 19 September 25