ನನ್ನ ಮಾತಿನ ಅರ್ಥವೇ ಬೇರೆ; ಪಾಕಿಸ್ತಾನ ಮನೆಯಂತೆ ಭಾಸವಾಯಿತು ಎಂಬ ತಮ್ಮ ಹೇಳಿಕೆಗೆ ಸ್ಯಾಮ್ ಪಿತ್ರೋಡಾ ಸ್ಪಷ್ಟನೆ
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ಮನೆಯಲ್ಲಿ ಇದ್ದಂತೆ ಭಾಸವಾಯಿತು ಎಂದು ಹೇಳುವ ಮೂಲಕ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ವಿವಾದಕ್ಕೆ ನಾಂದಿ ಹಾಡಿದ್ದರು. ಅವರು ಈಗ ತಮ್ಮ ಹಿಂದಿನ ಹೇಳಿಕೆಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ದೇಶಗಳ ನಡುವಿನ 'ಹಂಚಿಕೆಯ ಇತಿಹಾಸ' ಮತ್ತು ಜನರಿಂದ ಜನರ ನಡುವಿನ ಬಾಂಧವ್ಯವನ್ನು ಒತ್ತಿಹೇಳುವ ಉದ್ದೇಶದಿಂದ ಮಾತ್ರ ಆ ಹೇಳಿಕೆ ನೀಡಿದ್ದಾಗಿ ಅವರು ಹೇಳಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 19: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ “ಮನೆಯಲ್ಲಿರುವಂತೆ ಭಾಸವಾಯಿತು” ಎಂಬ ತಮ್ಮ ವಿವಾದಾತ್ಮಕ ಹೇಳಿಕೆಗೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ (Sam Pitroda) ಸ್ಪಷ್ಟನೆ ನೀಡಿದ್ದಾರೆ. “ಹಂಚಿಕೆಯ ಇತಿಹಾಸ ಮತ್ತು ಜನರೊಂದಿಗಿನ ಬಾಂಧವ್ಯ”ವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಆ ಪ್ರದೇಶದಲ್ಲಿನ ನೋವು, ಸಂಘರ್ಷ ಅಥವಾ ಭದ್ರತಾ ಸವಾಲುಗಳನ್ನು ನಾವು ಕಡೆಗಣಿಸಬಾರದು ಎಂದು ಅವರು ಹೇಳಿದ್ದಾರೆ.
ನೆರೆಯ ರಾಷ್ಟ್ರಗಳಲ್ಲಿದ್ದರೆ ಮನೆಯಲ್ಲಿರುವಂತೆ ಅನಿಸುತ್ತಿದೆ ಎಂದು ಹೇಳಿದ ನಂತರ ಸ್ಯಾಮ್ ಪಿತ್ರೋಡಾ ವಿವಾದಕ್ಕೆ ನಾಂದಿ ಹಾಡಿದರು. ಭಾರತದ ವಿದೇಶಾಂಗ ನೀತಿಯು ಮೊದಲು ಅದರ ನೆರೆಹೊರೆಯ ಮೇಲೆ ಕೇಂದ್ರೀಕರಿಸಬೇಕು ಎಂದು ಅವರು ತಿಳಿಸಿದರು. ಈ ಹೇಳಿಕೆಯು ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಯಿತು. ಕಾಂಗ್ರೆಸ್ ಪಾಕಿಸ್ತಾನದ ಬಗ್ಗೆ ಮೃದುಧೋರಣೆ ತಳೆದಿದೆ ಎಂದು ಬಿಜೆಪಿ ಆರೋಪಿಸಿತು.
ಇದನ್ನೂ ಓದಿ: ಪಾಕಿಸ್ತಾನದ ಅಮಾಯಕರ ಸಾವು ತಪ್ಪಿಸಲು ಮಧ್ಯರಾತ್ರಿ ಆಪರೇಷನ್ ಸಿಂಧೂರ್ ದಾಳಿ ನಡೆಸಿದೆವು; ಸಿಡಿಎಸ್ ಅನಿಲ್ ಚೌಹಾಣ್
“ನೆರೆಯ ದೇಶಗಳಿಗೆ ಭೇಟಿ ನೀಡುವಾಗ ನನಗೆ ಮನೆಯಲ್ಲಿರುವಂತೆ ಭಾಸವಾಗುತ್ತದೆ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ನಾವು ಬೇರುಗಳನ್ನು ಹಂಚಿಕೊಳ್ಳುತ್ತೇವೆ. ನಾನು ಹಂಚಿಕೊಂಡ ಇತಿಹಾಸ ಮತ್ತು ಜನರ ನಡುವಿನ ಬಾಂಧವ್ಯವನ್ನು ಒತ್ತಿಹೇಳಲು ಬಯಸಿದ್ದೆ. ಆ ಪ್ರದೇಶದ ನೋವು, ಸಂಘರ್ಷ ಅಥವಾ ಭಯೋತ್ಪಾದನೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ನಾವು ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ನಿರ್ಲಕ್ಷಿಸುವಂತಿಲ್ಲ” ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
— Sam Pitroda (@sampitroda) September 19, 2025
ನನ್ನ ಹೇಳಿಕೆಗಳು ಕೆಲವರನ್ನು ಅಸಮಾಧಾನಗೊಳಿಸಿರಬಹುದು ಎಂದು ಒಪ್ಪಿಕೊಂಡ ಸ್ಯಾಮ್ ಪಿತ್ರೋಡಾ, “ನನ್ನ ಮಾತುಗಳು ಗೊಂದಲ ಅಥವಾ ನೋವನ್ನು ಉಂಟುಮಾಡಿದ್ದರೆ, ನನ್ನ ಉದ್ದೇಶವು ಯಾರ ನೋವನ್ನು ಕಡಿಮೆ ಮಾಡುವುದು ಅಥವಾ ಕಾನೂನುಬದ್ಧ ಕಾಳಜಿಗಳನ್ನು ದುರ್ಬಲಗೊಳಿಸುವುದಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Video: ಪಾಕಿಸ್ತಾನಕ್ಕೆ ಹೋದರೆ ಮನೆಗೆ ಹೋದ ಅನುಭವವಾಗುತ್ತೆ ಎಂದ ಸ್ಯಾಮ್ ಪಿತ್ರೋಡಾ
ಸ್ಯಾಮ್ ಪಿತ್ರೋಡಾ ಹೇಳಿದ್ದೇನು?:
ಸ್ಯಾಮ್ ಪಿತ್ರೋಡಾ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗಲೆಲ್ಲಾ ತಾವು ಯಾವಾಗಲೂ ಮನೆಯಲ್ಲಿರುವಂತೆ ಭಾಸವಾಗುತ್ತಿತ್ತು ಎಂದು ಹೇಳಿದ್ದರು. ಇದು ವಿವಾದವನ್ನು ಹುಟ್ಟುಹಾಕಿತ್ತು. ಸ್ಯಾಮ್ ಪಿತ್ರೋಡಾ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎರಡೂ ದೇಶಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕೆಂದು ಅವರು ಒತ್ತಾಯಿಸಿದರು. ಬಿಜೆಪಿ ಈ ಅವಕಾಶವನ್ನು ಕಾಂಗ್ರೆಸ್ ಮೇಲೆ ದಾಳಿ ಮಾಡಲು ಬಳಸಿಕೊಂಡಿತು. ಬಿಜೆಪಿ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಗಳನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಮಾಡಿದ ‘ಅವಮಾನ’ ಎಂದು ಕರೆದಿದೆ. ಆದರೆ, 26/11 ಮುಂಬೈ ಭಯೋತ್ಪಾದಕ ದಾಳಿಯ ನಂತರ ಕಾಂಗ್ರೆಸ್ ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




