ಭಾರತವು ಮಾಹಿತಿ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ್ದರೆ ಪಾಕಿಸ್ತಾನವು ಅಂತಾರಾಷ್ಟ್ರೀಯ ಭಯೋತ್ಪಾದನೆಯಲ್ಲಿ ಪರಿಣತಿ ಹೊಂದಿದೆ ಎಂದು ಪಾಕಿಸ್ತಾನವನ್ನು ಭಾರತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೀಕಿಸಿದ್ದಾರೆ. ನೆರೆಯ ರಾಷ್ಟ್ರವು ಅಂತಾರಾಷ್ಟ್ರೀಯ ಭಯೋತ್ಪಾದನೆಯಲ್ಲಿ ಪರಿಣತಿ ಹೊಂದಿದೆ. ಇಂದು ನೀವು ನಮ್ಮ ವಿರುದ್ಧ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದ್ದರೆ, ನಾಳೆ ಅದು ನಿಮ್ಮ ವಿರುದ್ಧವೂ ಕೆಲಸ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗುಜರಾತ್‌ನ ವಡೋದರಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಭಯೋತ್ಪಾದನೆಯ ಬಗ್ಗೆ ವಿಶ್ವದ ತಿಳಿವಳಿಕೆ ಉತ್ತಮವಾಗಿದೆ ಎಂದು ಹೇಳಿದರು. ಜಗತ್ತು ಇನ್ನು ಮುಂದೆ ಅದನ್ನು ಸಹಿಸುವುದಿಲ್ಲ.
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಜಾಗತಿಕವಾಗಿ ಒತ್ತಡ ಬಂದರೂ ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಭಾಯಿಸಿದ ರೀತಿಯನ್ನು ವಿದೇಶಾಂಗ ಸಚಿವರು ಹೊಗಳಿದ್ದಾರೆ.
ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಿರವ ದೇಶಗಳು ಒತ್ತಡದಲ್ಲಿವೆ ಎಂದರು. ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ರಷ್ಯಾದ ಯುದ್ಧವನ್ನು ಉಲ್ಲೇಖಿಸಿ ಇದು ಯುದ್ಧದ ಸಮಯವಲ್ಲ ಎಂದು ಹೇಳಿಕೆ ನೀಡಿ, ಪರೋಕ್ಷವಾಗಿ ಉಕ್ರೇನ್ ಯುದ್ಧವನ್ನು ನಿಲ್ಲಿಸುವಂತೆ ರಷ್ಯಾಕ್ಕೆ ಸಲಹೆ ನೀಡಿದ್ದರು. ಇದು ಜಾಗತಿಕವಾಗಿ ಸದ್ದು ಮಾಡಿತ್ತು. ಹಲವು ಪತ್ರಿಕೆಗಳು ಈ ಬಗ್ಗೆ ಉಲ್ಲೇಖಿಸಿ ವರದಿ ಮಾಡಿದ್ದವು.
ಭಯೋತ್ಪಾದನೆ ಸಾಕಷ್ಟು ವರ್ಷಗಳಿಂದ ನಡೆಯುತ್ತಿದೆ, ಇದನ್ನು ಜಗತ್ತಿಗೆ ವಿವರಿಸುವಲ್ಲಿ ನಾವು ಇತ್ತೀಚೆಗೆ ಹೆಚ್ಚು ಯಶಸ್ವಿಯಾಗುತ್ತಿದ್ದೇವೆ ಎಂದು ಹೇಳಿದರು. ಈಶಾನ್ಯ ಭಾರತದಲ್ಲಿ ನಡೆಯುತ್ತಿದ್ದ ಭಯೋತ್ಪಾದನೆಯ ಬಗ್ಗೆ ಮಾತನಾಡಿ, ಆ ಭಾಗದಲ್ಲಿ ಹಿಂದೆ ಉಗ್ರವಾದ ತಾಂಡವವಾಡುತ್ತಿತ್ತು. ಬಾಂಗ್ಲಾದೇಶದ ಜೊತೆ ಭಾರತ ಒಪ್ಪಂದ ಮಾಡಿಕೊಂಡು ಉಗ್ರರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಿದ ಬಳಿಕ ಅಲ್ಲಿ ನರಮೇಧ ನಿಂತಿದೆ. ಇದರಿಂದ ಈಶಾನ್ಯ ಭಾಗ ಭಯೋತ್ಪಾದನೆ ಹಿಡಿತದಿಂದ ಹೊರಬಂದಿದೆ ಎಂದು ಹೇಳಿದರು.
ರಷ್ಯಾ- ಉಕ್ರೇನ್ ಸಂಘರ್ಷದಿಂದಾಗಿ ತೈಲ ಬೆಲೆ ಏರುತ್ತಿದೆ. ತೈಲವನ್ನು ಎಲ್ಲಿ ಖರೀದಿಸಬೇಕು ಎಂಬ ಒತ್ತಡಕ್ಕೆ ಸಿಲುಕಿದ್ದೆವು. ಆಗ, ಪ್ರಧಾನಿ ಮೋದಿ ಮತ್ತು ಸರ್ಕಾರ ರಷ್ಯಾದಿಂದ ಅಗ್ಗದ ದರದಲ್ಲಿ ಖರೀದಿಸಿತು. ಇದರ ವಿರುದ್ಧ ಒತ್ತಡ ಕೇಳಿಬಂದಾಗ ಅದನ್ನು ನಿಭಾಯಿಸಿದರು. ಉತ್ತಮವಾದುದನ್ನು ಮಾಡುವಾಗ ಬರುವ ಒತ್ತಡವನ್ನು ಎದುರಿಸಿ ಎಂದು ಸಲಹೆ ನೀಡಿದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ