Face Mask: ಸದ್ಯಕ್ಕಂತೂ ಮಾಸ್ಕ್​ನಿಂದ ಮುಕ್ತಿಯಿಲ್ಲ; ಮುಂದಿನ ವರ್ಷವೂ ಮಾಸ್ಕ್ ಧರಿಸುವುದು ಅನಿವಾರ್ಯ

Covid Cases: 2022ರ ಅಂತ್ಯದವರೆಗೂ ಜನರು ಮಾಸ್ಕ್ ಧರಿಸಲೇಬೇಕಾದ ಅನಿವಾರ್ಯತೆ ಇರಲಿದೆ. ಸದ್ಯಕ್ಕಂತೂ ಜನರಿಗೆ ಮಾಸ್ಕ್​​ನಿಂದ ಮುಕ್ತಿ ಸಿಗುವುದಿಲ್ಲ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಹೇಳಿದ್ದಾರೆ.

Face Mask: ಸದ್ಯಕ್ಕಂತೂ ಮಾಸ್ಕ್​ನಿಂದ ಮುಕ್ತಿಯಿಲ್ಲ; ಮುಂದಿನ ವರ್ಷವೂ ಮಾಸ್ಕ್ ಧರಿಸುವುದು ಅನಿವಾರ್ಯ
ವಿಕೆ ಪೌಲ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 14, 2021 | 12:51 PM

ನವದೆಹಲಿ: ಕೊರೊನಾ ಅಬ್ಬರ ಇನ್ನೂ ಭಾರತದಲ್ಲಿ ಕಡಿಮೆಯಾಗಿಲ್ಲ. ಈಗಾಗಲೇ ಕೇಂದ್ರ ಸರ್ಕಾರದಿಂದ ಉಚಿತ ಕೊವಿಡ್ ಲಸಿಕಾ ಅಭಿಯಾನ ನಡೆಯುತ್ತಿದ್ದರೂ ಕೊರೊನಾ ಕೇಸುಗಳು ಮಾತ್ರ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಇನ್ನೂ ಹೊಸ ಕೊವಿಡ್ ಲಸಿಕೆಗಳನ್ನು ಕಂಡುಹಿಡಿಯುತ್ತಿದ್ದರೂ ಕೊವಿಡ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ ಎನ್ನಲಾಗಿದೆ. 2022ರ ಅಂತ್ಯದವರೆಗೂ ಜನರು ಮಾಸ್ಕ್ ಧರಿಸಲೇಬೇಕಾದ ಅನಿವಾರ್ಯತೆ ಇರಲಿದೆ. ಸದ್ಯಕ್ಕಂತೂ ಜನರಿಗೆ ಮಾಸ್ಕ್​​ನಿಂದ ಮುಕ್ತಿ ಸಿಗುವುದಿಲ್ಲ ಎಂದು ನೀತಿ ಆಯೋಗ (NITI Aayog)ದ ಸದಸ್ಯ ಡಾ. ವಿ.ಕೆ. ಪೌಲ್ ಹೇಳಿದ್ದಾರೆ.

ಕೊರೊನಾವನ್ನು ಭಾರತದಿಂದ ಸಂಪೂರ್ಣವಾಗಿ ಹೊಡೆದೋಡಿಸಲು ಇನ್ನಷ್ಟು ಪರಿಣಾಮಕಾರಿ ಔಷಧ, ಲಸಿಕೆಗಳನ್ನು ಕಂಡುಹಿಡಿಯಬೇಕು. ವಿಶ್ವವನ್ನೇ ಕಂಗಾಲು ಮಾಡಿರುವ ಭಯಾನಕ ರೋಗವಾದ ಕೊವಿಡ್-19ಗೆ ಲಸಿಕೆ ಸಿಕ್ಕಿದೆ ಎಂಬುದೇ ನೆಮ್ಮದಿಯ ಸಂಗತಿ. ಕೊರೊನಾ ನಿಯಮಗಳನ್ನು ಸರಿಯಾಗಿ ಪಾಲಿಸಿ, ಲಸಿಕೆಗಳನ್ನು ಪಡೆದುಕೊಂಡರೆ ನಾವು ಮಾಸ್ಕ್​ನಿಂದ ಮುಕ್ತಿ ಹೊಂದುವ ಸಮಯ ದೂರವಿಲ್ಲ. ಆದರೆ, ಮುಂದಿನ ವರ್ಷದವರೆಗೆ ಮಾತ್ರ ನಾವು ಮಾಸ್ಕ್ ಧರಿಸಲೇಬೇಕಾಗುತ್ತದೆ. ಇನ್ನೊಂದು ವರ್ಷ ಮಾಸ್ಕ್​​ಗಳು ಜನರಿಗೆ ಅನಿವಾರ್ಯವಾಗಿವೆ ಎಂದು ವಿಕೆ ಪೌಲ್ ಹೇಳಿದ್ದಾರೆ.

ಭಾರತದ ಕೊವಿಡ್ ಲಸಿಕೆಯಾದ ಕೊವ್ಯಾಕ್ಸಿನ್​ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮತಿ ಸಿಗುವ ವಿಚಾರವಾಗಿಯೂ ಮಾತನಾಡಿರುವ ವಿಕೆ ಪೌಲ್, ಈ ತಿಂಗಳ ಅಂತ್ಯದೊಳಗೆ ಈ ಬಗ್ಗೆ ನಿರ್ಧಾರವಾಗಬಹುದು ಎಂಬ ನಿರೀಕ್ಷೆಯಿದೆ. ಕೊವ್ಯಾಕ್ಸಿನ್​ಗೆ ಮಾನ್ಯತೆ ಸಿಕ್ಕೇ ಸಿಗುತ್ತದೆ. ಮಾಸ್ಕ್​ಗಳನ್ನು ಧರಿಸುವುದರಿಂದ ಕೊರೊನಾ ಹರಡುವಿಕೆಯನ್ನು ಬಹುಪಾಲು ನಿಯಂತ್ರಿಸಬಹುದು ಎಂಬುದನ್ನು ಮರೆಯಬಾರದು. ಹೀಗಾಗಿ, ಮಾಸ್ಕ್ ಧರಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

ಭಾರತದಲ್ಲಿ ಈಗಾಗಲೇ 75 ಕೋಟಿಗೂ ಅಧಿಕ ಡೋಸ್ ಕೊವಿಡ್ ಲಸಿಕೆ ನೀಡಲಾಗಿದೆ. ಸಿಕ್ಕಿಂ, ಹಿಮಾಚಲ ಪ್ರದೇಶ, ಗೋವಾ, ದಾದ್ರಾ ಮತ್ತು ನಾಗರ್, ಹವೇಲಿ, ಲಡಾಖ್ ಮತ್ತು ಲಕ್ಷದ್ವೀಪದಲ್ಲಿ ಎಲ್ಲಾ ವಯಸ್ಕರಿಗೆ ಮೊದಲ ಡೋಸ್ ನೀಡಲಾಗಿದೆ. ಮುಂದಿನ ತಿಂಗಳ ವೇಳೆಗೆ ಕೊವಿಡ್ 3ನೇ ಅಲೆ ಶುರುವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಿ, ಕೊರೊನಾ ನಿಯಮಗಳನ್ನು ಕಠಿಣಗೊಳಿಸಲು ತಜ್ಞರು ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಭಾರತದಲ್ಲಿ 24 ಗಂಟೆಗಳಲ್ಲಿ 25,404 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, ದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 33,289,579ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಕೊವಿಡ್ -19 ಗಾಗಿ 14,30,891 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ವರ್ಷ ಜನವರಿ 16 ರಂದು ಕೇಂದ್ರ ಸರ್ಕಾರದಿಂದ ಆರಂಭವಾದ ಉಚಿತ ಕೊರೊನಾ ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ಇಲ್ಲಿಯವರೆಗೆ 75.22 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 673 ಜನರಿಗೆ ಕೊರೊನಾ ದೃಢ; 13 ಮಂದಿ ಸಾವು

Coronavirus cases in India: ದೇಶದಲ್ಲಿ 25,404 ಹೊಸ ಕೊವಿಡ್ ಪ್ರಕರಣ ಪತ್ತೆ, 339 ಮಂದಿ ಸಾವು

(Face Mask we Have to Continue Wearing Masks Through 2022 says NITI Aayog Member Dr VK Paul)