Fact Check ಬಿರ್ಭೂಮ್ ಹಿಂಸಾಚಾರದಲ್ಲಿ ಹಿಂದೂಗಳ ಹತ್ಯೆಯಾಗಿದೆಯೇ?; ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದು ಸುಳ್ಳು ಸುದ್ದಿ

ಪಶ್ಚಿಮ ಬಂಗಾಳ ಪೊಲೀಸ್, “ಬೋಗ್ಟುಯಿ, ರಾಮ್‌ಪುರಹತ್, ಬಿರ್ಭುಮ್ ಗ್ರಾಮದಲ್ಲಿ ಯಾವುದೇ ಹಿಂದೂ ಮಹಿಳೆಯರು ಅಥವಾ ಮಕ್ಕಳು ಕೊಲ್ಲಲ್ಪಟ್ಟಿಲ್ಲ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸಲು ದಾರಿತಪ್ಪಿಸುವ ಪೋಸ್ಟ್‌ಗಳ ಮೂಲಕ....

Fact Check ಬಿರ್ಭೂಮ್ ಹಿಂಸಾಚಾರದಲ್ಲಿ ಹಿಂದೂಗಳ ಹತ್ಯೆಯಾಗಿದೆಯೇ?; ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದು ಸುಳ್ಳು ಸುದ್ದಿ
ವೈರಲ್ ಪೋಸ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 25, 2022 | 8:23 PM

ಮಾರ್ಚ್ 21 ರಂದು  ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ (Birbhum violence)ಬೊಗ್ಟುಯಿ ಗ್ರಾಮದಲ್ಲಿ ಟಿಎಂಸಿಯ (TMC) ಉಪ ಪ್ರಧಾನರಾದ ಭದು ಶೇಖ್ ಮೇಲೆ ಎರಡು ಮೋಟಾರ್ ಸೈಕಲ್‌ಗಳಲ್ಲಿ ಬಂದ ನಾಲ್ವರು ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದು ಇದು ಶೇಖ್ ಸಾವಿಗೆ ಕಾರಣವಾಗಿತ್ತು. ಇದಾದ ನಂತರ ಇದೇ ಪ್ರದೇಶದ ಎಂಟು ಮನೆಗಳ ಮೇಲೆ ದಾಳಿ ನಡೆದಿದ್ದು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಂಟು ಸಾವುಗಳು ಸಂಭವಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ವರದಿ ಪ್ರಕಾರ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, ಇಲ್ಲಿಯವರೆಗೆ 20 ಮಂದಿಯನ್ನು ಬಂಧಿಸಲಾಗಿದೆ. ಬಂಗಾಳದಲ್ಲಿನ ಹಿಂಸಾಚಾರದ ಬೆನ್ನಲ್ಲೇ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು “ಬಂಗಾಳದಲ್ಲಿ ಅಮಾಯಕ ಹಿಂದೂಗಳನ್ನು ಸುಟ್ಟು ಕೊಂದಿದ್ದಾರೆ” ಎಂದು ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದಲ್ಲಿ ಹೆಚ್ಚುತ್ತಿರುವ ಬಂಗಾಳಿ ಮುಸ್ಲಿಮರು, ರೊಹಿಂಗ್ಯಾ ಮತ್ತು ಪಾಕಿಸ್ತಾನಿ ಮುಸ್ಲಿಮರ ಜನಸಂಖ್ಯೆಯಿಂದ ಬೆದರಿಕೆಯನ್ನು ಎದುರಿಸುತ್ತಿರುವ ಕಾರಣ, “ಆತ್ಮರಕ್ಷಣೆ”ಗಾಗಿ ಬಂಗಾಳದ ಪ್ರತಿಯೊಬ್ಬ ಹಿಂದೂಗಳಿಗೆ “ಬಂದೂಕುಗಳನ್ನು ಒದಗಿಸುವ” ಕಾನೂನನ್ನು ಸಕ್ರಿಯಗೊಳಿಸುವಂತೆ ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಲ್ಲಿ ಸಿಂಗ್ ವಿನಂತಿಸಿದರು. ಇದನ್ನು ವಿವಿಧ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ, ಉದಾಹರಣೆಗೆ ‘#बंगाल_में_हिंदू_जल_रहा_है‘, (ಬಂಗಾಳದಲ್ಲಿ ಹಿಂದೂಗಳು ಸುಟ್ಟು ಸಾಯುತ್ತಿದ್ದಾರೆ) ‘#BengalBurning‘ ಹೀಗೆ ಹಲವು. ಹಲವು ಫೇಸ್‌ಬುಕ್ ಖಾತೆಗಳು ಈ ಕ್ಲಿಪ್ ಅನ್ನು ಬಿಜೆಪಿ ಪರ ಫೇಸ್‌ಬುಕ್ ಗುಂಪುಗಳು ಮತ್ತು ಪುಟಗಳಲ್ಲಿ ಹಂಚಿಕೊಂಡಿವೆ.

ಸ್ವಾತಂತ್ರ್ಯವೀರ್ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಅಧ್ಯಕ್ಷ ರಂಜಿತ್ ಸಾವರ್ಕರ್ ಕೂಡ ಇದೇರೀತಿ ಹೇಳಿದ್ದು ಇದು ಹಿಂದೂಗಳಿಗೆ ಎಚ್ಚರಿಕೆಯಾಗಿದೆ ಎಂದು ನೆನಪಿಸಿದರು. ಅವರು ಎರಡು ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ, ಅವುಗಳಲ್ಲಿ ಒಂದು ಸುಟ್ಟ ಮೂಳೆಗಳನ್ನು ತೋರಿಸುತ್ತದೆ. ಈ ಟ್ವೀಟ್ 2,000ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

ಟ್ವಿಟರ್ ಬಳಕೆದಾರ @doctorrichabjp ಟ್ವಿಟರ್‌ನಲ್ಲಿ ಇದೇ ರೀತಿ ಪೋಸ್ಟ್ ಮಾಡಿದ್ದು, ಬಿಜೆಪಿ ನಾಯಕ ಉದಯ್ ಪ್ರತಾಪ್ ಸಿಂಗ್ ಅವರು ಸ್ಕ್ರೀನ್‌ಶಾಟ್ ರೂಪದಲ್ಲಿ ಡಾಕ್ಟರ್ ರಿಚಾ ಪೋಸ್ಟ್ ಮಾಡಿದ ಅದೇ ರೀತಿಯ ಪಠ್ಯವನ್ನು ಹಂಚಿಕೊಂಡಿದ್ದಾರೆ.

ಹಿಂದೂ ಯುವ ವಾಹಿನಿ ಗುಜರಾತ್ ಉಸ್ತುವಾರಿ ಯೋಗಿ ದೇವನಾಥ್, ಸುದರ್ಶನ್ ನ್ಯೂಸ್ ಪತ್ರಕರ್ತ ಸಂತೋಷ್ ಚೌಹಾಣ್, ಆರ್‌ಎಸ್‌ಎಸ್ ಸದಸ್ಯ ಸುನಿಲ್ ಮಿತ್ತಲ್ ಕೂಡಾ ಇದೇ ರೀತಿ ಪೋಸ್ಟ್ ಮಾಡಿದ್ದಾರೆ.

ಫ್ಯಾಕ್ಟ್​ಚೆಕ್ ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್​ಚೆಕ್ ನಡೆಸಿ ಪ್ರಕಟಿಸಿದ ವರದಿ ಹೀಗಿದೆ.  ದಿ ಟೆಲಿಗ್ರಾಫ್ ಮಾರ್ಚ್ 23 ಮತ್ತು ಮಾರ್ಚ್ 24 ರಂದು ವರದಿಗಳನ್ನು ಪ್ರಕಟಿಸಿತು. ನಂತರ ಮಿಹಿಲಾಲ್ ಶೇಖ್ ಅವರು ವಿವರಿಸಿದ ವಿವರಗಳನ್ನು ಸೇರಿಸಿದೆ. ಶೇಖ್ ಅವರ ಕುಟುಂಬ ಸದಸ್ಯರು ಮೇಲೆ ತಿಳಿಸಿದ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಅವರ ಮನೆಗಳಿಗೆ ಬೆಂಕಿ ಹಚ್ಚಿದ ನಂತರ ಅವರು ತಮ್ಮ ಹಿರಿಯ ಸಹೋದರ ಬನೀರುಲ್ ಅವರೊಂದಿಗೆ ಭತ್ತದ ಗದ್ದೆಗಳ ಮೂಲಕ 10 ಕಿಮೀಗೂ ಹೆಚ್ಚು ಓಡಿದರು. ಮಿಹಿಲಾಲ್ ದ ಟೆಲಿಗ್ರಾಫ್‌ ಜತೆ ಮಾತನಾಡಿದ್ದು ತಾನು ಪೊಲೀಸರಲ್ಲಿ “ನಂಬಿಕೆ ಕಳೆದುಕೊಂಡಿದ್ದೇನೆ” ಮತ್ತು ಹತ್ಯೆಗಳ ತನಿಖೆಗೆ ಸಿಬಿಐ ಅನ್ನು ಕರೆತಂದ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದರು.

ಮೃತ ಎಂಟು ಮಂದಿಯ ಹೆಸರು ಇಲ್ಲಿದೆ: ಶೆಲಿ ಬೀಬಿ, 32 (ಮಿಹಿಲಾಲ್ ಅವರ ಪತ್ನಿ), ತುಲಿ ಖಾತುನ್, 7 (ಅವರ ಮಗಳು), ನೂರ್ನೆಹರ್ ಬೀಬಿ (ಮಿಹಿಲಾಲ್ ಅವರು 75 ವರ್ಷ ವಯಸ್ಸಿನ ವಿಧವೆ ಎಂದು ಹೇಳಿದ್ದಾರೆ), ರೂಪಾಲಿ ಬೀಬಿ, 44 (ಅವರ ಅಕ್ಕ), ಜಹನಾರಾ ಬೀಬಿ, 38 (ಅವರ ಅತ್ತಿಗೆ), ಲಿಲಿ ಖಾತುನ್, 18 (ಅವರ ಸೊಸೆ), ಕಾಜಿ ಸಾಜಿದುರ್ ರೆಹಮಾನ್, 22, (ಲಿಲಿಯ ಪತಿ) ಮತ್ತು ಮಿನಾ ಬೀಬಿ, 40 (ಮಿಹಿಲಾಲ್ ಅವರ ಅತ್ತಿಗೆ). ಮಾರ್ಚ್ 23 ರ ವರದಿಯ ಪ್ರಕಾರ, ಮೊದಲ ಏಳು ಮಂದಿ ಸಂಬಂಧಿಕರು ಮತ್ತು ಅವರ ದೇಹಗಳು ಸೋನಾ ಶೇಖ್ ಅವರ ಒಂದು ಅಂತಸ್ತಿನ ಮನೆಯಲ್ಲಿ ಪತ್ತೆಯಾಗಿವೆ. ಕಾಜಿ ಸಾಜಿದುರ್ ಮತ್ತು ಲಿಲಿ ಖಾತುನ್ ನವವಿವಾಹಿತರು. ಈ ಹೆಸರುಗಳು ಅವರು ಮುಸ್ಲಿಂ ಸಮುದಾಯದವರು ಎಂಬುದವನ್ನು ತೋರಿಸುತ್ತದೆ. ಹೀಗಾಗಿ, ಬಿರ್ಭೂಮ್ ಹಿಂಸಾಚಾರದಲ್ಲಿ ಹಿಂದೂಗಳನ್ನು ಗುರಿಯಾಗಿಸಲಾಗಿದೆ ಎಂಬ ಸಾಮಾಜಿಕ ಮಾಧ್ಯಮದ ಹೇಳಿಕೆ ಸುಳ್ಳು.

ಮಾರ್ಚ್ 24 ರ ವರದಿಯಲ್ಲಿ ಮಿಹಿಲಾಲ್ ಅವರು ಹತ್ಯಾಕಾಂಡದಲ್ಲಿ ಬದುಕುಳಿದ ಬನಿರುಲ್ ಮತ್ತು ಇಬ್ಬರು ಪ್ರಸ್ತುತ ಸೈಂಥಿಯಾ ಪೊಲೀಸ್ ಜಿಲ್ಲೆಯ ಗೋಪಾಲ್‌ಜಾಲ್‌ನಲ್ಲಿದ್ದಾರೆ ಎಂದು ಹೇಳಿರುವುದಾಗಿ ಇದೆ. ಅವರಿಗೆ ತೃಣಮೂಲ “ಏಜೆಂಟರು” ದೊಡ್ಡ ಮೊತ್ತದ ಹಣವನ್ನು ನೀಡಿದ್ದರು ಎಂದು ವರದಿಯಾಗಿದೆ.

ಅದೇ ವೇಳೆ ಪಶ್ಚಿಮ ಬಂಗಾಳ ಪೊಲೀಸ್, “ಬೋಗ್ಟುಯಿ, ರಾಮ್‌ಪುರಹತ್, ಬಿರ್ಭುಮ್ ಗ್ರಾಮದಲ್ಲಿ ಯಾವುದೇ ಹಿಂದೂ ಮಹಿಳೆಯರು ಅಥವಾ ಮಕ್ಕಳು ಕೊಲ್ಲಲ್ಪಟ್ಟಿಲ್ಲ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸಲು ದಾರಿತಪ್ಪಿಸುವ ಪೋಸ್ಟ್‌ಗಳ ಮೂಲಕ ಈ ದುರಂತ ಘಟನೆಯನ್ನು ಕೋಮುವಾದಗೊಳಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದೆ.

ಆಲ್ಟ್ ನ್ಯೂಸ್ ಪ್ರಾದೇಶಿಕ ಪತ್ರಕರ್ತರೊಂದಿಗೆ ಮಾತನಾಡಿದ್ದು, ಘಟನೆಗೆ ಸಂಬಂಧಿಸಿದಂತೆ 20 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಆರೋಪಿಗಳೆಲ್ಲರೂ ಒಂದೇ ಸಮುದಾಯದವರು ಎಂದು ಪತ್ರಕರ್ತರು ಖಚಿತಪಡಿಸಿದ್ದಾರೆ.

ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ರಾಮ್‌ಪುರಹತ್ ಪೊಲೀಸ್ ಠಾಣೆಯ ಸುಮೋಟೊ ದೂರು ನಮಗೆ ಲಭ್ಯವಾಗಿದೆ ಎಂದು ಆಲ್ಟ್ ನ್ಯೂಸ್ ಹೇಳಿದೆ. ಪ್ರಾಥಮಿಕ ವಿಚಾರಣೆಯ ಪ್ರಕಾರ, 22 ಶಂಕಿತರನ್ನು ಪಟ್ಟಿ ಮಾಡಲಾಗಿದೆ ಮತ್ತು ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳೊಂದಿಗೆ ಆರೋಪ ಹೊರಿಸಲಾಗಿದೆ ಎಂದು ದೂರಿನಲ್ಲಿದೆ. ಆಲ್ಟ್ ನ್ಯೂಸ್ ಪ್ರಕಾರ ಹತ್ಯಾಕಾಂಡದ ಸಂತ್ರಸ್ತರು ಮತ್ತು ಆರೋಪಿಗಳು ಇಬ್ಬರೂ ಒಂದೇ ಸಮುದಾಯದವರು ಎಂದು ಖಚಿತಪಡಿಸಿಕೊಳ್ಳಬಹುದು. ಹೀಗಾಗಿ ಘಟನೆ ಕೋಮು ಗಲಭೆ ಅಲ್ಲ. ಅಷ್ಟೇ ಅಲ್ಲದೆ ಆಲ್ಟ್ ನ್ಯೂಸ್ ಭಿರ್ಭೂಮ್ ಎಸ್‌ಪಿ ನಾಗೇಂದ್ರ ತ್ರಿಪಾಠಿ ಅವರೊಂದಿಗೆ ಮಾತನಾಡಿದ್ದು, ಆರೋಪಿಗಳು ಮತ್ತು ಸಂತ್ರಸ್ತರು ಇಬ್ಬರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಖಚಿತಪಡಿಸಿರುವುದಾಗಿ ಹೇಳಿದೆ.

ಇದನ್ನೂ ಓದಿ: Yogi Adityanath Oath Taking ಉತ್ತರಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ ; ಉಪ ಮುಖ್ಯಮಂತ್ರಿಯಾಗಿ ಕೇಶವ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್ ಪ್ರಮಾಣ ವಚನ