Fact Check: ಕಾಂಗ್ರೆಸ್ ಟೂಲ್​ಕಿಟ್ ಎಂದು ವೈರಲ್ ಆದ ದಾಖಲೆ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್​ಹೆಡ್ ಬಳಸಿ ಮಾಡಿದ್ದು

Congress Tool Kit: ಬಿಜೆಪಿ ಇಲ್ಲಿಯವರೆಗೆ ಆಪಾದಿತ ಟೂಲ್‌ಕಿಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಮಾತ್ರ ಹಂಚಿಕೊಂಡಿದೆ ಮತ್ತು ನೈಜ ಡಾಕ್ಯುಮೆಂಟ್ ತೋರಿಸಲು ವಿಫಲವಾಗಿದೆ. ಬಿಜೆಪಿ- ಪಿಡಿಎಫ್ ಆವೃತ್ತಿ ಅಥವಾ ಮೈಕ್ರೋಸಾಫ್ಟ್ ವರ್ಡ್ ಆವೃತ್ತಿಯನ್ನು ಇಲ್ಲಿವರಗೆ ತೋರಿಸಿಲ್ಲ

Fact Check: ಕಾಂಗ್ರೆಸ್ ಟೂಲ್​ಕಿಟ್ ಎಂದು ವೈರಲ್ ಆದ ದಾಖಲೆ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್​ಹೆಡ್ ಬಳಸಿ ಮಾಡಿದ್ದು
ಫ್ಯಾಕ್ಟ್ ಚೆಕ್

ಮೋದಿ ಸರ್ಕಾರ ಮತ್ತು ದೇಶದ ವಿವಿಧ ಬಿಜೆಪಿ ಸರ್ಕಾರಗಳನ್ನು ಮೂಲೆಗುಂಪಾಗಿಸಲು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ (AICC) ಟೂಲ್​ಕಿಟ್ ಸಿದ್ದಪಡಿಸಿದೆ ಎಂದು ಆರೋಪಿಸಿ ಮೇ 18ರಂದು ಬಿಜೆಪಿ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ದಾಖಲೆಗಳನ್ನು ಶೇರ್ ಮಾಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಇದು ಶೇರ್ ಆಗುತ್ತಿದ್ದಂತೆ #CongressToolKitExposed ಎಂಬ ಹ್ಯಾಶ್​ಟ್ಯಾಗ್ ಟ್ರೆಂಡ್ ಆಗಿತ್ತು.

ಈ ದಾಖಲೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ನಾಲ್ಕು ಪುಟ ಕೊವಿಡ್ 19 ಟೂಲ್ ಕಿಟ್ ಮತ್ತು ಉಳಿದ ನಾಲ್ಕು ಪುಟ ಸೆಂಟ್ರಲ್ ವಿಸ್ಟಾ ಯೋಜನೆಯ ಬಗ್ಗೆಯಾಗಿದೆ. ಕಾಂಗ್ರೆಸ್ ಟೂಲ್ ಕಿಟ್ ಎಂದು ಆರೋಪಿಸಿರುವ ಈ ಟೂಲ್ ಕಿಟ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ,ಬೆಂಬಲಿಗರು ‘super spreader Kumbh’ ‘not comment on Eid gatherings’ ಎಂಬ ನಿರ್ದೇಶನ ನೀಡಲಾಗಿದೆ. ಕೊವಿಡ್ SOS ಸಂದೇಶಗಳು IYC ಹ್ಯಾಂಡಲ್ ಗೆ ಟ್ಯಾಗ್ ಮಾಡಿದ್ದರೆ ಮಾತ್ರ ಪ್ರತಿಕ್ರಿಯಿಸಬೇಕು. ಈಗಾಗಲೇ ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಅಂತ್ಯಕ್ರಿಯೆ ಮತ್ತು ಮೃತ ದೇಹಗಳ ನಾಟಕೀಯ ಚಿತ್ರಗಳನ್ನು ಬಳಸಿ ’ಮೊದಲಾದ ನಿರ್ದೇಶನಗಳನ್ನು ನೀಡಲಾಗಿದೆ. ಅದೇ ವೇಳೆ ಭಾರತದಲ್ಲಿ ಪತ್ತೆಯಾಗಿರುವ ಕೊವಿಡ್ ರೂಪಾಂತರಿ ವೈರಸ್​ನ್ನು ಸಾಮಾಜಿಕ ಮಾಧ್ಯಮಗಳಲ್ಲಿ Modi strain ಎಂದು ಬಳಸಲು ಹೇಳಲಾಗಿದೆ.

ಸೆಂಟ್ರಲ್ ವಿಸ್ಟಾವನ್ನು ಪುನರಾಭಿವೃದ್ಧಿ ಮಾಡುವ ಪಿಎಂ ಮೋದಿಯವರ ಕನಸಿನ ಯೋಜನೆಯನ್ನು ಡಾಕ್ಯುಮೆಂಟ್‌ನ ಭಾಗ II ವಿಶ್ಲೇಷಿಸುತ್ತದೆ. ಈ ವಿಭಾಗವು ಕೊವಿಡ್ ಲಸಿಕೆಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸಂತ್ರಸ್ತರಿಗೆ ಆರ್ಥಿಕ ಪರಿಹಾರ ಸೇರಿದಂತೆ ಯೋಜನೆಯ ವೆಚ್ಚವನ್ನು ತಿಳಿಸುತ್ತದೆ. ಪರಿಸರ ಮತ್ತು ವಾಸ್ತುಶಿಲ್ಪದ ಮೇಲೆ ಯೋಜನೆಯ ದುಷ್ಪರಿಣಾಮವನ್ನು ಸಹ ಈ ದಾಖಲೆಯಲ್ಲಿ ಪಟ್ಟಿ ಮಾಡಲಾಗಿದೆ.

“ಈ ಜಾಗತಿಕ ದುರಂತದ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸುವುದು ಶೋಚನೀಯ” ಎಂದು ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಟ್ವೀಟ್ ಮಾಡಿದ್ದಾರೆ.


#CongressToolKitExposed ಎಂಬ ಹ್ಯಾಶ್ ಟ್ಯಾಗ್ ಬಳಸಿ ಸ್ಮೃತಿ ಇರಾನಿ, ತೀರಥ್ ಸಿಂಗ್ ರಾವತ್, ಪಿಯೂಷ್ ಗೋಯಲ್, ರಾಜ್ಯವರ್ಧನ್ ರಾಥೋಡ್, ತೇಜಸ್ವಿ ಸೂರ್ಯ, ಕಿರಣ್ ರಿಜಿಜು, ಅನುರಾಗ್ ಠಾಕೂರ್, ಪಿ ಸಿ ಮೋಹನ್, ಹರ್ದೀಪ್ ಸಿಂಗ್ ಪುರಿ, ಶೋಭಾ ಕರಂದ್ಲಾಜೆ, ಬಿರೆನ್ ಸಿಂಗ್, ಪ್ರಲ್ಹಾದ್ ಜೋಶಿ, ರಾಹುಲ್ ಕಸ್ವಾನ್, ವಿನಯ್ ಸಹಸ್ರಬುದ್ಧೆ ಮೊದಲಾದ ನಾಯಕರು ಟ್ವೀಟ್ ಮಾಡಿದ್ದಾರೆ.

ಎಬಿವಿಪಿಯ ಅಧಿಕೃತ ಟ್ವಿಟರ್ ಖಾತೆಯು ಆಪಾದಿತ ಈ ದಾಖಲೆಯನ್ನು ಹಂಚಿಕೊಂಡಿದೆ. ಅಮಿತ್ ಮಾಲ್ವಿಯಾ, ಸಂಬೀತ್ ಪಾತ್ರಾ, ಬಿ.ಎಲ್.ಸಂತೋಷ್, ತಾಜಿಂದರ್ ಪಾಲ್ ಸಿಂಗ್ ಬಗ್ಗ, ಸುನಿಲ್ ದಿಯೋಧರ್, ಪ್ರೀತಿ ಗಾಂಧಿ, ಸುರೇಶ್ ನಖುವಾ, ಸಂಜು ವರ್ಮಾ, ಓಂ ಪ್ರಕಾಶ್ ಧಂಕರ್, ಚಾರು ಪ್ರಜ್ಞಾ, ವೈ.ಸತ್ಯ ಕುಮಾರ್, ಸಿ.ಟಿ.ರವಿ, ಸಿ.ಟಿ.ಆರ್ ನಿರ್ಮಲ್ ಕುಮಾರ್, ಆಶಿಶ್ ಚೌಹಾನ್ ಮೊದಲಾದ ಬಿಜೆಪಿ ಪ್ರತಿನಿಧಿಗಳು ಈ ದಾಖಲೆಯನ್ನು ಶೇರ್ ಮಾಡಿದ್ದಾರೆ.


ಬಿಜೆಪಿ ಬೆಂಬಲಿಗರಾದ ಆನಂದ್ ರಂಗನಾಥನ್, ಪ್ರಶಾಂತ್ ಪಟೇಲ್ ಉಮರಾವ್, ಅಂಕಿತ್ ಜೈನ್, ಪ್ರದೀಪ್ ಭಂಡಾರಿ, ಶೆಫಾಲಿ ವೈದ್ಯ, ಶೆಹಜಾದ್, ವಿವೇಕ್ ಅಗ್ನಿಹೋತ್ರಿ ಮತ್ತು ಅಖಿಲೇಶ್ ಮಿಶ್ರಾ ಕೂಡ ಇದನ್ನು ಶೇರ್ ಮಾಡಿದ್ದಾರೆ. ಓಪ್ ಇಂಡಿಯಾ ಮತ್ತು ಅದರ ಸಂಪಾದಕ ನೂಪುರ್ ಶರ್ಮಾ ಮತ್ತು ಸ್ವರಾಜ್ಯ ಕೂಡಾ ಇದೇ ದಾಖಲೆಯನ್ನು ಶೇರ್ ಮಾಡಿದೆ.  ಕಾಂಗ್ರೆಸ್ ರಚಿಸಿದ ಆಪಾದಿತ ‘ಟೂಲ್‌ಕಿಟ್’ ಕುರಿತು ಪ್ರತಿಯೊಂದು ಮಾಧ್ಯಮಗಳೂ ವರದಿ ಮಾಡಿವೆ.


ಕಾಂಗ್ರೆಸ್ ಟೂಲ್ ಕಿಟ್ ‘ನಕಲಿ’
ಎಐಸಿಸಿ ಅಧ್ಯಯನ ವಿಭಾಗದ ಅಧ್ಯಕ್ಷ ರಾಜೀವ್ ಗೌಡ ಅವರು ಆಲ್ಟ್ ನ್ಯೂಸ್‌ಗೆ ಮಾತನಾಡುತ್ತಾ, ಸಾಮಾಜಿಕ ಮಾಧ್ಯಮ ಮತ್ತು ಆನ್-ಗ್ರೌಂಡ್ ಸ್ಟ್ರಾಟಜಿಗಳನ್ನು ಶಿಫಾರಸು ಮಾಡುವ ಡಾಕ್ಯುಮೆಂಟ್‌ನ ಭಾಗವನ್ನು (‘Cornering Narendra Modi and BJP on COVID-19 mismanagement’ ಎಂಬ ಶೀರ್ಷಿಕೆ) ತಮ್ಮ ಪಕ್ಷವು ಸಿದ್ಧಪಡಿಸಿಲ್ಲ. ಸೆಂಟ್ರಲ್ ವಿಸ್ಟಾ ಯೋಜನೆಯ ಸಮಸ್ಯೆಗಳನ್ನು ಪರಿಹರಿಸುವ ವಿಭಾಗವನ್ನು ‘Central Vista Redevelopment: Vanity Project Amidst the Pandemic’) ಎಐಸಿಸಿಯ ಅಧ್ಯಯನ ವಿಭಾಗವು ಮಾಡಿದೆ ಎಂದು ಹೇಳಿದ್ದಾರೆ.

ಇದು (ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಸೆಂಟ್ರಲ್ ವಿಸ್ಟಾ ಡಾಕ್ಯುಮೆಂಟ್‌ನ ಪುಟಗಳು) ದೊಡ್ಡ 6 ಪುಟಗಳ ದಾಖಲೆಯ ಭಾಗವಾಗಿದೆ. ಇದು ನೀತಿ ಮತ್ತು ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆ ಟಿಪ್ಪಣಿಯಾಗಿದೆ. ಅವರು ಅದನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆಂದು ತೋರುತ್ತದೆ ಮತ್ತು ನಕಲಿ ಲೆಟರ್‌ಹೆಡ್‌ನೊಂದಿಗೆ ನಕಲಿ ಡಾಕ್ಯುಮೆಂಟ್ ರಚಿಸಲು ಅದನ್ನು ಮಾದರಿಯಾಗಿ ಬಳಸಿದ್ದಾರೆ ಎಂದು ಗೌಡ ಹೇಳಿದ್ದಾರೆ.

ಅಧ್ಯಯನ ಇಲಾಖೆಯ ಆದೇಶ ಮೂರು ಹಂತದಲ್ಲಿದೆ. ಈ ಪೈಕಿ ಒಂದನೆಯದ್ದು ಕಾಂಗ್ರೆಸ್ ಸಂಸದರನ್ನು ತಮ್ಮ ಸಂಸತ್ತಿನ ಕೆಲಸದಲ್ಲಿ ಬೆಂಬಲಿಸುವುದು, ಎರಡು- ಕಾಂಗ್ರೆಸ್ ಅಲ್ಲದ ಸರ್ಕಾರಗಳ ವೈಫಲ್ಯಗಳನ್ನು ಬಹಿರಂಗಪಡಿಸಲು ಮತ್ತು ಮೂರು ಭವಿಷ್ಯದ ಬಗ್ಗೆ ಚಿಂತನೆ  ಎಂದು ಅವರು ಹೇಳಿದರು.  ಸಾಮಾಜಿಕ ಮಾಧ್ಯಮದಲ್ಲಿ ಏನು ಹೇಳಬೇಕು ಅಥವಾ ಹೇಳಬಾರದು ಎಐಸಿಸಿ ಅಧ್ಯಯನ ವಿಭಾಗದ ಆದೇಶವಲ್ಲ. “ನಾವು ವಾದಗಳು, ಭಾಷಣಗಳಿಗೆ ಆಧಾರವಾಗಿರುವ ವಾಸ್ತವಿಕ / ಫ್ಯಾಕ್ಟ್ ಚೆಕ್ ಮಾಹಿತಿಯ ಮೇಲೆ ಮಾತ್ರ ಗಮನಹರಿಸುತ್ತೇವೆ ಎಂದಿದ್ದಾರೆ.  COVID-19 mismanagement ಫೇಕ್ ಎಂದು ಗೌಡ ಟ್ವೀಟ್ ಮಾಡಿದ್ದಾರೆ.


ಫ್ಯಾಕ್ಟ್ ಚೆಕ್
ಎಐಸಿಸಿ ಲೆಟರ್ ಹೆಡ್​ನ್ನು ಟೂಲ್​ಕಿಟ್​ ಹೆಸರಿನಲ್ಲಿ ಬಳಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ದೂರು ನೀಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಟೂಲ್ ಕಿಟ್ ನಲ್ಲಿ ಎಐಸಿಸಿ ನಕಲಿ ಲೆಟರ್ ಹೆಡ್​ ಬಳಸಲಾಗಿದೆ ಎಂಬುದರ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದೆ.

ಸೆಂಟ್ರಲ್ ವಿಸ್ಟಾ ಡಾಕ್ಯುಮೆಂಟ್‌ನಲ್ಲಿನ ಲೆಟರ್‌ಹೆಡ್ ಮತ್ತು COVID-19 ಟೂಲ್‌ಕಿಟ್‌ನಲ್ಲಿರುವ ಲೆಟರ್‌ಹೆಡ್ ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ. ಸೆಂಟ್ರಲ್ ವಿಸ್ಟಾ ಡಾಕ್ಯುಮೆಂಟ್ ಅನ್ನು ಮೊದಲು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ತಯಾರಿಸಲಾಯಿತು. ಗೌಡ ಅವರ ಪ್ರಕಾರ ಪಿಡಿಎಫ್ ಆವೃತ್ತಿಯನ್ನು ಆಂತರಿಕವಾಗಿ ಪ್ರಸಾರ ಮಾಡಲಾಯಿತು. ಲೇಖಕರ ಆಧಾರದ ಮೇಲೆ ಡಾಕ್ಯುಮೆಂಟ್‌ನ ಬಾಡಿ, ಶೈಲಿ ಮತ್ತು ಸ್ವರೂಪದಲ್ಲಿ ವ್ಯತ್ಯಾಸಗಳಿರಬಹುದು.ಆದರೆ ವರ್ಡ್‌ನಲ್ಲಿನ ಹೆಡರ್ ಮತ್ತು ಅಡಿಟಿಪ್ಪಣಿ ಹಾಗೇ ಇರುತ್ತದೆ.

ಕೃಪೆ: ಆಲ್ಟ್ ನ್ಯೂಸ್

COVID-19 ಟೂಲ್‌ಕಿಟ್‌ನಲ್ಲಿ ತೆಳುವಾದ ಫಾಂಟ್ ಅನ್ನು ಬಳಸಲಾಗಿದೆ. ಪುಟ ಸಂಖ್ಯೆಯು ಕೂಡಾ ಹೊಂದಿಕೆಯಾಗುವುದಿಲ್ಲ. ಸೆಂಟ್ರಲ್ ವಿಸ್ಟಾ ಡಾಕ್ಯುಮೆಂಟ್‌ನಲ್ಲಿ ‘ಒಂದು’ ಸಂಖ್ಯೆಯನ್ನು ‘I’’ ಎಂದು ಬರೆಯಲಾಗಿದ್ದು, ಇನ್ನೊಂದು ಡಾಕ್ಯುಮೆಂಟ್ ನಲ್ಲಿ ‘1’ ಎಂದು ಬರೆಯಲಾಗಿದೆ.

ಎಐಸಿಸಿ ಅಧ್ಯಯನ ವಿಭಾಗವು ಸಿದ್ಧಪಡಿಸಿದ ಹಳೆಯ ದಾಖಲೆಯನ್ನು ಗೌಡ ಅವರು ಆಲ್ಟ್ ನ್ಯೂಸ್‌ನೊಂದಿಗೆ ಗೌಡ ಹಂಚಿಕೊಂಡಿದ್ದಾರೆ. ಫಾಂಟ್‌ಗಳು ಮತ್ತು ಶೈಲಿಯು (ಸೆಂಟ್ರಲ್ ವಿಸ್ಟಾ) ದಾ ಖಲೆಗೆ ಹೊಂದಿಕೆಯಾಗುತ್ತದೆ. ಆದರೆ ಟೂಲ್‌ಕಿಟ್ ಡಾಕ್ಯುಮೆಂಟ್‌ನಿಂದ ಭಿನ್ನವಾಗಿದೆ. ಹಾಗಾಗಿ ಟೂಲ್ ಕಿಟ್ ಮಾರ್ಫಿಂಗ್ ಮಾಡಿದ್ದು ಎಂಬುದು ಸ್ಪಷ್ಟ. ಮೂಲ ಡಾಕ್ಯುಮೆಂಟ್ ಅನ್ನು ತೋರಿಸುವಂತೆ ನಾನು ಅವರಿಗೆ ಸವಾಲು ಹಾಕುತ್ತೇನೆ, ಮತ್ತು ಅವರ ಸುಳ್ಳನ್ನು ಬಹಿರಂಗಪಡಿಸಲು ನಾವು ಅದನ್ನು ವಿಧಿವಿಜ್ಞಾನವಾಗಿ ತನಿಖೆ ಮಾಡುತ್ತೇವೆ ಎಂದು ಗೌಡ ಹೇಳಿದರು.
ಇಲ್ಲಿ ಬಳಸಿರುವ ಫಾಂಟ್‌ನಲ್ಲಿನ ವ್ಯತ್ಯಾಸವನ್ನು ಹೆಡರ್‌ನಲ್ಲಿ ಸಹ ಗುರುತಿಸಬಹುದು. ಎಲ್ಲಾ ಪುಟಗಳ ಮೇಲಿನ ಎಡ ಮೂಲೆಯಲ್ಲಿ ‘ಮೇ 2021’ ಎಂದು ಇದೆ .ಆದರೆ ಎರಡೂ ದಾಖಲೆಗಳಲ್ಲಿನ ‘M’ ಅಕ್ಷರ ಭಿನ್ನವಾಗಿದೆ.

ಕೃಪೆ: ಆಲ್ಟ್ ನ್ಯೂಸ್

ಅಡಿಟಿಪ್ಪಣಿಯಲ್ಲಿ ಅಲೈನ್ ಮಾಡಿರುವುದನ್ನು ಗಮನಿಸಿ. ವೈರಲ್ ಆಗಿರುವ ಡಾಕ್ಯುಮೆಂಟ್ ನಲ್ಲಿ ಈ ಲಿಂಕ್​ಗಳು ಕ್ರಮಬದ್ಧವಾಗಿ ಜೋಡಣೆ ಮಾಡಿಲ್ಲ.

ಮಾರ್ಫಡ್ ಡಾಕ್ಯುಮೆಂಟ್ – document property ವಿಶ್ಲೇಷಣೆ
ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಕೊವಿಡ್ -19 ಟೂಲ್​ಕಿಟ್ ಅನ್ನು ‘ನಕಲಿ’ ಎಂದು ಕರೆದ ನಂತರ, ಹಲವಾರು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಟೂಲ್​ಕಿಟ್ ಪ್ರಾಪರ್ಟಿಯ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ. ರಾಜೀವ್ ಗೌಡ ಅವರೊಂದಿಗೆ ಕೆಲಸ ಮಾಡುವ ಡಾಕ್ಯುಮೆಂಟ್‌ನ ಲೇಖಕಿ ಸೌಮ್ಯಾ ವರ್ಮಾ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ಅನ್ನು ಸಂಬೀತ್ ಪಾತ್ರಾ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಗೌಡ ಮತ್ತೊಂದು ಟ್ವೀಟ್ ಮಾಡಿದ್ದು ಎಐಸಿಸಿ ನಿಜಕ್ಕೂ ಸೆಂಟ್ರಲ್ ವಿಸ್ಟಾ ಬಗ್ಗೆ ಡಾಕ್ಯುಮೆಂಟ್ ಅನ್ನು ಸಿದ್ಧಪಡಿಸಿದೆ ಆದರೆ COVID-19 ಟೂಲ್​ಕಿಟ್   ನಕಲಿ, ಅದನ್ನು ಬಿಜೆಪಿ ತಯಾರಿಸಿದೆ ಎಂದಿದ್ದಾರೆ. ಸಾಂಬಿತ್ ಪಾತ್ರಾ ಟ್ವೀಟ್ ಮಾಡಿರುವ ನೈಜ ಡಾಕ್ಯುಮೆಂಟ್‌ನ ಮೆಟಾಡೇಟಾ / ಲೇಖಕರ ಮಾಹಿತಿ ಕೂಡಾ ಇದಕ್ಕೆ ಪುಷ್ಠಿ ನೀಡುತ್ತದೆ ಎಂದು ಅವರು ಹೇಳಿದ್ದಾರೆ .

ಸೆಂಟ್ರಲ್ ವಿಸ್ಟಾದ ಸಂಪೂರ್ಣ ಎಐಸಿಸಿ 6 ಪುಟಗಳ ಅಧ್ಯಯನ ವರದಿಯನ್ನು ಗೌಡ ಆಲ್ಟ್ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ . ಇದು ಬಿಜೆಪಿ ಸದಸ್ಯರು ಹಂಚಿಕೊಂಡಿರುವ document propertyಯನ್ನು ಇದು ಹೋಲುತ್ತದೆ.

ಸೆಂಟ್ರಲ್ ವಿಸ್ಟಾ ಡಾಕ್ಯುಮೆಂಟ್ ಆರು ಪುಟಗಳನ್ನು ಹೊಂದಿದೆ.  ಪಾತ್ರಾ ಹಂಚಿಕೊಂಡ ಸ್ಕ್ರೀನ್‌ಶಾಟ್ ಕೂಡ ಹೇಳುತ್ತದೆ. ಆದರೆ ಒಟ್ಟು 8 ಪುಟಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ, ಇದರಲ್ಲಿ ಸೆಂಟ್ರಲ್ ವಿಸ್ಟಾ ಅಧ್ಯಯನದ ನಾಲ್ಕು ಪುಟಗಳು ಮತ್ತು ಕೊವಿಡ್ ಟೂಲ್‌ಕಿಟ್‌ನ ನಾಲ್ಕು ಪುಟಗಳು ಸೇರಿವೆ. ಎರಡು ದಾಖಲೆಗಳು ವಿಭಿನ್ನವಾಗಿವೆ ಮತ್ತು ಪಾತ್ರಾ ಹಂಚಿಕೊಂಡ ಡಿಜಿಟಲ್ ಫೂಟ್ ಪ್ರಿಂಟ್ ಅಧಿಕೃತವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. COVID-19 ಟೂಲ್‌ಕಿಟ್‌ನ ಡಿಜಿಟಲ್ ಫೂಟ್​ಪ್ರಿಂಟ್ ನೀಡಲು ಬಿಜೆಪಿ ವಿಫಲವಾಗಿದೆ. ಇಲ್ಲಿ ನೀಡಿರುವ ಎರಡೂ ಸ್ಕ್ರೀನ್‌ಶಾಟ್‌ಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಪಾತ್ರಾ ಅವರು ‘ಸೆಂಟ್ರಲ್ ವಿಸ್ಟಾ ವ್ಯಾನಿಟಿ ಪ್ರಾಜೆಕ್ಟ್ ಎಐಸಿಸಿ’ ಡಾಕ್ಯುಮೆಂಟ್‌ನ ಮೆಟಾಡೇಟಾವನ್ನು ಹಂಚಿಕೊಂಡಿದ್ದಾರೆ.


‘ಟೂಲ್‌ಕಿಟ್‌ನಲ್ಲಿ’ ಉಲ್ಲೇಖಿಸಲಾದ ಸಾಮಾಜಿಕ ಮಾಧ್ಯಮ ತಂತ್ರಗಳ ಅನುಷ್ಠಾನಕ್ಕೆ ಯಾವುದೇ ಪುರಾವೆಗಳಿಲ್ಲ.
ಟೂಲ್‌ಕಿಟ್‌ ಎಂದರೇನು?
ಇದು ಭವಿಷ್ಯದ ಕಾರ್ಯ ಕ್ರಮಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸುವ ಡಾಕ್ಯುಮೆಂಟ್ ಆಗಿದೆ – ಏನು ಮಾಡಬೇಕು ಮತ್ತು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗುತ್ತದೆ.ಕೊವಿಡ್​ 19 ಟೂಲ್​ಕಿಟ್ ಸಾಮಾಜಿಕ ಮಾಧ್ಯಮದಲ್ಲಿ ಕಳುಹಿಸುವ ಸಂದೇಶ ಕಳುಹಿಸುವಿಕೆ ಹೇಗಿರಬೇಕು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವ್ಯಾಖ್ಯಾನಿಸುತ್ತದೆ.

ಆದಾಗ್ಯೂ, ಟೂಲ್‌ಕಿಟ್‌ನ ಹೆಚ್ಚಿನ ನಿರ್ದೇಶನಗಳು ಈಗಾಗಲೇ ನಡೆದ ಘಟನೆಗಳನ್ನು ಉಲ್ಲೇಖಿಸುತ್ತವೆ. ಮೇ 2021 ಮತ್ತು ಅದರಾಚೆಗಿನ ಕ್ರಿಯೆಗಳನ್ನು ಸೂಚಿಸಲು ಉದ್ದೇಶಿಸಿರುವ ಡಾಕ್ಯುಮೆಂಟ್‌ನಲ್ಲಿ ಹಲವಾರು ಘಟನೆಗಳು ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಸಂಭವಿಸಿವೆ.

ಭಾರತದಲ್ಲಿ ಅಂತರರಾಷ್ಟ್ರೀಯ ಮಾಧ್ಯಮಗಳ ವಿದೇಶಿ ವರದಿಗಾರರುವ ಮಾಡಿರುವ ವರದಿಯು ಮೋದಿ ಮತ್ತು ಅವರು ನಿರ್ವಹಣೆ ಲೋಪದ ಮೇಲೆ ಮೇಲೆ ಮಾತ್ರ ಕೇಂದ್ರೀಕರಿಸುವಂತೆ ಮಾಡಬಹುದು ಎಂದು ಮೇ ತಿಂಗಳಲ್ಲಿ ಸಿದ್ಧಪಡಿಸಿದ ಡಾಕ್ಯುಮೆಂಟ್ ಹೇಳುತ್ತದೆ.ಆದರೆ ಅಂತರರಾಷ್ಟ್ರೀಯ ಮಾಧ್ಯಮಗಳು ಏಪ್ರಿಲ್‌ನಿಂದ ಮೋದಿ ಸರ್ಕಾರವನ್ನು ಟೀಕಿಸುತ್ತಿವೆ.

ಬಿಜೆಪಿ ಸರ್ಕಾರದ ಆನ್‌ಲೈನ್ ನಾಗರಿಕರನ್ನು ಸಕ್ರಿಯಗೊಳಿಸುವ ಉಪಕ್ರಮ ‘MyGov India’ದ ಮಾಜಿ ನಿರ್ದೇಶಕ ಅಖಿಲೇಶ್ ಮಿಶ್ರಾ, ಕೊವಿಡ್ ಸಂತ್ರಸ್ತರ ಸಾಮೂಹಿಕ ಅಂತ್ಯಕ್ರಿಯೆಗಳ ಚಿತ್ರವೊಂದನ್ನು ಶೇರ್ ಮಾಡಿರುವ ರಾಹುಲ್ ಗಾಂಧಿಯವರ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮಿಶ್ರಾ ಇದನ್ನು ದಿ ನ್ಯೂಯಾರ್ಕ್ ಟೈಮ್ಸ್ ನ ಲೇಖನದೊಂದಿಗೆ ಹೋಲಿಸಿ ತೋರಿಸಿದ್ದಾರೆ. ರಾಹುಲ್ ಗಾಂಧಿಯವರ ಪೋಸ್ಟ್ ಏಪ್ರಿಲ್ 29 ರಿಂದ ಪೋಸ್ಟ್ ಆಗಿದ್ದು ಮತ್ತು ನ್ಯೂಯಾರ್ಕ್ ಟೈಮ್ಸ್ ಲೇಖನವು ಏಪ್ರಿಲ್ 25 ರಂದು ಪ್ರಕಟವಾಗಿದೆ. ಆದಾಗ್ಯೂ
ಟೂಲ್​ಕಿಟ್ ಸಿದ್ಧವಾಗಿದ್ದು ಇದರ ನಂತರ ಆಗಿದ್ದರೂ, ವಿದೇಶಿ ಮಾಧ್ಯಮದ ವರದಿಗೆ ‘ಟೂಲ್ ಕಿಟ್’ ಕಾರಣವಾಗಿದೆ ಎಂದು ಮಿಶ್ರಾ ಆರೋಪಿಸಿದ್ದಾರೆ.  ಮಿಶ್ರಾ ಹಲವಾರು ಬಿಜೆಪಿ ಪರ ಪ್ರಚಾರ ಪುಟಗಳೊಂದಿಗೆ ಸಂಪರ್ಕ ಹೊಂದಿದ್ದಾರೆ.


ಟೂಲ್​ಕಿಟ್ ಸಾಮಾಜಿಕ ಮಾಧ್ಯಮದಲ್ಲಿ ನಿರೂಪಣೆಯನ್ನು ರಚಿಸಲು ಕೆಲವು ಪದಗಳು ಮತ್ತು ಪದಗುಚ್ಛ ಗಳನ್ನು ಪದೇ ಪದೇ ಬಳಸುವಂತೆ ಸೂಚಿಸುತ್ತದೆ. ಅದರ ಸತ್ಯಾಸತ್ಯತೆಯನ್ನು ಅಳೆಯಲು, ಕಾಂಗ್ರೆಸ್ ಸದಸ್ಯರು ಮತ್ತು ಸ್ವಯಂಸೇವಕರು ಈ ಪದಗಳ ನ್ನು ಸಂಘಟಿತ ರೀತಿಯಲ್ಲಿ ಬಳಸುತ್ತಾರೆಯೇ ಅಥವಾ ಅನೇಕ ವ್ಯಕ್ತಿಗಳು ಒಂದೇ ಪರಿಭಾಷೆಯನ್ನು ಬಳಸುತ್ತಾರೆಯೇ ಎಂದು ಆಲ್ಟ್ ನ್ಯೂಸ್ ಪರಿಶೀಲಿಸಿದೆ. ಇದು ನಿಜವಲ್ಲ ಎಂದು ನಾವು ಕಂಡುಕೊಂಡಿದ್ದೇವೆ ಮತ್ತು ಹೆಚ್ಚಿನ ಸೀಮಿತ ಬಳಕೆಯು ಕಾಂಗ್ರೆಸ್‌ನೊಂದಿಗೆ ಸಂಬಂಧವಿಲ್ಲದ ಜನರಿಂದ ಆಗಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಸೆಂಟ್ರಲ್ ವಿಸ್ಟಾ ಸಂಶೋಧನೆಯನ್ನು ಮೇ 7 ರಂದು ಆಂತರಿಕವಾಗಿ ಪ್ರಸಾರ ಮಾಡಲಾಗಿದೆ ಎಂದು ರಾಜೀವ್ ಗೌಡ ನಮಗೆ ಮಾಹಿತಿ ನೀಡಿದರು. ಕೊವಿಡ್19 ಟೂಲ್​ಕಿಟ್ ಪ್ರತಿ ಪುಟದ ಮೇಲಿನ ಎಡ ಮೂಲೆಯಲ್ಲಿ ‘ಮೇ 2021’ ಎಂದು ಹೇಳುತ್ತದೆ. ಆದರೆ ಈ ತಿಂಗಳ ಸುಮಾರು ಮೂರು ವಾರಗಳಲ್ಲಿ, ಯಾವುದೇ ‘ತಂತ್ರ’ಗಳನ್ನು ಬಳಸಿಲ್ಲ
ಟ್ವಿಟರ್‌ನಲ್ಲಿ ‘super spreader kumbh’ ಎಂದು ಹುಡುಕಿದರೆ, ಇತ್ತೀಚಿನ ಎಲ್ಲಾ ಪೋಸ್ಟ್‌ಗಳನ್ನು ಕಾಂಗ್ರೆಸ್ ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಬಿಜೆಪಿ ಪರ ಅಥವಾ ಬಿಜೆಪಿ ಹ್ಯಾಂಡಲ್‌ಗಳು ಮಾಡುತ್ತವೆ.
ಆ ಪದಗುಚ್ಛದೊಂದಿಗೆ ಪೋಸ್ಟ್ ಮಾಡಲಾದ ಟ್ವೀಟ್‌ಗಳ ಸಂಖ್ಯೆ, ಕನಿಷ್ಠ ಒಂದು ರಿಟ್ವೀಟ್ ಅನ್ನು ಹೊಂದಿದ್ದರೆ, 15 ಟ್ವೀಟ್ ಗಳು ಸಿಕ್ಕಿವೆ. ಇವುಗಳಲ್ಲಿ ಯಾವುದನ್ನೂ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟ್ ಮಾಡಿರುವಂತೆ ತೋರುತ್ತಿಲ್ಲ.

ಮತ್ತೊಂದು ಹಂತದಲ್ಲಿ ಹೊಸ ರೂಪಾಂತರಿತ ಕೊರೊನಾವೈರಸ್ ಬಗ್ಗೆ ಮಾತನಾಡುವಾಗಲೆಲ್ಲಾ ‘Indian strain ಎಂಬ ಪದಗುಚ್ಛವನ್ನು ಬಳಸುವಂತೆ ಟೂಲ್​ಕಿಟ್ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರ್ದೇಶಿಸಿದೆ. ಸೋಷಿಯಲ್ ಮೀಡಿಯಾ ಸ್ವಯಂಸೇವಕರು ಇದನ್ನು ‘Modi strain’ ಎಂದು ಕರೆಯಬಹುದು ಎಂದೂ ಅದು ಹೇಳಿದೆ. ‘Indian strain’’ ಎಂಬ ಪದವನ್ನು ಹೆಚ್ಚಾಗಿ ಮಾಧ್ಯಮಗಳು ಅಂತರರಾಷ್ಟ್ರೀಯ ಮತ್ತು ದೇಶೀಯ ಮಟ್ಟದಲ್ಲಿ ಬಳಸಿಕೊಂಡಿವೆ. ಮೇ 1 ರಿಂದ ಮೇ 17 ರವರೆಗೆ, ಕನಿಷ್ಠ ಒಂದು ರಿಟ್ವೀಟ್ ಹೊಂದಿರುವ ಐದು ಹ್ಯಾಂಡಲ್‌ಗಳಿವೆ, ಅದು ‘Modi strain’ ಎಂಬ ಪದವನ್ನು ಬಳಸಿದೆ. ಐದು ಟ್ವೀಟ್‌ಗಳಿಂದ ಪ್ರಚಾರ ಸಾಧ್ಯವಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವು ಮಾಡಬೇಕಾದರೆ ಒಂದೇ ನಿರೂಪಣೆಯ ನೂರಾರು ಟ್ವೀಟ್ ಗಳು ಬೇಕು.

ಬಿಜೆಪಿ ಸದಸ್ಯರು ತಮ್ಮ ವಾದವನ್ನು ಬೆಂಬಲಿಸಲು ಲಂಡನ್ ಮೂಲದ ಲೇಖಕಿ ಸೋನಿಯಾ ಫಲೇರೊ ಅವರ ಟ್ವೀಟ್ ಅನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಫಲೇರೊ ಅವರು ‘strain’ ಪದವನ್ನು ಬಳಸಿಲ್ಲ (ಅವರ ಟ್ವೀಟ್ ನಲ್ಲಿ ‘variant’ ಎಂದು ಬಳಸಿದ್ದಾರೆ). ಅಂದಹಾಗೆ ಇವರು ಕಾಂಗ್ರೆಸ್ ಜೊತೆ ಸಂಬಂಧ ಹೊಂದಿಲ್ಲ.
#ModiVariant ಅಥವಾ ‘Modi variant’ ಅನ್ನು ಬಳಸಿದ ಕನಿಷ್ಠ ಒಂದು ರಿಟ್ವೀಟ್‌ನೊಂದಿಗೆ ಇನ್ನೂ ಕೆಲವು ಟ್ವೀಟ್‌ಗಳನ್ನು ನಾವು ಕಂಡುಕೊಂಡಿದ್ದೇವೆ. ಇವುಗಳಲ್ಲಿ ಪ್ರಮುಖವಾದುದು ಅಪರ್ಣಾ ಜೈನ್ ಮತ್ತು ಸೀಮಾ ಚಿಶ್ತಿಯವರದ್ದಾಗಿದೆ ಇವರಲ್ಲಿ ಯಾರೂ ಕಾಂಗ್ರೆಸ್ ಕಾರ್ಯಕರ್ತರಲ್ಲ.


‘ಟೂಲ್‌ಕಿಟ್’ ಬಿಜೆಪಿಯ ಹಿರಿಯ ಮುಖಂಡರಿಗೆ ನಿರ್ದಿಷ್ಟ ವಿಶೇಷಣಗಳನ್ನು ಬಳಸಲು ಸಲಹೆ ನೀಡುತ್ತದೆ. ಉದಾಹರಣೆಗೆ, ‘missing’ ಅಮಿತ್ ಶಾ, ‘quarantined’ ಜೈಶಂಕರ್, ‘sidelined’ ರಾಜನಾಥ್ ಸಿಂಗ್, ‘insensitive’ ನಿರ್ಮಲಾ ಸೀತಾರಾಮನ್.
ಎನ್‌ಎಸ್‌ಯುಐನ ಪ್ರಧಾನ ಕಾರ್ಯದರ್ಶಿ ನಾಗೇಶ್ ಕಾರಿಯಪ್ಪ ಅವರು ಕಾಣೆಯಾದ ವ್ಯಕ್ತಿಯ ವರದಿಯನ್ನು ದೆಹಲಿ ಪೊಲೀಸರಿಗೆ ಸಲ್ಲಿಸಿದ ನಂತರ ಗೃಹ ಸಚಿವರು ‘ಕಾಣೆಯಾಗಿದ್ದಾರೆ’ ಎಂಬುದು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು. ಅವರ ದೂರಿಗೆ ಸಂಬಂಧಿಸಿದ ಟ್ವೀಟ್‌ಗಳಾಗಿತ್ತು ಅವು.

‘Quarantined’ ಜೈಶಂಕರ್ ಈ ಪದವನ್ನು ವಿದೇಶಾಂಗ ಸಚಿವರಿಗೆ ವಿಶೇಷಣವಾಗಿ ಬಳಸಿದ ಯಾವುದೇ ಟ್ವೀಟ್ ಸಿಕ್ಕಿಲ್ಲ. ‘sidelined’ ರಾಜನಾಥ್ ಸಿಂಗ್ ಮತ್ತು ‘insensitive’ ನಿರ್ಮಲಾ ಸೀತಾರಾಮನ್ ಅವರ ಬಗ್ಗೆಯೂ ಏನೂ ಸಿಕ್ಕಿಲ್ಲ. ಜನರ ಮನಸ್ಸಿನಲ್ಲಿ ಈ ರೀತಿ ಪದ ಅಚ್ಚೊತ್ತಬೇಕಾದರೆ ಅದೇ ಪದವನ್ನು ಮತ್ತೆ ಮತ್ತೆ ಬಳಸಬೇಕಾಗುತ್ತದೆ. ಆದರೆ ಇಲ್ಲಿ ಹಾಗಾಗಿಲ್ಲ.

ಭಾರತೀಯ ಯುವ ಕಾಂಗ್ರೆಸ್ (IYC) ಅನ್ನು ಟ್ಯಾಗ್ ಮಾಡದ ಹೊರತು COVID SOS ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಡಾಕ್ಯುಮೆಂಟ್ ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡುತ್ತದೆ. ಐವೈಸಿ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಅವರನ್ನು ಅಥವಾ ಅವರ ಸಂಘಟನೆಯನ್ನು ಟ್ಯಾಗ್ ಮಾಡದ ವ್ಯಕ್ತಿಗೆ ಪ್ರತಿಕ್ರಿಯಿಸುತ್ತಿರುವುದನ್ನು ತೋರಿಸುವ ಸ್ಕ್ರೀನ್‌ಶಾಟ್ ಕೆಳಗೆ ಇದೆ.


ರಾಜೀವ್ ಗೌಡ ಮತ್ತು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಅಧ್ಯಕ್ಷ ರೋಹನ್ ಗುಪ್ತಾ ಅವರು ಬಿಜೆಪಿ ಮುಖಂಡರಾದ ಜೆ.ಪಿ.ನಡ್ಡಾ, ಸಂಬೀತ್ ಪಾತ್ರಾ, ಸ್ಮೃತಿ ಇರಾನಿ, ಬಿ.ಎಲ್.ಸಂತೋಷ್ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.


ಆಲ್ಟ್‌ ನ್ಯೂಸ್‌ನ ವಿಶ್ಲೇಷಣೆಯಿಂದಾಗಿ ಎಐಸಿಸಿ ಅಧ್ಯಯನ ವಿಭಾಗದ ಲೆಟರ್‌ಹೆಡ್‌ ಅನ್ನು ಟೂಲ್‌ಕಿಟ್‌ ಡಾಕ್ಯುಮೆಂಟ್‌ನಲ್ಲಿ ತಿರುಚಲಾಗಿದ್ದು, ಅದರ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭವಿಷ್ಯದ ಕ್ರಿಯೆಯ ಕಾರ್ಯತಂತ್ರವನ್ನು ರೂಪಿಸುವ ಉದ್ದೇಶದಿಂದ ಡಾಕ್ಯುಮೆಂಟ್‌ನ ವಿಷಯದ ಪರಿಶೀಲನೆ ಮಾಡಿದಾಗ ಈಗಾಗಲೇ ಹಿಂದೆ ನಡೆದ ಘಟನೆಗಳನ್ನು ಸೂಚಿಸುತ್ತದೆ ಎಂದು ತಿಳಿಸುತ್ತದೆ. ಬಿಜೆಪಿ ಇಲ್ಲಿಯವರೆಗೆ ಆಪಾದಿತ ಟೂಲ್‌ಕಿಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಮಾತ್ರ ಹಂಚಿಕೊಂಡಿದೆ ಮತ್ತು ನೈಜ ಡಾಕ್ಯುಮೆಂಟ್ ತೋರಿಸಲು ವಿಫಲವಾಗಿದೆ. ಬಿಜೆಪಿ- ಪಿಡಿಎಫ್ ಆವೃತ್ತಿ ಅಥವಾ ಮೈಕ್ರೋಸಾಫ್ಟ್ ವರ್ಡ್ ಆವೃತ್ತಿಯನ್ನು ಇಲ್ಲಿವರಗೆ ತೋರಿಸಿಲ್ಲ. ಮೂಲ ದಾಖಲೆಯಿಲ್ಲದೆ, ಬಿಜೆಪಿಯ ವಾದಗಳು ಅನಧಿಕೃತವೆಂದು ಕಂಡುಬರುತ್ತವೆ. ಅದರಲ್ಲೂ ವಿಶೇಷವಾಗಿ ಎಐಸಿಸಿಯ ಅಧ್ಯಯನ ವಿಭಾಗ ಬಳಸುವ ಮೂಲ ಲೆಟರ್‌ಹೆಡ್‌ನ ಕಳಪೆ ನಕಲಿನಲ್ಲಿ ಈ ‘ಟೂಲ್‌ಕಿಟ್’ ಮಾಡಲಾಗಿದೆ.

ಇದನ್ನೂ ಓದಿ: ಕೊವಿಡ್ ದುಸ್ಥಿತಿ ಸಂದರ್ಭ ಕೇಳಿಬರುತ್ತಿರುವ ‘ಕಾಂಗ್ರೆಸ್ ಟೂಲ್​ಕಿಟ್’ ಯಾವುದು? ಬಿಜೆಪಿ ಆರೋಪದ ಹತ್ತು ಅಂಶಗಳು ಇಲ್ಲಿದೆ

Click on your DTH Provider to Add TV9 Kannada