
ಬೆಂಗಳೂರು (ಮೇ. 16): ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿಯ ನಂತರ, ಭಾರತೀಯ ಸೇನೆಯು ಮೇ 6-7 ರ ಮಧ್ಯರಾತ್ರಿ ‘ಆಪರೇಷನ್ ಸಿಂಧೂರ್‘ (Operation Sindoor) ಅನ್ನು ಪ್ರಾರಂಭಿಸಿತು. ಇದರ ಅಡಿಯಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ವಾಯುದಾಳಿ ನಡೆಸಿದ್ದವು. ಇದರ ನಂತರ, ಪಾಕಿಸ್ತಾನವು ಭಾರತದ ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿ ನಡೆಸಿತು, ಇದನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಯು ವಿಫಲಗೊಳಿಸಿತು. ಈ ಎಲ್ಲ ಘಟನೆಯ ನಂತರ ಇದೀಗ ಹೊತ್ತಿ ಉರಿಯುತ್ತಿರುವ ರೈಲಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಜಮ್ಮುವಿನ ಜನರು ಪಾಕಿಸ್ತಾನಿ ರೈಲನ್ನು ಸುಟ್ಟುಹಾಕಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಟಿವಿ9 ಕನ್ನಡ ತನಿಖೆ ನಡೆಸಿ ವೈರಲ್ ಆಗುತ್ತಿರುವ ಈ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದೆ. ವಾಸ್ತವವಾಗಿ ಈ ಘಟನೆ 2019 ರಲ್ಲಿ ನಡೆದಿದ್ದು, ಗ್ಯಾಸ್ ಸ್ಟೌವ್ ಸ್ಫೋಟಗೊಂಡ ನಂತರ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ವೀಡಿಯೊಗೂ ಜಮ್ಮು-ಕಾಶ್ಮೀರ ಮತ್ತು ಪಹಲ್ಗಾಮ್ ದಾಳಿಗೂ ಯಾವುದೇ ಸಂಬಂಧವಿಲ್ಲ.
ವೈರಲ್ ಆಗಿರುವ ಈ ವಿಡಿಯೋದ ಸತ್ಯವನ್ನು ಕಂಡುಹಿಡಿಯಲು, ನಾವು ವಿಡಿಯೋದ ಹಲವಾರು ಪ್ರಮುಖ ಫ್ರೇಮ್‌ಗಳನ್ನು ಹೊರತೆಗೆದು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಅವುಗಳನ್ನು ಹುಡುಕಿದೆವು. ಆಗ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ನೊಂದಿಗೆ ಕೆಲ ಮಾಧ್ಯಮ ಅಕ್ಟೋಬರ್ 31, 2019 ರಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ವರದಿಗಳ ಪ್ರಕಾರ, ವೈರಲ್ ಆಗಿರುವ ವಿಡಿಯೋ ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಬೆಂಕಿ ಹೊತ್ತಿಕೊಂಡ ರೈಲಿನದ್ದಾಗಿದೆ. ಇದರಲ್ಲಿ ಗ್ಯಾಸ್ ಸ್ಟೌವ್ ಸ್ಫೋಟಗೊಂಡು ಭಾರಿ ಬೆಂಕಿ ಕಾಣಿಸಿಕೊಂಡು ಸುಮಾರು 65 ಪ್ರಯಾಣಿಕರು ಸಾವನ್ನಪ್ಪಿದರು.
ನಮ್ಮ ಹುಡುಕಾಟದ ಸಮಯದಲ್ಲಿ, ವಾಯ್ಸ್ ಆಫ್ ಅಮೆರಿಕಾದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಸಿಕ್ಕಿತು. ಈ ವಿಡಿಯೋವನ್ನು ಅಕ್ಟೋಬರ್ 31, 2019 ರಂದು ಅಪ್‌ಲೋಡ್ ಮಾಡಲಾಗಿದೆ. “ಪೂರ್ವ ಪಂಜಾಬ್ ಪ್ರಾಂತ್ಯದ ಪಾಕಿಸ್ತಾನದ ರಹಿಮ್ಯಾರ್ ಖಾನ್ ನಗರದ ಬಳಿ ಪ್ರಯಾಣಿಕ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 74 ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು. ಈ ಅಪಘಾತ ಸಂಭವಿಸಿದಾಗ ರೈಲು ದಕ್ಷಿಣ ನಗರವಾದ ಕರಾಚಿಯಿಂದ ರಾವಲ್ಪಿಂಡಿಗೆ ಹೋಗುತ್ತಿತ್ತು. ರೈಲಿನಲ್ಲಿ ಉಪಾಹಾರ ಬೇಯಿಸಲು ಪ್ರಯಾಣಿಕರು ಬಳಸಿದ ಎರಡು ಗ್ಯಾಸ್ ಸ್ಟೌವ್‌ಗಳು ಸ್ಫೋಟಗೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ” ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ ತನಿಖೆ ನಡೆಸಿದಾಗ ರೈಲಿಗೆ ಬೆಂಕಿ ಹಚ್ಚಿದ ಈ ವಿಡಿಯೋ ಇತ್ತೀಚಿನದಲ್ಲ ಎಂದು ಕಂಡುಬಂದಿದೆ. ವಾಸ್ತವವಾಗಿ, ಈ ಘಟನೆ 2019 ರಲ್ಲಿ ನಡೆದಿದ್ದು, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ತೇಜ್‌ಗಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಗ್ಯಾಸ್ ಸ್ಟೌವ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿತು.
ಇಂದು ಭುಜ್ ವಾಯುನೆಲೆಯಲ್ಲಿ ವಾಯುಪಡೆಯ ಯೋಧರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ್ ಮೂಲಕ ಭಾರತ 23 ನಿಮಿಷಗಳಲ್ಲಿ ಪಾಕಿಸ್ತಾನಿ ಭಯೋತ್ಪಾದಕರನ್ನು ನಾಶಪಡಿಸಿದೆ ಎಂದು ಹೇಳಿದರು. ‘‘1965ರಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ಗೆಲುವಿಗೆ ಭುಜ್ ಸಾಕ್ಷಿಯಾಗಿತ್ತು. ಇಂದು ಮತ್ತೆ ಅದೇ ಜಾಗ ಪಾಕಿಸ್ತಾನದ ವಿರುದ್ಧ ನಮ್ಮ ಗೆಲುವಿಗೆ ಸಾಕ್ಷಿಯಾಗಿದೆ. ಇಲ್ಲಿ ಉಪಸ್ಥಿತರಿರುವುದು ನನಗೆ ಹೆಮ್ಮೆ ತಂದಿದೆ’’ ಎಂದು ಅವರು ಹೇಳಿದರು. ಭಾರತೀಯ ವಾಯುಪಡೆಯು ತನ್ನ ಶೌರ್ಯ, ಧೈರ್ಯ ಮತ್ತು ವೈಭವದಿಂದ ಹೊಸ ಮತ್ತು ಹೆಚ್ಚಿನ ಎತ್ತರವನ್ನು ತಲುಪಿದೆ ಎಂದು ಅವರು ಹೇಳಿದರು.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ