ದೆಹಲಿ: ನಿರುದ್ಯೋಗದ ವಿರುದ್ಧ ದೇಶಾದ್ಯಂತ ರೈತರು ಸೋಮವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಸಂಯುಕ್ತ ಕಿಸಾನ್ ಮೋರ್ಚಾ (SKM) ಮತ್ತು ಇತರ ರೈತ ಗುಂಪುಗಳು ಪ್ರತಿಭಟನೆಗೆ ಕರೆ ನೀಡಿದ ನಂತರ ದೆಹಲಿ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಯಿತು. ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದು, ದೆಹಲಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಪ್ರತಿಭಟನೆಯನ್ನು ಆಯೋಜಿಸಲು ನಮ್ಮಿಂದ ಅನುಮತಿ ಕೇಳಲಾಗಿತ್ತು ಆದರೆ ಜನಸಂದಣಿಯಿಂದಾಗಿ ಅನುಮತಿ ನೀಡಲಾಗಿಲ್ಲ ಎಂದು ನವದೆಹಲಿಯ ಉಪ ಪೊಲೀಸ್ ಆಯುಕ್ತ ಅಮೃತ ಗುಗುಲೋತ್ ಇಂಡಿಯಾ ಟುಡೇಗೆ ತಿಳಿಸಿದರು. ಪೊಲೀಸ್ ಸಿಬ್ಬಂದಿ ಎನ್ಎಚ್ 48 ನಲ್ಲಿ ಎಲ್ಲಾ ವಾಹನಗಳ ಮೇಲೆ ತಪಾಸಣೆ ಮತ್ತು ನಿಗಾ ವಹಿಸುತ್ತಿದ್ದಾರೆ. ಹರಿಯಾಣ ಮತ್ತು ರಾಜಸ್ಥಾನದಿಂದ ಬರುವ ವಾಹನಗಳನ್ನೂ ನಿಲ್ಲಿಸಲಾಗುತ್ತಿದೆ.
ಕರ್ನಾಟಕದ ರೈತರು ಭಾಗಿ
ದೆಹಲಿಯಲ್ಲಿ ರೈತ ಮಹಾಪಂಚಾಯತ್ನಲ್ಲಿ ರಾಜ್ಯದ ರೈತರು ಭಾಗಿಯಾಗಿದ್ದಾರೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ಭಾಗಿಯಾಗಿದ್ದಾರೆ. ಬೆಂಬಲ ಬೆಲೆ ನೀತಿ ಜಾರಿಗೆ ತರುವಂತೆ ರೈತರ ಒತ್ತಾಯ ಮಾಡಿದ್ದಾರೆ. ಜಂತರ್ಮಂತರ್ನಲ್ಲಿ ನಡೆಯುತ್ತಿರುವ ಮಹಾಪಂಚಾಯತ್ಗೆ ದೇಶದ ವಿವಿಧ ರಾಜ್ಯಗಳಿಂದ ರೈತರು ಆಗಮಿಸುತ್ತಿದ್ದಾರೆ.
ಎಂಎಸ್‌ಪಿ ಜಾರಿ ಮಾಡುವುದಾಗಿ ಹೇಳಿ ಕೇಂದ್ರ ಸರ್ಕಾರ ಮೋಸ ಮಾಡುತ್ತಿದೆ ಎಂದು ದೆಹಲಿಯಲ್ಲಿ ರೈತ ನಾಯಕ ಕುರಬೂರು ಶಾಂತಕುಮಾರ್ ಹೇಳಿದ್ದಾರೆ. ಸಮಿತಿಯಲ್ಲಿ ತನ್ನದೇ ಜನರನ್ನು ನಿಯೋಜಿಸಿ ಯಾಮಾರಿಸುತ್ತಿದೆ, ದೇಶದಲ್ಲಿನ ಕೋಟ್ಯಾಧಿಪತಿ ಉದ್ಯಮಿಗಳ ಸಾಲಮನ್ನಾ ಆಗುತ್ತಿದೆ. ನೀಡಿದ ಭರವಸೆಯಂತೆ ಕೂಡಲೇ ಎಂಎಸ್‌ಪಿ ಜಾರಿಯಾಗಬೇಕು, ಅನ್ನದಾತರ ಸಾಲಮನ್ನಾ ಆಗಬೇಕು. ಇಲ್ಲದಿದ್ದರೆ ಈ ಹಿಂದೆ ನಡೆಸಿದಂತೆ ಪ್ರತಿಭಟನೆ ನಡೆಸಲಾಗುವುದು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ರೈತ ನಾಯಕ ಕುರಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದದ್ದಾರೆ.