ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಜಾರಿ ಮಾಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (SKM) ಇಂದು ಭಾರತ್ ಬಂದ್(Bharat Bandh)ಗೆ ಕರೆನೀಡಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಭಾರತ್ ಬಂದ್ ನಡೆಸುತ್ತಿದ್ದಾರೆ. ಈಗಾಗಲೇ ದೆಹಲಿಯ ಗಡಿ ಭಾಗಗಳಲ್ಲಿ ರೈತರ ಪ್ರತಿಭಟನೆ (Farmers Protest) ತೀವ್ರಗೊಂಡಿದ್ದು, ಪಂಜಾಬ್-ಹರ್ಯಾಣ ಗಡಿ (ಸಂಭು ಗಡಿ) ಮತ್ತು ಹರ್ಯಾಣದ ಶಹಬಾದ್ನಲ್ಲಿರುವ ದೆಹಲಿ-ಅಮೃತ್ಸರ್ ಹೆದ್ದಾರಿಯನ್ನು ರೈತರು ಬಂದ್ ಮಾಡಿದ್ದಾರೆ. ದೆಹಲಿ-ಉತ್ತರಪ್ರದೇಶ ಹೆದ್ದಾರಿಗಳೂ ಬಂದ್ ಆಗಿವೆ. 2020ರ ಸೆಪ್ಟೆಂಬರ್ 27ರಂದು ಮೂರು ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕುವ ಮೂಲಕ ಅದು ಕಾಯ್ದೆಗಳಾಗಿ ಜಾರಿಗೆ ಬಂದಿತ್ತು. ಇಂದು ಬೆಳಗ್ಗೆ 6 ಗಂಟೆಯಿಂದಲೇ ಬಂದ್ ಶುರುವಾಗಿದ್ದು, ಸಂಜೆ 4ಗಂಟೆವರೆಗೆ ಮುಂದುವರಿಯಲಿದೆ.
ಭಾರತ್ ಬಂದ್ಗೆ ಎಲ್ಲರೂ ಸಹಕಾರ ಕೊಡಬೇಕು. ಮಾಲೀಕರು ತಮ್ಮ ಅಂಗಡಿಗಳನ್ನು ಮುಚ್ಚಿ ಸಹಕಾರ ನೀಡಬೇಕು ಎಂದು ಒತ್ತಾಯಿಸಿರುವ ರೈತ ಸಂಘಟನೆಗಳು, ಶಾಂತಿಯುತ ಪ್ರತಿಭಟನೆ ಸಂಬಂಧ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದ್ದಾರೆ. ಕಳೆದ 11 ತಿಂಗಳಿಂದಲೂ ದೆಹಲಿಯ ಗಡಿ ಭಾಗಗಳಲ್ಲಿ ನೂರಾರು ರೈತರು ಹೋರಾಟ ನಡೆಸುತ್ತಲೇ ಇದ್ದಾರೆ. ಪಂಜಾಬ್ನ ಬರ್ನಾಲಾ ರೈಲ್ವೆ ಸ್ಟೇಶನ್ನಲ್ಲಿ ಪ್ರತಿಭಟನೆ ಶುರುವಾಗಿದೆ. ರೈತರು ಬಹುತೇಕ ಹೆದ್ದಾರಿ ಮತ್ತು ರೈಲ್ವೆ ಹಳಿಗಳಲ್ಲೇ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ನಿನ್ನೆ ಈ ಬಗ್ಗೆ ಹೇಳಿಕೆ ನೀಡಿದ್ದ ಭಾರತೀಯ ಕಿಸಾನ್ ಯೂನಿಯನ್ (BKU) ಮುಖಂಡ, ಸೆಪ್ಟೆಂಬರ್ 26ರಂದು ನಾವು ನಡೆಸಲಿರುವ ಭಾರತ್ ಬಂದ್ ಐತಿಹಾಸಿಕವಾಗಿರಲಿದೆ. ಎಲ್ಲ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನೂ ಬಂದ್ ಮಾಡುತ್ತೇವೆ. ದೆಹಲಿಯ ದಾಸ್ನಾ, ಮೋದಿನಗರ್, ಗರ್ಮುಕ್ಟೇಶ್ವರ್, ದುಹಾಯ್, ಸಿಂಘು ಗಡಿಗಳು ಬ್ಲಾಕ್ ಆಗಲಿವೆ ಎಂದು ತಿಳಿಸಿದ್ದರು.
ಇದನ್ನೂ ಓದಿ: Virat Kohli: ಹ್ಯಾಟ್ರಿಕ್ ಸೋಲಿನಿಂದ ಪಾರಾಗಿ ರೋಚಕ ಗೆಲುವಿನ ಬಗ್ಗೆ ಇಂಚಿಂಚು ಮಾಹಿತಿ ತೆರೆದಿಟ್ಟ ವಿರಾಟ್ ಕೊಹ್ಲಿ
ಕೃಷಿ ಕಾಯ್ದೆ- ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್: ಬೆಂಗಳೂರಿನಲ್ಲಿ ಬಂದ್ ಠುಸ್ ಪಟಾಕಿ
Published On - 8:42 am, Mon, 27 September 21