Wheat Sale: ಇ-ಹರಾಜಿನಲ್ಲಿ ಎರಡೇ ದಿನದಲ್ಲಿ 9 ಲಕ್ಷ ಟನ್ ಗೋಧಿ ಮಾರಾಟ
e-Auction of Wheat: ಇ-ಹರಾಜಿನಲ್ಲಿ ಭಾರತೀಯ ಆಹಾರ ನಿಗಮ (ಎಫ್ಸಿಐ) ಎರಡು ದಿನದಲ್ಲಿ 9 ಲಕ್ಷಕ್ಕೂ ಹೆಚ್ಚು ಟನ್ಗಳಷ್ಟು ಗೋಧಿ ಧಾನ್ಯವನ್ನು ಮಾರಾಟ ಮಾಡಿದೆ. ಗೋಧಿ ಬೆಲೆ ಏರಿಕೆಯಾಗದಂತೆ ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.
ನವದೆಹಲಿ: ಇ–ಹರಾಜಿನಲ್ಲಿ ಭಾರತೀಯ ಆಹಾರ ನಿಗಮ (FCI- Food Corporation of India) ಎರಡು ದಿನದಲ್ಲಿ 9 ಲಕ್ಷಕ್ಕೂ ಹೆಚ್ಚು ಟನ್ಗಳಷ್ಟು ಗೋಧಿ ಧಾನ್ಯವನ್ನು ಮಾರಾಟ ಮಾಡಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿ 22 ಲಕ್ಷ ಟನ್ಗಳಷ್ಟು ಗೋಧಿಯನ್ನು ಸಂಗ್ರಹಿಸಿ ಕೇಂದ್ರ ಸರ್ಕಾರ ಇ–ಆಕ್ಷನ್ಗೆ (e Auction) ಇಟ್ಟಿದೆ. ಈ ಪೈಕಿ 9.2 ಲಕ್ಷ ಟನ್ಗಳಷ್ಟು ಗೋದಿ ಎರಡು ದಿನದಲ್ಲಿ ಮಾರಾಟವಾಗಿದೆ.
ದೇಶಾದ್ಯಂತ ಇ–ಹರಾಜು ನಡೆಯುತ್ತಿದೆ. ಆರಂಭದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಿಡ್ಡರ್ಗಳು ಹರಾಜಿನಲ್ಲಿ ಪಾಲ್ಗೊಂಡಿರುವುದು ತಿಳಿದುಬಂದಿದೆ. ಪ್ರತೀ ಬುಧವಾರ ಗೋಧಿ ಮಾರಾಟಕ್ಕೆ ಇ ಹರಾಜು ನಡೆಯಲಿದೆ. ಇದು ಮಾರ್ಚ್ ಎರಡನೇ ವಾರದವರೆಗೂ ಮುಂದುವರಿಯಲಿದೆ.
ಗೋಧಿ ಬೆಲೆ ದುಬಾರಿಯಾಗುವುದನ್ನು ತಪ್ಪಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಇ–ಹರಾಜಿನ ವ್ಯವಸ್ಥೆ ಮಾಡಿದೆ. ಮೊದಲ ವಾರದಲ್ಲೇ ಇದರ ಪರಿಣಾಮ ಎದ್ದು ಕಾಣುತ್ತಿದ್ದು, ಗೋಧಿ ಬೆಲೆಯಲ್ಲಿ ಶೇ. 10ಕ್ಕೂ ಹೆಚ್ಚು ಇಳಿಕೆ ಆಗಿದೆ ಎಂಬ ಮಾಹಿತಿಯನ್ನು ಸಚಿವಾಲಯ ನೀಡಿದೆ.
ಇದನ್ನೂ ಓದಿ: Toyota Car: ಭಾರತದ ಈ ಟೆಕ್ ಕಂಪನಿ ಉದ್ಯೋಗಿಗಳಿಗಿಲ್ಲ ವಜಾ ಭೀತಿ; ಸಿಕ್ಕಿತು ಟೊಯೊಟಾ ಕಾರು ಉಡುಗೊರೆ!
ಬೆಲೆ ತೀರಾ ಹೆಚ್ಚಳವಾದರೆ ರೈತರು ತಮ್ಮ ಗೋದಿಯನ್ನು ಎಫ್ಸಿಐಗೆ ಮಾರುವುದಕ್ಕೆ ಮುಂದೆ ಬರದೇಹೋಗಬಹುದು. ಹೀಗಾದಲ್ಲಿ ಸರ್ಕಾರಕ್ಕೆ ಗೋಧಿ ಖರೀದಿ ಕಷ್ಟವಾಗುತ್ತದೆ ಎಂಬ ಲೆಕ್ಕಾಚಾರವೂ ಗೋಧಿ ಹರಾಜಿನ ಕ್ರಮದ ಹಿಂದಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿ ಒಟ್ಟು 3 ಕೋಟಿ ಟನ್ಗಳಷ್ಟು ಗೋದಿಯನ್ನು ಮಾರುವುದಾಗಿ ಜನವರಿ 25ರಂದು ಆಹಾರ ನಿಗಮ ಹೇಳಿತ್ತು. ಆಗಲೇ ಗೋಧಿ ಬೆಲೆ ಶೇ. 6ರಷ್ಟು ಇಳಿಕೆ ಕಂಡಿತ್ತು.
ಫುಡ್ ಕಾರ್ಪೊರೇಶನ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಖರೀದಿ ಮಾಡುತ್ತದೆ. ಸಾಮಾನ್ಯವಾಗಿ ಇವುಗಳು ಸರ್ಕಾರದ ವಿವಿಧ ಆಹಾರ ಯೋಜನೆಗಳಿಗೆ ಬಳಕೆ ಆಗುತ್ತವೆ. ದೇಶದಲ್ಲಿ ಆಹಾರವಸ್ತುಗಳ ಬೆಲೆ ಹೆಚ್ಚಾದ ಸಂದರ್ಭದಲ್ಲಿ ಆಹಾರ ನಿಗಮ ತನ್ನಲ್ಲಿರುವ ಕೆಲ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು.
Published On - 3:03 pm, Fri, 3 February 23