Adani Row: ಅದಾನಿ ಮಹಾಕುಸಿತದಿಂದ ಎಲ್​ಐಸಿ, ಎಸ್​ಬಿಐಗೆ ಹೆಚ್ಚಿನ ಹಾನಿಯಿಲ್ಲ; ಹಣಕಾಸು ಕಾರ್ಯದರ್ಶಿ ಸ್ಪಷ್ಟನೆ

ಅದಾನಿ ಸಮೂಹಕ್ಕೆ ಸಂಬಂಧಿಸಿದ ಆರೋಪಗಳ ವಿರುದ್ಧ ತನಿಖೆಯಾಗಬೇಕೆಂದು ಪ್ರತಿಪಕ್ಷಗಳು ಸಂಸತ್​​ನಲ್ಲಿ ಆಗ್ರಹಿಸಿದ ಬೆನ್ನಲ್ಲೇ ಹಣಕಾಸು ಕಾರ್ಯದರ್ಶಿಯವರು ಈ ಸ್ಪಷ್ಟನೆ ನೀಡಿದ್ದಾರೆ.

Adani Row: ಅದಾನಿ ಮಹಾಕುಸಿತದಿಂದ ಎಲ್​ಐಸಿ, ಎಸ್​ಬಿಐಗೆ ಹೆಚ್ಚಿನ ಹಾನಿಯಿಲ್ಲ; ಹಣಕಾಸು ಕಾರ್ಯದರ್ಶಿ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 03, 2023 | 3:24 PM

ನವದೆಹಲಿ: ಅದಾನಿ ಸಮೂಹ (Adani Group) ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿರುವುದರಿಂದ ಎಲ್​​ಐಸಿ (LIC) ಮತ್ತು ಎಸ್​​ಬಿಐಗೆ (SBI) ಹೆಚ್ಚಿನ ಹಾನಿಯಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಸ್ಪಷ್ಟನೆ ನೀಡಿದ್ದಾರೆ. ಇದರೊಂದಿಗೆ, ಅದಾನಿ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಇದೇ ಮೊದಲ ಬಾರಿಗೆ ಮೌನ ಮುರಿದಂತಾಗಿದೆ. ‘ಎನ್​ಡಿ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನೀವು ಸದ್ಯ ಸುದ್ದಿಯಲ್ಲಿರುವ ನಿರ್ದಿಷ್ಟ ಕಂಪನಿಯೊಂದರ ಬಗ್ಗೆ ಪ್ರಶ್ನೆ ಮಾಡುತ್ತಿರುವುದಾದರೆ ಆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಂಪನಿಗಳ ಅದೃಷ್ಟದ ಬಗ್ಗೆ ನಾನು ಮಾತನಾಡಲಾರೆ. ಕಂಪನಿಗಳು ಅವುಗಳ ಶಕ್ತಿ ಮತ್ತು ದೌರ್ಬಲ್ಯಕ್ಕನುಗುಣವಾಗಿ ಏಳಿಗೆ ಮತ್ತು ಕುಸಿತ ಕಾಣುತ್ತವೆ. ಎಸ್​ಬಿಐ ಮತ್ತು ಎಲ್​ಐಸಿ ಬಗ್ಗೆಯಷ್ಟೇ ನಾನು ಪ್ರತಿಕ್ರಿಯಿಸಬಲ್ಲೆ ಎಂದು ಹೇಳಿದ್ದಾರೆ.

‘ಯಾವುದೇ ಕಂಪನಿಯಲ್ಲಿ ಎಲ್​​ಐಸಿ ಅಥವಾ ಎಸ್​​ಬಿಐ ಹೂಡಿಕೆ ಮಟ್ಟವು ತುಂಬಾ ಕಡಿಮೆ ಇದೆ. ವಿಮಾ ಕಂಪನಿ ಮತ್ತು ಬ್ಯಾಂಕ್​ ಹೂಡಿಕೆದಾರರು ಈ ಬಗ್ಗೆ ಆತಂಕಪಡಬೇಕಿಲ್ಲ. ಒಂದು ಕಂಪನಿಯ ಭವಿಷ್ಯವು ಈ ಸಂಸ್ಥೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕ್‌ ಠೇವಣಿದಾರರು ಅಥವಾ ವಿಮಾ ಕಂಪನಿಗಳ ಪಾಲಿಸಿದಾರರು ಆತಂಕಪಡಬೇಕಿಲ್ಲ’ ಎಂದು ಅವರು ಹೇಳಿದ್ದಾರೆ.

ಅದಾನಿ ಸಮೂಹಕ್ಕೆ ಸಂಬಂಧಿಸಿದ ಆರೋಪಗಳ ವಿರುದ್ಧ ತನಿಖೆಯಾಗಬೇಕೆಂದು ಪ್ರತಿಪಕ್ಷಗಳು ಸಂಸತ್​​ನಲ್ಲಿ ಆಗ್ರಹಿಸಿದ ಬೆನ್ನಲ್ಲೇ ಹಣಕಾಸು ಕಾರ್ಯದರ್ಶಿಯವರು ಈ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Adani FPO: ಅದಾನಿ ಎಂಟರ್ಪ್ರೈಸಸ್ ಎಫ್​ಪಿಒ ರದ್ದು; ಹೂಡಿಕೆದಾರರಿಗೆ ಹಣ ಮರಳಿಸಲು ನಿರ್ಧಾರ

ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್​ಐಸಿ 4 ಶತಕೋಟಿ ಡಾಲರ್​ಗೂ ಹೆಚ್ಚು ಹೂಡಿಕೆ ಮಾಡಿದೆ ಎನ್ನಲಾಗಿದ್ದು, ಎಸ್​ಬಿಐ 2.6 ಶತಕೋಟಿ ಡಾಲರ್ ಸಾಲ ನೀಡಿದೆ ಎನ್ನಲಾಗಿದೆ. ಕಳೆದ ವಾರ ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ಲೆಕ್ಕಪತ್ರ ವಂಚನೆ ಮತ್ತು ಷೇರು ಮೌಲ್ಯ ತಿರುಚಿದ ಬಗ್ಗೆ ಅದಾನಿ ಸಮೂಹದ ವಿರುದ್ಧ ಆರೋಪ ಮಾಡಿತ್ತು. ಆ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಗಣನೀಯ ಕುಸಿತವಾಗಿತ್ತು. ಕಂಪನಿಯ ಮಾಲೀಕ ಗೌತಮ್ ಅದಾನಿ ಸಂಪತ್ತಿನಲ್ಲಿಯೂ ಗಣನೀಯ ಕುಸಿತವಾಗಿದ್ದು, ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಅವರು 16ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಈ ಮಧ್ಯೆ, ಅದಾನಿ ಸಮೂಹದ ವಿವಿಧ ಕಂಪನಿಗಳಿಗೆ ಯಾವ್ಯಾವ ಬ್ಯಾಂಕುಗಳು ಸಾಲ ನೀಡಿವೆ ಎಂದು ಆರ್​ಬಿಐ ಮಾಹಿತಿ ಕಲೆಹಾಕುತ್ತಿದೆ. ಈ ಸಂಬಂಧ ಸ್ಥಳೀಯ ಬ್ಯಾಂಕುಗಳಿಂದ ಆರ್​ಬಿಐ ವಿವರ ಕೋರಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಅದಾನಿ ಎಂಟರ್ಪ್ರೈಸಸ್ ತನ್ನ ಎಫ್​ಪಿಒ (Adani Enterprises FPO) ಯೋಜನೆಯನ್ನು ರದ್ದುಗೊಳಿಸಿದ್ದು, ಹೂಡಿಕೆದಾರರಿಗೆ ಅವರ ಹಣವನ್ನು ವಾಪಸ್ ನೀಡಲು ನಿರ್ಧರಿಸಿರುವುದಾಗಿ ಗುರುವಾರ ತಿಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ