India Map Twitter: ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ವಿರುದ್ಧ ಎಫ್ಐಆರ್; ಭೂಪಟ ತಪ್ಪಾಗಿ ತೋರಿಸಿದ್ದು ದೇಶದ್ರೋಹವೆಂದು ಆರೋಪ
ಉತ್ತರಪ್ರದೇಶದಲ್ಲಿ ಮನೀಶ್ ಮಹೇಶ್ವರಿ ವಿರುದ್ಧ ದಾಖಲಾಗುತ್ತಿರುವ ಎರಡನೇ ಎಫ್ಐಆರ್ ಇದಾಗಿದೆ. ಕಳೆದ ವಾರ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದ ಪೋಸ್ಟ್ ಶೇರ್ ಆದ ಬೆನ್ನಲ್ಲೇ ಮಹೇಶ್ವರಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಟ್ವಿಟರ್ ತನ್ನ ವೆಬ್ಸೈಟ್ನಲ್ಲಿ ಭಾರತ ಭೂಪಟವನ್ನು ತಪ್ಪಾಗಿ ತೋರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಟ್ವಿಟರ್ ಒಂದಲ್ಲ ಒಂದು ವಿಚಾರಕ್ಕೆ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದು, ಈ ಬಾರಿಯಂತೂ ಭಾರತದ ಭೂಪಟದಲ್ಲಿ ಬಹುದೊಡ್ಡ ಪ್ರಮಾದವನ್ನೇ ಮಾಡಿತ್ತು. ಜಮ್ಮು-ಕಾಶ್ಮೀರ ಒಂದು ಪ್ರತ್ಯೇಕ ದೇಶ ಮತ್ತು ಲಡಾಖ್ ಚೀನಾದ ಒಂದು ಭಾಗ ಎಂದು ಬಿಂಬಿಸಿತ್ತು. ಹಾಗಂತ ಟ್ವಿಟರ್ ಹೀಗೆ ಭಾರತ ಭೂಪಟವನ್ನು ತಪ್ಪಾಗಿ ತೋರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಒಮ್ಮೆ ಇದೇ ಪ್ರಮಾದ ಎಸಗಿತ್ತು. ಟ್ವಿಟರ್ನ ಟ್ವೀಪ್ ಲೈಫ್ ವಿಭಾಗದಲ್ಲಿ ತೋರಿಸಲಾದ ಭಾರತದ ತಪ್ಪು ಭೂಪಟವನ್ನು ನೋಡಿ ಕೇಂದ್ರ ಸರ್ಕಾರವಷ್ಟೇ ಅಲ್ಲ, ಭಾರತೀಯ ನೆಟ್ಟಿಗರೂ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ಬೆನ್ನಲ್ಲೇ ನಿನ್ನೆ ಭೂಪಟವನ್ನು ಟ್ವಿಟರ್ ತೆಗೆದು ಹಾಕಿದೆ.
ಭಾರತದ ಭೂಪಟವನ್ನು ತಪ್ಪಾಗಿ ತೋರಿಸಿದ ಟ್ವಿಟರ್ ಇಂಡಿಯಾ ವಿರುದ್ಧ ಉತ್ತರ ಪ್ರದೇಶದ ಭಜರಂಗ ದಳದ ನಾಯಕ ಪ್ರವೀಣ್ ಭಾಟಿ ಎಂಬುವರು ಬುಲಂದ್ಶಹರ್ನಲ್ಲಿ ದೂರು ದಾಖಲಿಸಿದ್ದರು. ಇದೊಂದು ದೇಶದ್ರೋಹ ಕೃತ್ಯವಾಗಿದ್ದು, ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರವೀಣ್ ದೂರಿನಲ್ಲಿ ಉಲ್ಲೇಖಿಸಿದ್ದರು. ಇದೀಗ ಮನೀಶ್ ಮಹೇಶ್ವರಿ ವಿರುದ್ಧ ಐಪಿಸಿ ಸೆಕ್ಷನ್ 505ರಡಿ (ದ್ವೇಷ ಉತ್ತೇಜಿಸುವುದು, ಸ್ವಾಸ್ಥ್ಯ ಕದಡುವುದು) ಪ್ರಕರಣ ದಾಖಲಾಗಿದೆ. ಟ್ವಿಟರ್ ಇಂಡಿಯಾದಲ್ಲಿ ಕೆಲಸ ಮಾಡುವ ಅಮೃತಾ ತ್ರಿಪಾಠಿ ಹೆಸರನ್ನೂ ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ ಅಮೃತಾ ತ್ರಿಪಾಠಿ, ಭಾರತದ ಭೂಪಟ ತಪ್ಪಾಗಿ ಚಿತ್ರಿಸಲ್ಪಟ್ಟಿದ್ದರಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಉತ್ತರಪ್ರದೇಶದಲ್ಲಿ ಮನೀಶ್ ಮಹೇಶ್ವರಿ ವಿರುದ್ಧ ದಾಖಲಾಗುತ್ತಿರುವ ಎರಡನೇ ಎಫ್ಐಆರ್ ಇದಾಗಿದೆ. ಕಳೆದ ವಾರ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದ ಪೋಸ್ಟ್ ಶೇರ್ ಆದ ಬೆನ್ನಲ್ಲೇ ಮಹೇಶ್ವರಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಟ್ವಿಟರ್ ವಿರುದ್ಧ ಮಾತ್ರವಲ್ಲದೆ, ಪತ್ರಕರ್ತರಾದ ರಾಣಾ ಅಯೂಬ್, ಸಾಬಾ ನಖ್ವಿ ಮತ್ತು ಕೆಲವು ಕಾಂಗ್ರೆಸ್ ಮುಖಂಡರ ಹೆಸರೂ ಕೇಳಿಬಂದಿತ್ತು. ಕೋಮು ಸೌಹಾರ್ದತೆ ಕದಡುವ ದೃಷ್ಟಿಯಿಂದ ಈ ಪೋಸ್ಟ್ನ್ನು ಶೇರ್ ಮಾಡಲಾಗಿದೆ ಎಂದು ದೂರು ನೀಡಲ್ಪಟ್ಟಿತ್ತು. ಆ ಪ್ರಕರಣದಲ್ಲಿ ಮನೀಶ್ ಮಹೇಶ್ವರಿ ಬಂಧನಕ್ಕೆ ಕರ್ನಾಟಕ ಹೈಕೋರ್ಟ್ನಿಂದ ರಕ್ಷಣೆ ಸಿಕ್ಕಿತ್ತು. ಮನೀಶ್ ಮಹೇಶ್ವರಿ ಬೆಂಗಳೂರು ನಿವಾಸಿಯಾಗಿದ್ದು, ಮತ್ತೊಮ್ಮೆ ಉತ್ತರಪ್ರದೇಶದಲ್ಲೇ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Twitter: ಭಾರತದ ತಪ್ಪು ಭೂಪಟ ಪ್ರದರ್ಶಿಸಿದ ಟ್ವಿಟರ್ ವಿರುದ್ಧ ಕೇಂದ್ರ ಸರ್ಕಾರ ಕ್ರಮ
(FIR Registered Against Twitter India MD Manish Maheshwari In Uttar Pradesh Police Station)