ಕೈ ಸಾಲ ಹೆಚ್ಚಾಗಿ ಸಾಲ ತೀರಿಸಲಾಗದೆ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಳವನೂರು ಬಳಿಯ ಪಡುಪಾಳೆಯಂ ದಂಪತಿ ಮೋಹನ್ ಮತ್ತು ವಿಮಲೇಶ್ವರಿ ಸೇರಿ 8 ವರ್ಷದ ರಾಜಶ್ರೀ, 5 ವರ್ಷದ ನಿತ್ಯಶ್ರೀ ಮತ್ತು 4 ವರ್ಷದ ಶಿವಪಾಲ ಅನ್ನೋ ಮೂರು ಮುದ್ದಾದ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುದ್ದಾದ ಮೂರು ಮಕ್ಕಳೊಂದಿಗೆ ಈ ತುಂಬು ಕುಟುಂಬ ಆನಂದವಾಗಿತ್ತು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಮೋಹನ್ ಸಹ ಬಡಗಿ ಕೆಲಸ ಮಾಡಿಕೊಂಡು ಹಾಯಾಗಿ ಇದ್ರು. ಆದ್ರೆ, ಯಾವಾಗ ತಮ್ಮ ವ್ಯಾಪಾರವನ್ನ ವಿಸ್ತರಿಸಲು ಸಾಲ ಪಡೆದ್ರೋ.. ಅಲ್ಲಿಂದ ಈ ಸುಂದರ ಕುಟುಂಬಕ್ಕೆ ಕೇಡುಗಾಲ ಆರಂಭವಾಯ್ತು.
ಕೈ ಸಾಲಕ್ಕೆ ಬಲಿಯಾದವು ತಮಿಳುನಾಡಿನ ಐದು ಜೀವಗಳು!
37 ವರ್ಷದ ಮೋಹನ್ಗೆ ಕೈ ಸಾಲ ಕೊಟ್ಟಿದ್ದವರು ಪದೇಪದೆ ಮನೆ ಬಳಿ ಬಂದು ಗಲಾಟೆ ಮಾಡ್ತಿದ್ರಂತೆ. ಅಲ್ದೆ, ಸರಿಯಾದ ಸಮಯಕ್ಕೆ ಬಡ್ಡಿ ಕೂಡ ಕಟ್ಟುತ್ತಿಲ್ಲ. ನಮ್ಮ ಸಾಲ ಶೀಘ್ರವೇ ವಾಪಸ್ ಕೊಡಿ ಅಂತಾ ಮನೆ ಬಳಿ ಬಂದು ಗಲಾಟೆ ಮಾಡಿದ್ರಂತೆ. ಇದ್ರಿಂದ ಮನನೊಂದ ಮೋಹನ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ರು.
ತಾವು ಸತ್ತ ಬಳಿಕ ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡ್ತಾರೆ ಅನ್ನೋ ಕಾರಣಕ್ಕೆ ಹೆಂಡತಿ, ಮಕ್ಕಳನ್ನ ಜೊತೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ, ನೇಣಿಗೆ ಶರಣಾಗಿದ್ದಾರೆ. ನಿನ್ನೆ ಬೆಳಗ್ಗೆ ಎಷ್ಟು ಹೊತ್ತಾದ್ರೂ. ಇವರ ಮನೆ ಬಾಗಿಲು ತೆಗೆದಿಲ್ಲ. ಇದ್ರಿಂದ ಅನುಮಾನಗೊಂಡ ನೆರೆಹೊರೆಯವರು ಬಾಗಿಲು ಒಡೆದು ನೋಡಿದಾಗ, ಈ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ನೆರೆಹೊರೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವಗಳನ್ನ ಇಳಿಸಿ, ವಿಲ್ಲುಪುರಂ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಮೃತ ವಿಮಲೇಶ್ವರಿ ಕುಟುಂಬಸ್ಥರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಕೈ ಸಾಲ ಕೊಟ್ಟಿದ್ದವರ ಹುಡುಕಾಟ ನಡೆಸಿದ್ದಾರೆ. ಒಟ್ನಲ್ಲಿ ಕೈ ಸಾಲ ಎಂಬ ಸಾಲದ ಶೂಲಕ್ಕೆ ಐವರ ತುಂಬು ಕುಟುಂಬ ಬಲಿಯಾಗಿದ್ದು ಮಾತ್ರ ವಿಪರ್ಯಾಸ.