‘ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಸುತ್ತೀರಿ?‘: ಸುಪ್ರೀಂಕೋರ್ಟ್

|

Updated on: Mar 20, 2021 | 12:11 PM

Supreme Court on Reservation: ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಮುಕುಲ್ ರೋಹ್ಟಗಿ, ನಾವು ಮುಂದುವರೆದಿದ್ದೇವೆ ನಿಜ. ಆದರೆ ದೇಶದಲ್ಲಿ ಈಗಲೂ ಹಸಿವಿನಿಂದ ಜನ ಸಾಯುತ್ತಾರೆ. ಜನಸಂಖ್ಯೆ ಹೆಚ್ಚಾದಂತೆ ಹಿಂದುಳಿದ ಜನರ ಸಂಖ್ಯೆಯೂ ಹೆಚ್ಚಿದೆ ಎಂದು ವಿವರಿಸಿದರು.

‘ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಸುತ್ತೀರಿ?‘: ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್​
Follow us on

ದೆಹಲಿ: ‘ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಒದಗಿಸಲಾಗಿರುವ ಮೀಸಲಾತಿಯನ್ನು ಇನ್ನೂ ಎಷ್ಟು ವರ್ಷಗಳ ಕಾಲ ಮುಂದುವರೆಸುತ್ತೀರಿ’ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಮರಾಠಾ ಕೋಟಾದಡಿ ಮೀಸಲು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮಹಾರಾಷ್ಟ್ರ ಸರ್ಕಾರದ ವಾದವನ್ನು ಆಲಿಸಿದೆ. ಮೀಸಲಾತಿಗೆ ಮಿತಿ ವಿಧಿಸದಿದ್ದರೆ ಸಮಾನತೆ ಎಂಬ ಪರಿಕಲ್ಪನೆಗೆ ಅರ್ಥವಿರುತ್ತದೆಯೇ? ಎಂದು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿರುವ ನ್ಯಾಯಮೂರ್ತಿ  ಅಶೋಕ್ ಭೂಷಣ್ ಅವರ ನೇತೃತ್ವದ ಪಂಚಸದಸ್ಯ ಪೀಠ, ಮಿತಿಯಿಲ್ಲದ ಮೀಸಲಾತಿ ಮುಂದೊಂದು ದಿನ ಅರ್ಥವನ್ನೇ ಕಳೆದುಕೊಳ್ಳಲಿದೆ ಎಂದು ಪ್ರತಿಪಾದಿಸಿದೆ. (Supreme Court asked how many generations reservations will continue during hearing on Maratha Reservation case)  ಮರಾಠಾ ಕೋಟಾದಡಿ ಮೀಸಲಾತಿ ಕಲ್ಪಿಸಿದ ಮಹಾರಾಷ್ಟ್ರ ಸರ್ಕಾರಕ್ಕೆ ಹಿಂದಿನಿಂದಲೂ ಜಾರಿಯಲ್ಲಿರುವ ಮೀಸಲಾತಿ ಕಲ್ಪನೆಯನ್ನು ಎಷ್ಟು ತಲೆಮಾರುಗಳ ಕಾಲ ಮುಂದುವರೆಸುವ ಯೋಚನೆ ಹೊಂದಿದ್ದೀರಿ ಎಂದು ಪ್ರಶ್ನಿಸಿದೆ. 

ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಮೀಸಲಾತಿ ನೀಡಲು ಮಿತಿ ವಿಧಿಸಿರುವ ಮಂಡಲ್ ನ್ಯಾಯ ತೀರ್ಮಾನವನ್ನು ಮರು ಪರಿಶೀಲಿಸಬೇಕು ಎಂದು ಕೋರ್ಟ್​ನ ಮುಂದೆ ಮಂಡಿಸಿದರು. ಮಂಡಲ್ ನ್ಯಾಯ ವರದಿಯನ್ನು 1931ರ ಜನಗಣತಿಯ ಆಧಾರದ ಮೇಲೆ ಸಲ್ಲಿಸಲಾಗಿದೆ. ಆದರೆ ಅಂದಿನ ಜನಸಂಖ್ಯೆಗೂ ಇಂದಿನ ಜನಸಂಖ್ಯೆ ಮತ್ತು ಸಾಮಾಜಿಕ ಸ್ಥಿತಿಗತಿಗೂ ಭಾರಿ ವ್ಯತ್ಯಾಸವಿದೆ. ಮೀಸಲು ಕೋಟಾ ನೀಡುವ ಅಧಿಕಾರವನ್ನು ಕೋರ್ಟ್ ರಾಜ್ಯಗಳಿಗೆ ಬಿಟ್ಟುಕೊಡಬೇಕು ಎಂದು ವಾದಿಸಿದರು.

ಮಂಡಲ್ ನ್ಯಾಯ ತೀರ್ಮಾನ ಅಥವಾ ಇಂದ್ರಾ ಸಾಹ್ನೇ ಪ್ರಕರಣದ ವಿವಿಧ ಆಯಾಮಗಳನ್ನು ಎದುರಿಟ್ಟುಕೊಂಡು ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಕೇಂದ್ರ ಸರ್ಕಾರದ ಆರ್ಥಿಕವಾಗಿ ಹಿಂದುಳಿದವರಿಗಾಗಿ ನೀಡಿರುವ ಶೇ 10ರಷ್ಟು ಮೀಸಲಾತಿ ಶೇ 50ರ ಮೀಸಲಾತಿ ಮಿತಿಯನ್ನು ಮುರಿದಿದೆ ಎಂದು ವಾದಿಸಿದರು. ಅವರ ವಾದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಮೀಸಲಾತಿಯಲ್ಲಿ ಮಿತಿಯೇ ಇಲ್ಲದಿದ್ದರೆ ಸಮಾನತೆ ಎಂಬ ಕಲ್ಪನೆಗೆ ಬೆಲೆಯೇ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ಸ್ವಾತಂತ್ರ್ಯ ಲಭಿಸಿದಾಗಿನಿಂದಲೂ ರಾಜ್ಯಗಳು ಹಿಂದುಳಿದ ವರ್ಗಗಳನ್ನು ಮುನ್ನೆಲೆಗೆ ತರಲು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಹಾಗಾದರೆ ಈ ಯೋಜನೆಗಳಿಂದ ಹಿಂದುಳಿದ ವರ್ಗಗಳಲ್ಲಿ ಅಭಿವೃದ್ಧಿ ಕಂಡುಬಂದಿದೆಯೇ ಎಂದು ಕೋರ್ಟ್ ಪ್ರಶ್ನಿಸಿತು. ಕೋರ್ಟ್​ನ ಈ ಪ್ರಶ್ನೆಗೆ ಉತ್ತರಿಸಿದ ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಮುಕುಲ್ ರೋಹ್ಟಗಿ, ನಾವು ಮುಂದುವರೆದಿದ್ದೇವೆ ನಿಜ. ಆದರೆ ದೇಶದಲ್ಲಿ ಈಗಲೂ ಹಸಿವಿನಿಂದ ಜನ ಸಾಯುತ್ತಾರೆ. ಜನಸಂಖ್ಯೆ ಹೆಚ್ಚಾದಂತೆ ಹಿಂದುಳಿದ ಜನರ ಸಂಖ್ಯೆಯೂ ಹೆಚ್ಚಿದೆ ಎಂದು ವಿವರಿಸಿದರು.

ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

ಇದನ್ನೂ ಓದಿ: ಶೇ.50ರಷ್ಟು ಮೀಸಲಾತಿಯನ್ನು ಲಕ್ಷ್ಮಣರೇಖೆಯಂತೆ ಪಾಲಿಸಬೇಕು; ಮರಾಠಾ ಮಿಸಲಾತಿ ಕುರಿತು ಹಿರಿಯ ವಕೀಲ ಅರವಿಂದ ದಾತಾರ್ ವಾದ

ವಕೀಲರು ಜನರ ಜತೆ ಸಂಪರ್ಕಕ್ಕೆ ಬಂದರಷ್ಟೇ ಜೀವನ ನಡೆಸಬಹುದು; ಸುಪ್ರೀಂಕೋರ್ಟ್

ಉತ್ತಮ ಅಂಕಗಳಿಸಿದ ಮೀಸಲು ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕೆ ಬರುತ್ತಾರೆ: ಸುಪ್ರೀಂಕೋರ್ಟ್​ ತೀರ್ಪು

Published On - 11:06 am, Sat, 20 March 21