ಕಾಂಟ್ರಾಕ್ಟ್​ ಕಿಲ್ಲರ್​ ಮೂಲಕ ಹೆತ್ತ ಮಗಳನ್ನೇ ಕೊಲ್ಲಲು ಪ್ಲಾನ್; ಮಾಜಿ ಶಾಸಕನ ಬಂಧನ

| Updated By: ಸುಷ್ಮಾ ಚಕ್ರೆ

Updated on: Jul 05, 2022 | 10:17 AM

ಮರ್ಯಾದಾ ಹತ್ಯೆಗಾಗಿ ಕಾಂಟ್ರಾಕ್ಟ್​ ಕಿಲ್ಲರ್​ಗೆ 20 ಲಕ್ಷ ರೂ.ಗಳನ್ನು ನೀಡಲಾಗಿತ್ತು. ಆದರೆ, ಕೊಲೆ ಮಾಡಲು ಹೋಗಿದ್ದ ಆರೋಪಿಗಳು ಈ ವಿಷಯವನ್ನು ಬಾಯಿಬಿಟ್ಟಿದ್ದರಿಂದ ಸುರೇಂದ್ರ ಶರ್ಮಾ ಅವರನ್ನು ಬಂಧಿಸಲಾಗಿದೆ.

ಕಾಂಟ್ರಾಕ್ಟ್​ ಕಿಲ್ಲರ್​ ಮೂಲಕ ಹೆತ್ತ ಮಗಳನ್ನೇ ಕೊಲ್ಲಲು ಪ್ಲಾನ್; ಮಾಜಿ ಶಾಸಕನ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬಿಹಾರ: ಬಿಹಾರದ ಮಾಜಿ ಶಾಸಕ ಸುರೇಂದ್ರ ಶರ್ಮಾ ತನ್ನ ಸ್ವಂತ ಮಗಳನ್ನು ಕೊಲ್ಲಲು ಕಾಂಟ್ರಾಕ್ಟ್​ ಕಿಲ್ಲರ್​ನನ್ನು (Contract Killer) ನೇಮಿಸಿದ್ದಕ್ಕಾಗಿ ಇದೀಗ ಜೈಲು ಸೇರಿದ್ದಾರೆ. ತನ್ನ ಮಗಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಅವರು ಕೋಪಗೊಂಡಿದ್ದರು. ಇದೇ ಕಾರಣಕ್ಕೆ ಮಗಳನ್ನು ಕೊಲೆ (Murder) ಮಾಡಲು ಬಾಡಿಗೆ ಹಂತಕನನ್ನು ನೇಮಕ ಮಾಡಿದ್ದರು. ಈ ವಿಷಯ ಇದೀಗ ಬಯಲಾಗಿದ್ದು, ಅವರನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಮರ್ಯಾದಾ ಹತ್ಯೆಗಾಗಿ ಕಾಂಟ್ರಾಕ್ಟ್​ ಕಿಲ್ಲರ್​ಗೆ 20 ಲಕ್ಷ ರೂ.ಗಳನ್ನು ನೀಡಲಾಗಿತ್ತು. ಆದರೆ, ಕೊಲೆ ಮಾಡಲು ಹೋಗಿದ್ದ ಆರೋಪಿಗಳು ಈ ವಿಷಯವನ್ನು ಬಾಯಿಬಿಟ್ಟಿದ್ದರಿಂದ ಸುರೇಂದ್ರ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಪಾಟ್ನಾ ನಗರ (ಪೂರ್ವ) ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.

ಜುಲೈ 1 ಮತ್ತು 2ರ ಮಧ್ಯರಾತ್ರಿ ಸುರೇಂದ್ರ ಶರ್ಮಾ ಅವರ ಮಗಳ ಮೇಲೆ ಕೊಲೆ ಯತ್ನ ನಡೆದಿತ್ತು. ಶ್ರೀ ಕೃಷ್ಣಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಆ ಯುವತಿ ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಗುಂಡು ಹಾರಿಸಿದ ಆರೋಪಿಗಳು ಬೈಕ್​ನಲ್ಲಿ ವೇಗವಾಗಿ ಹೋಗಿದ್ದಾರೆ.

ಇದನ್ನೂ ಓದಿ: ಮಂಗಳಮುಖಿ ಕೊಲೆ ಪ್ರಕರಣ; 3 ವರ್ಷ ಕಳೆದರೂ ಪತ್ತೆಯಾಗದ ಮತ್ತೋರ್ವ ಮಂಗಳಮುಖಿ, ಮರ್ಯಾದಾ ಹತ್ಯೆ ನಡೆದಿರುವ ಶಂಕೆ

ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಮಾಜಿ ಶಾಸಕರ ಮಗಳನ್ನು ಕೊಲ್ಲಲು ಬಾಡಿಗೆ ಪಡೆದಿದ್ದ ಗ್ಯಾಂಗ್ ಬಳಿಯಿಂದ 3 ಪಿಸ್ತೂಲ್‌ಗಳು, ಮದ್ದುಗುಂಡುಗಳು ಮತ್ತು ನಂಬರ್ ಪ್ಲೇಟ್ ಇಲ್ಲದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಾಡಿಗೆ ಹಂತಕರ ತಂಡದ ನಾಯಕ ಅಭಿಷೇಕ್‌ನನ್ನು ಬಂಧಿಸಲಾಗಿದ್ದು, ಆತನ ಇತರ ಇಬ್ಬರು ಸಹಚರರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸುರೇಂದ್ರ ಶರ್ಮಾ ಈ ಹಿಂದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಇದುವರೆಗೆ ಯಾವುದೇ ಪಕ್ಷದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅಭಿಷೇಕ್ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಸುರೇಂದ್ರ ಶರ್ಮಾ 1990ರ ದಶಕದಲ್ಲಿ ಸರನ್ ಜಿಲ್ಲೆಯಿಂದ ಶಾಸಕಾಂಗ ಸಭೆಯಲ್ಲಿ ಸೇವೆ ಸಲ್ಲಿಸಿದ್ದಾರೆ.