Sidlaghatta: ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿ ಅಂತಾ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ!
Sidlaghatta police: ಪ್ರಿಯಕರನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು, ತಮ್ಮಿಬ್ಬರ ಮೋಜುಮಸ್ತಿಗೆ ಗಂಡ ಅಡ್ಡಿ ಅಂತ ಸ್ಕೆಚ್ ಹಾಕಿ... ವಿಕೃತವಾಗಿ ಗಂಡನನ್ನು ಕೊಂದಿದ್ದಕ್ಕೆ ಈಗ ನೌಟಂಕಿ ಮಹೆರ್ ಹಾಗೂ ಆಕೆಯ ಪ್ರಿಯಕರ ತೌಸೀಫ್... ಇಬ್ಬರೂ ಅಂದರ್ ಆಗಿದ್ದಾರೆ.
ಗಂಡನಿದ್ರೂ… ಗಂಡನ ಸಹೋದರ ಸಂಬಂಧಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯೊರ್ವಳು, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು, ಪ್ರಿಯಕರ ಜೊತೆ ಸೇರಿ ವಿಕೃತವಾಗಿ ಕೊಂದು, ಆತ್ಮಹತ್ಯೆ ಅಂತ ಪೊಲೀಸರಿಗೆ ದೂರು ನೀಡಿದ್ದಳು. ಆದ್ರೆ ಮಿಟಕಲಾಡಿ ಮಹಿಳೆಯ ನಿಜ ಬಣ್ಣ ಬಯಲು ಮಾಡಿರುವ ಪೊಲೀಸರು… ಮಹಿಳೆಯ ಜೊತೆ ಆಕೆಯ ಪ್ರಿಯಕರನನ್ನು ಬಂಧಿಸಿ ಕೊಲೆ ಪ್ರಕರಣ ಭೇದಿಸಿದ್ದಾರೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ಓದಿ!!
ವಿಕೃತವಾಗಿ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದಳು ಮಿಟಕಲಾಡಿ:
ಮಳ್ಳಿ ಮಳ್ಳಿ ಮಂಚಕ್ಕೆ ಕಾಲು ಎಷ್ಟು ಅಂದ್ರೆ ಮೂರು ಮತ್ತೊಂದು ಅನ್ನೊ ಹಾಗೆ… ಪಾಪ ಗಂಡನ ಶವದ ಬಳಿ ನಿಂತು ಅಯ್ಯೊ ನನಗೆ ಯಾರು ಇನ್ನು ದಿಕ್ಕು ಅನ್ನೊ ರೀತಿಯಲ್ಲಿ ಪೋಸ್ ಕೊಟ್ಟಿರುವ ಹಂತಕಿ ಪತ್ನಿ ಮೆಹರ್ ಇವಳೇ (ಮೇಲಿನ ಚಿತ್ರದಲ್ಲಿ). ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ದಿನಾಂಕ ನವೆಂಬರ್ 26, 2021ರಂದು ಗ್ರಾಮದ ದಾದಾಪೀರ್ ಅನ್ನೊ ವಿವಾಹಿತ ಮನೆಯಲ್ಲಿ ಸುಟ್ಟು ಕರುಕಲಾಗಿದ್ದ.
ಆತನ ಪತ್ನಿ ಮೆಹರ್… ದಿಬ್ಬೂರಹಳ್ಳಿ ಪೊಲೀಸರಿಗೆ ದೂರು ನೀಡಿ, ತನ್ನ ಗಂಡ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ದೂರು ದಾಖಲು ಮಾಡಿದ್ದಳು. ಪೊಲೀಸರು ಅಂದು ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ರೆ ಬರೋಬ್ಬರಿ ಆರು ತಿಂಗಳ ನಂತರ ಅದು ಆತ್ಮಹತ್ಯೆ ಅಲ್ಲ, ಕೊಲೆ ಅಂತ ಬಯಲಾಗಿದೆ.
ಅಂದು ದಾದಾಪೀರ್, ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡಿಲ್ಲ, ಕಾರ್ಬನ್ ಡೈ ಆಕ್ಸೈಡ್ ಸೇವಿಸಿ ಸತ್ತಿದ್ದಾನೆ, ಗ್ಯಾಸ್ ಬರ್ನರ್ ನ ಹೊಗೆ ಆತನ ಹೊಟ್ಟೆಯಲ್ಲಿ ಹೋಗಿ ಸತ್ತಿದ್ದಾರೆ, ಹೊಟ್ಟೆಯಲ್ಲಿ ವಿಷ ಹೊಗಿದೆ. ಸಹಜ ಬೆಂಕಿಯಿಂದ ಸತ್ತಿಲ್ಲ ಅಂತ ಎಫ್.ಎಸ್.ಎಲ್ ವರದಿ ಬಂದಿದೆ. ಇದ್ರಿಂದ ಎಚ್ಚೆತ್ತ ಶಿಡ್ಲಘಟ್ಟ ಪೊಲೀಸ್ ಇನ್ಸ್ಪೆಕ್ಟರ್ ಧರ್ಮೇಗೌಡ ಅವರು ಮೃತನ ಪತ್ನಿ ಮಹೆರ್ ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭಯಾನಕ ಸತ್ಯ ಬಯಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.
ಒಂದೇ ಗ್ರಾಮದ ಮೃತನ ಸಹೋದರ ಸಂಬಂಧಿ ತೌಸೀಫ್ ಜೊತೆ ಮೆಹರ್.. ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅದಕ್ಕೆ ಗಂಡ ಅಡ್ಡಿ ಅನ್ನೊ ಕಾರಣಕ್ಕೆ ಗಂಡನಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಿ, ಕುಡಿಸಿ ಪ್ರಜ್ಞೆ ತಪ್ಪಿಸಿದ ನಂತರ ಗ್ಯಾಸ್ ಬರ್ನರ್ ನಿಂದ ಆತನ ಹೊಟ್ಟೆ, ಗುಪ್ತಾಂಗ, ಎದೆಯ ಭಾಗವನ್ನು ಸುಟ್ಟು ಕೊಂದಿದ್ದಾರೆ ಎನ್ನುತ್ತಾರೆ ಧರ್ಮೇಗೌಡ, ಶಿಡ್ಲಘಟ್ಟ ಸರ್ಕಲ್ ಇನ್ಸ್ಪೆಕ್ಟರ್.
ಪ್ರಿಯಕರನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು, ತಮ್ಮಿಬ್ಬರ ಮೋಜುಮಸ್ತಿಗೆ ಗಂಡ ಅಡ್ಡಿ ಅಂತ ಸ್ಕೆಚ್ ಹಾಕಿ… ವಿಕೃತವಾಗಿ ಗಂಡನನ್ನು ಕೊಂದಿದ್ದಕ್ಕೆ ಈಗ ನೌಟಂಕಿ ಮಹೆರ್ ಹಾಗೂ ಆಕೆಯ ಪ್ರಿಯಕರ ತೌಸೀಫ್… ಇಬ್ಬರೂ ಅಂದರ್ ಆಗಿದ್ದಾರೆ.
-ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ