ಚೆನ್ನೈ, ಮಾರ್ಚ್ 24: ಲೋಕಸಭೆ ಚುನಾವಣೆಗೆ (Lok Sabha Election) ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಪ್ರಕಟವಾಗುತ್ತಿವೆ. ಕಾಂಗ್ರೆಸ್ (Congress) ಶನಿವಾರ (ಮಾ.23) ರಂದು ನಾಲ್ಕನೇ ಪಟ್ಟಿ ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ 46 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಇದರಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ (Sasikanth Senthil) ಅವರಿಗೂ ಟಿಕೆಟ್ ನೀಡಿದ್ದು, ತಿರುವಳ್ಳೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಸಿಕಾಂತ್ ಸೆಂಥಿಲ್ ಅವರು ಕರ್ನಾಟಕದ ದಕ್ಷಿಣ ಕನ್ನಡದಲ್ಲಿ (Dakshin Kannada) ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು.
ಸಸಿಕಾಂತ್ ಸೆಂಥಿಲ್ ಅವರು ಮೂಲತಃ ತಮಿಳುನಾಡಿನವರು. ಇವರು 2009ನೇ ಬ್ಯಾಚ್‌ನ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದರು. 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗಲೇ ನಾಗರೀಕ ಸೇವೆಗೆ ರಾಜಿನಾಮೆ ನೀಡಿದರು. ಸಸಿಕಾಂತ್ ಸೆಂಥಿಲ್ ಅವರು ರಾಜಿನಾಮೆ ನೀಡುವಾಗಲೇ ರಾಜಕೀಯಕ್ಕೆ ಬರುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಕಾಂಗ್ರೆಸ್ ಪಕ್ಷವನ್ನು ಸೇರಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಬಹುಮತದೊಂದಿಗೆ ಗೆಲುವು ಸಾಧಿಸುವಲ್ಲಿ ಸಸಿಕಾಂತ್ ಸೆಂಥಿಲ್ ಅವರ ಮಹತ್ವದ ಪಾತ್ರವಿದೆ. ಹೌದು ಕಾಂಗ್ರೆಸ್ ಸೇರಿದ್ದ ಸಸಿಕಾಂತ್ ಸೆಂಥಿಲ್ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ವಾರ್ ರೂಂನ ಮುಖ್ಯಸ್ಥರಾಗಿದ್ದರು. ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿಯೂ ಪಕ್ಷದ ಸಾಮಾಜಿಕ ಜಾಲತಾಣಗಳ ಉಸ್ತುವಾರಿಯಾಗಿದ್ದರು. ಅಲ್ಲದೆ ಐದು ಗ್ಯಾರೆಂಟಿ ಯೋಜನೆಗಳ ಹಿಂದೆ ಕೂಡ ಸಸಿಕಾಂತ್ ಸೆಂಥಿಲ್ರ ಪಾತ್ರ ಪ್ರಮುಖವಾಗಿತ್ತು.
ಸಸಿಕಾಂತ್ ಸೆಂಥಿಲ್ ಮತ್ತು ಕೆ ಅಣ್ಣಾಮಲೈ ಇಬ್ಬರೂ ಮೂಲತಃ ತಮಿಳುನಾಡಿನವರು ಮತ್ತು ಕರ್ನಾಟಕ ಕೇಡರ್ ಯೂನಿಯನ್ ನಾಗರಿಕ ಸೇವೆಯಿಂದ ಬಂದವರು. ಸಸಿಕಾಂತ್ ಸೆಂಥಿಲ್ ಅವರು 2009ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು. ಅಣ್ಣಮಲೈ 2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಇಬ್ಬರೂ ನಾಗರೀಕ ಸೇವೆಗೆ ತ್ಯಜಿಸಿ ರಾಜಕೀಯ ಪ್ರವೇಶಿಸಿದ್ದಾರೆ. ಇಬ್ಬರು ರಾಜಕೀಯ ಸೈದ್ಧಾಂತಿಕವಾಗಿ ವಿರುದ್ಧವಾಗಿರುತ್ತಾರೆ. ತಿರುವಳ್ಳೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೆಂಥಿಲ್ ಮತ್ತು ಕೊಯಮತ್ತೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈ ಸ್ಪರ್ಧಿಸುತ್ತಿದ್ದಾರೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ಕಾಂಗ್ರೆಸ್ನಿಂದ ಚುನಾವಣಾ ಉಸ್ತುವಾರಿಯಾಗಿ ಸೆಂಥಿಲ್ ಮತ್ತು ಬಿಜೆಪಿಯಿಂದ ಚುನಾವಣಾ ಉಸ್ತುವಾರಿಯಾಗಿ ಅಣ್ಣಾಮಲೈ ಕಾರ್ಯನಿರ್ವಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:45 am, Sun, 24 March 24