‘ಮೋದಿಯನ್ನು ಸೋಲಿಸಿ’ ಎಂದು ಬಹಿರಂಗ ಕರೆ ನೀಡಿದ ಪಾಕಿಸ್ತಾನದ ಮಾಜಿ ಸಚಿವ

|

Updated on: May 29, 2024 | 4:55 PM

ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಕಿಸ್ತಾನದ ನಾಯಕ, ಫವಾದ್ "ಈ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಸೋಲು ಅವಶ್ಯಕವಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಉಗ್ರವಾದವನ್ನು ಸೋಲಿಸಿದಾಗ ಭಾರತ ಮತ್ತು ಪಾಕಿಸ್ತಾನ ಹತ್ತಿರವಾಗಬಹುದು" ಎಂದು ಹೇಳಿದ್ದಾರೆ.

ಮೋದಿಯನ್ನು ಸೋಲಿಸಿ ಎಂದು ಬಹಿರಂಗ ಕರೆ ನೀಡಿದ ಪಾಕಿಸ್ತಾನದ ಮಾಜಿ ಸಚಿವ
ಫವಾದ್ ಚೌಧರಿ
Follow us on

ದೆಹಲಿ ಮೇ 29: ಜೂನ್ 1 ರಂದು ಲೋಕಸಭೆ ಚುನಾವಣೆ (Lok Sabha Election) 2024 ರ ಕೊನೆಯ ಹಂತದ ಮತದಾನ ನಡೆಯಲಿದೆ. ಇದರ ನಡುವೆಯೇ ರಾಹುಲ್ ಗಾಂಧಿ (Rahul Gandhi) ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಹೊಗಳಿದ ಪಾಕಿಸ್ತಾನದ (Pakistan) ಮಾಜಿ ಸಚಿವ ಫವಾದ್ ಚೌಧರಿ (Fawad Chaudhry) ‘ಮೋದಿಯನ್ನು ಸೋಲಿಸಿ’ ಎಂದು ಬಹಿರಂಗ ಕರೆ ನೀಡಿದ್ದಾರೆ. ಈಗ ನಡೆಯುತ್ತಿರುವ ಚುನಾವಣೆಯ ನಡುವೆ ರಾಜಕೀಯ ಬಿರುಗಾಳಿ ಸೃಷ್ಟಿಸಿದ ಪಾಕಿಸ್ತಾನಿ ನಾಯಕ ಮಂಗಳವಾರ ಪ್ರತಿಪಕ್ಷಗಳಿಗೆ ಬೆಂಬಲ ನೀಡುವ ಮೂಲಕ ಪಾಕಿಸ್ತಾನದ ಪ್ರತಿಯೊಬ್ಬರೂ ನರೇಂದ್ರ ಮೋದಿ ಅವರನ್ನು ಸೋಲಿಸಬೇಕೆಂದು ಬಯಸುತ್ತಾರೆ ಎಂದು ಹೇಳಿದರು. ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಕಿಸ್ತಾನದ ನಾಯಕ, ಫವಾದ್ “ಈ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಸೋಲು ಅವಶ್ಯಕವಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಉಗ್ರವಾದವನ್ನು ಸೋಲಿಸಿದಾಗ ಭಾರತ ಮತ್ತು ಪಾಕಿಸ್ತಾನ ಹತ್ತಿರವಾಗಬಹುದು” ಎಂದು ಹೇಳಿದ್ದಾರೆ.

“ಪಾಕಿಸ್ತಾನದಲ್ಲಿ ಭಾರತದ ಬಗ್ಗೆ ಯಾವುದೇ ದ್ವೇಷವಿಲ್ಲ. ಆದರೆ ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತವು ಪಾಕಿಸ್ತಾನದ ಬಗ್ಗೆ ದ್ವೇಷವನ್ನು ಹರಡುತ್ತಿದೆ. ಭಾರತೀಯ ಮತದಾರರು ಮೂರ್ಖರಲ್ಲ. ಹಿಂದೂಸ್ತಾನ್ ಪ್ರಗತಿಪರ ದೇಶವಾಗಿ ಮುಂದುವರಿಯಬೇಕು” ಎಂದು ಪಾಕಿಸ್ತಾನಿ ನಾಯಕ ಹೇಳಿದ್ದಾರೆ.

ರಾಹುಲ್ ಗಾಂಧಿಯಾಗಲಿ, ಅರವಿಂದ್ ಕೇಜ್ರಿವಾಲ್ ಆಗಲಿ ಅಥವಾ ಮಮತಾ ಬ್ಯಾನರ್ಜಿಯಾಗಲಿ – ಮೋದಿಯನ್ನು ಸೋಲಿಸುವವರಿಗೆ ಶುಭಾಶಯಗಳು ಎಂದು ಚೌಧರಿ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2019 Result: 2019ರಲ್ಲಿ ಒಮ್ಮತದಿಂದ ಗೆದ್ದು ಮತ್ತೆ ಗದ್ದುಗೆ ಏರಿದ್ದ ಮೋದಿ, ಮರುಕಳಿಸುತ್ತಾ ಇತಿಹಾಸ?

ಈ ಹಿಂದೆ ಚೌಧರಿ ಕೇಜ್ರಿವಾಲ್ ಅವರನ್ನು ಅನುಮೋದಿಸಿದಾಗ, ಅವರು ದೆಹಲಿ ಮುಖ್ಯಮಂತ್ರಿ ನೀವು ನಿಮ್ಮ ದೇಶವನ್ನು ನೋಡಿಕೊಳ್ಳಿ ಎಂದು ಉತ್ತರಿಸಿದ್ದರು. “ಚೌಧರಿ ಸಾಹಿಬ್, ನಾನು ಮತ್ತು ನನ್ನ ದೇಶದ ಜನರು ನಮ್ಮ ಸಮಸ್ಯೆಗಳನ್ನು ನಿಭಾಯಿಸಲು ಸಂಪೂರ್ಣವಾಗಿ ಸಮರ್ಥರಾಗಿದ್ದೇವೆ. ನಿಮ್ಮ ಟ್ವೀಟ್ ಅಗತ್ಯವಿಲ್ಲ. ಇದೀಗ ಪಾಕಿಸ್ತಾನದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನೀವು ನಿಮ್ಮ ದೇಶವನ್ನು ನೋಡಿಕೊಳ್ಳಿ ”ಎಂದು ಕೇಜ್ರಿವಾಲ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದರು.

ರಾಹುಲ್ ಗಾಂಧಿ ಅಥವಾ ಅರವಿಂದ್ ಕೇಜ್ರಿವಾಲ್ ಬಗ್ಗೆ ನನಗೆ ಯಾವುದೇ ಒಲವು ಇಲ್ಲ. ಅವರ ಅಭಿಪ್ರಾಯವೂ ಪಾಕಿಸ್ತಾನ ಸರ್ಕಾರವನ್ನು ಪ್ರತಿನಿಧಿಸುವುದಿಲ್ಲ ಎಂದು ಪಾಕಿಸ್ತಾನದ ನಾಯಕ ಹೇಳಿದರು. “ಆದರೆ ನಾನು ಉಗ್ರರ ವಿರುದ್ಧ ನಿಲ್ಲುವ ಯಾರನ್ನೇ ಆದರೂ  ಬೆಂಬಲಿಸುತ್ತೇನೆ. ಮೋದಿ ದ್ವೇಷ ಮತ್ತು ಉಗ್ರವಾದದ ಸಂಕೇತವಾಗಿದ್ದಾರೆ. ಹಿಂದೂ ಮಹಾಸಭಾದ ಉದಯದಿಂದಾಗಿ ಭಾರತದ ಮುಸ್ಲಿಮರು ತೀವ್ರ ದ್ವೇಷವನ್ನು ಎದುರಿಸುತ್ತಿದ್ದಾರೆ, ಪಾಕ್ ಸಂಸ್ಥಾಪಕರು ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರ ಹಕ್ಕುಗಳಿಗಾಗಿ ನಿಲ್ಲುವ ಭರವಸೆ ನೀಡಿದ್ದಾರೆ. ಪಾಕ್ ಸರ್ಕಾರಕ್ಕೆ ಇದರಲ್ಲಿ ಯಾವುದೇ ಪಾತ್ರವಿಲ್ಲ. ಆದರೆ ಭಾರತದಲ್ಲಿ ಮುಸ್ಲಿಂ ಹಕ್ಕುಗಳಿಗಾಗಿ ನಾನು ಯಾವುದೇ ಸಾಮರ್ಥ್ಯದಲ್ಲಿ ಮಾತನಾಡುತ್ತೇನೆ. ಒಂದು ಅಂಶವೆಂದರೆ ದ್ವೇಷದ ಶಕ್ತಿಗಳನ್ನು ಸೋಲಿಸಬೇಕು ಮತ್ತು ದ್ವೇಷ ಮತ್ತು ಉಗ್ರವಾದದ ಆರೆಸ್ಸೆಸ್-ಬಿಜೆಪಿಯನ್ನು ಸೋಲಿಸಬೇಕು. ಅವರನ್ನು ಸೋಲಿಸಿದವರು ಜಾಗತಿಕ ಗೌರವವನ್ನು ಗಳಿಸುತ್ತಾರೆ ಎಂದು ಫವಾದ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Wed, 29 May 24