ವಿಚ್ಛೇದನ ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಮಾಜಿ ಸಚಿವೆ ಸ್ವಾತಿ ಸಿಂಗ್; ಬಿಜೆಪಿ ಶಾಸಕನಿಗೆ ಈಗ ತಲೆಬಿಸಿ
ಮಾಜಿ ಸಚಿವೆ ಸ್ವಾತಿ ಸಿಂಗ್, ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾದ ಶ್ರುತಿ ಶ್ರೀವಾಸ್ತವ ಎದುರು ಅರ್ಜಿ ಸಲ್ಲಿಕೆ ಮಾಡಿದ್ದು, ದಯಾಶಂಕರ್ರಿಂದ ನನಗೆ ವಿಚ್ಛೇದನ ಬೇಕೇಬೇಕು ಎನ್ನುತ್ತಿದ್ದಾರೆ. ದಯಾ ಶಂಕರ್ ಅವರು ಬಿಜೆಪಿಯ ಭಲ್ಲಿಯಾ ಕ್ಷೇತ್ರದ ಶಾಸಕ. ಈ ಬಾರಿಯೂ ಗೆದ್ದಿದ್ದಾರೆ.
ಉತ್ತರ ಪ್ರದೇಶದ (Uttar Pradesh) ಮಾಜಿ ಸಚಿವೆ, ಅಂದರೆ 2017ರಿಂದ 2022ರವರೆಗೆ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಸ್ವಾತಿ ಸಿಂಗ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರ ಪತಿ ದಯಾಶಂಕರ್ ಸಿಂಗ್ ಕೂಡ ಬಿಜೆಪಿ ಶಾಸಕ. ಈ ಬಾರಿ ಚುನಾವಣೆಯಲ್ಲಿ ಬಲ್ಲಿಯಾ ಸಾದರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಪತಿಯಿಂದ ಬಿಡುಗಡೆ ಬೇಕು ಎಂದು ಸ್ವಾತಿ ಸಿಂಗ್ (Swati Singh) ವಿಚ್ಛೇದನಾ ಅರ್ಜಿ ಸಲ್ಲಿಸುತ್ತಿರುವುದು ಇದು ಎರಡನೇ ಬಾರಿ ಈ ಹಿಂದೆ 2012ರಲ್ಲಿಯೇ ಒಮ್ಮೆ ಕೌಟುಂಬಿಕ ನ್ಯಾಯಾಲಯಕ್ಕೆ ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದರು. ಆಗ ಕೋರ್ಟ್ ಪ್ರತಿಕ್ರಿಯೆ ನೀಡುವಂತೆ ಸ್ವಾತಿ ಸಿಂಗ್ ಪತಿ ದಯಾಶಂಕರ್ಗೆ ( BJP MLA Dayashankar Singh ಸೂಚಿಸಿತ್ತು. ಆದರೆ ನಂತರ ಇವರಿಬ್ಬರೂ ಕೋರ್ಟ್ಗೆ ಹೋಗಲಿಲ್ಲ. ಯಾವ ವಿಚಾರಣೆಗೂ ಹಾಜರಾಗರಲಿಲ್ಲ. ಹೀಗಾಗಿ 2018ರಲ್ಲಿ ಈ ಕೇಸ್ನ್ನು ಕೋರ್ಟ್ ಕ್ಲೋಸ್ ಮಾಡಿತ್ತು.
ಆದರೆ ಈಗ ಮತ್ತೆ ಸ್ವಾತಿ ಸಿಂಗ್ ಮತ್ತೆ ವಿಚ್ಛೇದನಾ ಅರ್ಜಿ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಯೋಗಿ ಆದಿತ್ಯನಾಥ್ ಮಾರ್ಚ್ 25ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇದೇ ಹೊತ್ತಲ್ಲಿ ಮಾಜಿ ಸಚಿವೆ ಸ್ವಾತಿ ಸಿಂಗ್, ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾದ ಶ್ರುತಿ ಶ್ರೀವಾಸ್ತವ ಎದುರು ಅರ್ಜಿ ಸಲ್ಲಿಕೆ ಮಾಡಿದ್ದು, ದಯಾಶಂಕರ್ರಿಂದ ನನಗೆ ವಿಚ್ಛೇದನ ಬೇಕೇಬೇಕು ಎನ್ನುತ್ತಿದ್ದಾರೆ. ಸದ್ಯ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. ಇನ್ನು ದಯಾಶಂಕರ್ ಸಿಂಗ್ ಇತ್ತೀಚೆಗೆ ಬಲ್ಲಿಯಾ ಕ್ಷೇತ್ರದಿಂದ ಗೆದ್ದಿದ್ದಾರೆ. ಈ ಬಾರಿ ಬಿಜೆಪಿಗೆ ಬೇರೆ ಕೆಲವು ಪಕ್ಷಗಳಿಂದ ಪ್ರಮುಖ ನಾಯಕರನ್ನು ಕರೆತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದು, ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲೂ ಇದ್ದಾರೆ. ಆದರೆ ಈಗಲೇ ಅವರು ಕೌಟುಂಬಿಕ ಸಮಸ್ಯೆಗೆ ಸಿಲುಕಿದ್ದಾರೆ.
ಈ ಸ್ವಾತಿ ಸಿಂಗ್ ರಾಜಕೀಯಕ್ಕೆ ಇಳಿದಿದ್ದೇ ಒಂದು ಸೋಜುಗ. 2016ರಲ್ಲಿ ಈಕೆಯ ಪತಿ ದಯಾಶಂಕರ್ ಸಿಂಗ್ ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಆಗ ಬಿಜೆಪಿ ಅವರನ್ನು ಉಚ್ಚಾಟನೆ ಕೂಡ ಮಾಡಿತ್ತು. ಆದರೆ ಬಿಎಸ್ಪಿ ಕಾರ್ಯಕರ್ತರು ಸುಮ್ಮನಿರದೆ ದಯಾಶಂಕರ್ ಮೇಲಿನ ಸಿಟ್ಟಿಗೆ ಸ್ವಾತಿಸಿಂಗ್ ಮತ್ತು ಅವರ ಪುತ್ರಿಯನ್ನು ಅವಹೇಳನ ಮಾಡಿದ್ದರು. ಆಗ ಸ್ವಾತಿ ಸಿಂಗ್ ತನ್ನನ್ನು ಅವಹೇಳನ ಮಾಡಿದ ಬಿಎಸ್ಪಿ ಪ್ರಮುಖ ನಾಯಕರು ಸೇರಿ ಹಲವರ ವಿರುದ್ಧ ದೂರು ನೀಡಿದ್ದರು. ಇದು ಕೆಲವರ ಬಂಧನಕ್ಕೂ ಕಾರಣವಾಗಿತ್ತು. ಅದಾದ ಬಳಿಕ ಉತ್ತರ ಪ್ರದೇಶ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯನ್ನಾಗಿ ಸ್ವಾತಿ ನೇಮಕಗೊಂಡರು. ಹಾಗೇ 2017ರಲ್ಲಿ ಸರೋಜಿನಿ ನಗರದಿಂದ ಬಿಜೆಪಿ ಟಿಕೆಟ್ ಕೂಡ ಸಿಕ್ಕಿತ್ತು. ಅದರಲ್ಲಿ ಗೆದ್ದು, ಸಚಿವರಾಗಿದ್ದರು. ಆದರೆ ಈ ಬಾರಿ ಸ್ವಾತಿಗೆ ಟಿಕೆಟ್ ಸಿಗಲಿಲ್ಲ. ಸರೋಜಿನಿ ಕ್ಷೇತ್ರದಿಂದ ಮಾಜಿ ಇಡಿ ಅಧಿಕಾರಿ ರಾಜೇಶ್ವರ್ ಸಿಂಗ್ ಕಣಕ್ಕೆ ಇಳಿದಿದ್ದರು. ಈ ಮಧ್ಯೆ ಇನ್ನೊಂದು ರೂಮರ್ ಎದ್ದಿದೆ. ಸ್ವಾತಿ ಸಿಂಗ್ ಮತ್ತು ಆಕೆಯ ಪತಿ ಇಬ್ಬರೂ ಈ ಸಲ ಚುನಾವಣೆಯಲ್ಲಿ ಸರೋಜಿನಿ ನಗರ ಕ್ಷೇತ್ರದಿಂದ ಹೇಗಾದರೂ ಟಿಕೆಟ್ ಪಡೆಯಲು ಲಾಬಿ ಮಾಡಿದ್ದರು ಎಂದೂ ಹೇಳಲಾಗಿದೆ.
ರಾಜಕೀಯದಲ್ಲಿ ಇದು ಅಪರೂಪ
ಈ ವಿಚ್ಛೇದನ ಎಂಬುದು ಬಾಲಿವುಡ್ ಕ್ಷೇತ್ರದಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಇದು ಅಪರೂಪ. ಅದರಲ್ಲೂ ಈ ಕ್ಷೇತ್ರದ ಮಹಿಳೆಯರು ಮುಂದಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ವಿರಳ. ಅಷ್ಟೇ ಅಲ್ಲ, ರಾಜಕೀಯ ನಾಯಕರ ಪತ್ನಿಯರು ತಮ್ಮ ಪತಿಯ ವಿವಿಧ ಅನೈತಿಕ ಸಂಬಂಧ, ಅಕ್ರಮಗಳು ಅರಿವಿಗೆ ಬಂದರೂ ಅದನ್ನು ಬಹಿರಂಗ ಮಾಡದೆ, ಕೋರ್ಟ್ ಮೆಟ್ಟಿಲೇರದೆ ಸುಮ್ಮನಿರುತ್ತಾರೆ. ಬರೀ ಭಾರತದಲ್ಲಿ ಅಷ್ಟೇ ಅಲ್ಲ ಅಮೆರಿಕದ ಹಿಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಪತ್ನಿ ಹಿಲರಿ ಕ್ಲಿಂಟನ್ ಕೂಡ ರಾಜಕಾರಣಿ. ತನ್ನ ಪತಿಗೆ ಶ್ವೇತ ಭವನದ ಸಿಬ್ಬಂದಿಯಾಗಿದ್ದ ಮೋನಿಕಾ ಲೆವಿನ್ಸ್ಕಿಯೊಂದಿಗೆ ಸಂಬಂಧವಿದೆ ಎಂಬುದು ಗೊತ್ತಾಗ್ಯೂ ಕೂಡ ಅವರೊಟ್ಟಿಗೇ ಇದ್ದಾರೆ.
ಇದನ್ನೂ ಓದಿ: ಪುನೀತ್ಗೆ ಮೈಸೂರು ವಿವಿಯಿಂದ ಡಾಕ್ಟರೇಟ್; ಕಾರ್ಯಕ್ರಮದಲ್ಲಿ ರಾಜ್ ಕುಟುಂಬ ಭಾಗಿ
Published On - 12:43 pm, Tue, 22 March 22