ಪೊಲೀಸ್ ಅಧಿಕಾರಿಯ ಕೊರಳುಪಟ್ಟಿ ಹಿಡಿದು ಎಳೆದಾಡಿದ ಮಹಿಳೆ; ಪೊಲೀಸರ ಮೇಲೆ ಆರೋಪ ಹೊರಿಸಿ ಫೋಟೊ ಶೇರ್ ಮಾಡಿದ ಅಖಿಲೇಶ್ ಯಾದವ್

| Updated By: ರಶ್ಮಿ ಕಲ್ಲಕಟ್ಟ

Updated on: Jul 18, 2021 | 3:30 PM

Akhilesh Yadav: ಪೊಲೀಸರು ಆರೋಪಿ ಸುರ್ಜಿತ್ ಯಾದವ್ ಅವರ ಮನೆಗೆ ತಲುಪಿದಾಗ ಅಲ್ಲಿರುವ ಮಹಿಳೆಯರು ಸೇರಿದಂತೆ ಕೆಲವರು ಪ್ರತಿರೋಧ ವ್ಯಕ್ತಪಡಿಸಿದರು. ಆದಾಗ್ಯೂ, ಪೊಲೀಸರು ತಮ್ಮ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಪೊಲೀಸ್ ಅಧಿಕಾರಿಯ ಕೊರಳುಪಟ್ಟಿ ಹಿಡಿದು ಎಳೆದಾಡಿದ ಮಹಿಳೆ; ಪೊಲೀಸರ ಮೇಲೆ ಆರೋಪ ಹೊರಿಸಿ ಫೋಟೊ ಶೇರ್ ಮಾಡಿದ ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Follow us on

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ‘ಕೆಲವು ಪೊಲೀಸ್ ಅಧಿಕಾರಿಗಳು’ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಟ್ವಿಟರ್​​ನಲ್ಲಿ ಫೋಟೊವೊಂದನ್ನು ಶೇರ್ ಮಾಡಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಚಿತ್ರದಲ್ಲಿರುವ ಪೊಲೀಸ್ ಅಧಿಕಾರಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಹೇಳಿಕೆಯೊಂದಿಗೆ ಈ ಚಿತ್ರವನ್ನು ನಂತರ ಅನೇಕರು ಹಂಚಿಕೊಂಡಿದ್ದಾರೆ. ಅದು ನಂತರ ಸುಳ್ಳು ಎಂದು ತಿಳಿದುಬಂದಿದೆ.


ನಿಜ ಸಂಗತಿ ಏನೆಂದರೆ , ಮಹಿಳೆ ಪೊಲೀಸ್ ಅಧಿಕಾರಿಯನ್ನು ಕೊರಳು ಪಟ್ಟಿ ಹಿಡಿದು ಎಳೆದಾಗ ಪೊಲೀಸ್ ಅದರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುವ ಚಿತ್ರವಾಗಿದೆ ಅದು.ಈ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರಕ್ಕೆ ತಪ್ಪಾದ ಶೀರ್ಷಿಕೆ ನೀಡಿ ಜನರನ್ನು ತಪ್ಪು ದಾರಿಗೆಳೆದಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದೆ.


ಪುಖರಾಯನ್ ಔಟ್‌ಪೋಸ್ಟ್ ಉಸ್ತುವಾರಿ ಮಹೇಂದ್ರ ಪಟೇಲ್ ಎಂದು ಗುರುತಿಸಲ್ಪಟ್ಟ ಈ ಅಧಿಕಾರಿಯು ನಾಲ್ವರು ಕಾನ್‌ಸ್ಟೆಬಲ್‌ಗಳ ತಂಡದೊಂದಿಗೆ ಆರೋಪಿಗಳೊಬ್ಬರ ಮನೆಯ ಮೇಲೆ ದಾಳಿ ನಡೆಸಲು ಹೋದಾಗ ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸಿದನೆಂದು ಆರೋಪಿಸಲಾಗಿದೆ.

ಪೊಲೀಸರು ಆರೋಪಿ ಸುರ್ಜಿತ್ ಯಾದವ್ ಅವರ ಮನೆಗೆ ತಲುಪಿದಾಗ ಅಲ್ಲಿರುವ ಮಹಿಳೆಯರು ಸೇರಿದಂತೆ ಕೆಲವರು ಪ್ರತಿರೋಧ ವ್ಯಕ್ತಪಡಿಸಿದರು. ಆದಾಗ್ಯೂ, ಪೊಲೀಸರು ತಮ್ಮ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದು,ಮಹಿಳೆಯರು ಆರೋಪಿಯನ್ನು ಅಲ್ಲಿಂದ ಮುಕ್ತಗೊಳಿಸಲು ಪ್ರಯತ್ನಿಸಿದ್ದರು ಎಂದಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪುನಃಶ್ಚೇತನ ಸಾಧ್ಯವೇ? ಪ್ರಿಯಾಂಕಾ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಇರುವ ಸವಾಲುಗಳೇನು?

(Former Uttar Pradesh CM and Samajwadi Party chief Akhilesh Yadav shared a misleading image on Twitter )