Red Diary: ಚುನಾವಣೆಗೆ ಸಿದ್ಧವಾಗಿರುವ ರಾಜಸ್ಥಾನದಲ್ಲಿ ಸದ್ದು ಮಾಡುತ್ತಿರುವ ರೆಡ್ ಡೈರಿ; ಏನಿದು ವಿಚಾರ?

|

Updated on: Jul 25, 2023 | 6:10 PM

ರೆಡ್ ಡೈರಿ ಸುತ್ತಲಿನ ಸಸ್ಪೆನ್ಸ್ ವಿಧಾನಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷ ಬಿಜೆಪಿಗೆ ರಾಜಕೀಯ ಅಸ್ತ್ರವನ್ನು ಒದಗಿಸಿದೆ. ಇತ್ತ ಆಡಳಿತಾರೂಢ ಕಾಂಗ್ರೆಸ್ ತನ್ನ ಆಂತರಿಕ ಕಚ್ಚಾಟದಿಂದ ಚುನಾವಣೆಯಲ್ಲಿ ಹಿನ್ನಡೆಯಾಗದಂತೆ ನೋಡಿಕೊಳ್ಳುತ್ತಿದೆ. ಅಂದಹಾಗೆ ವಿಧಾನಸಭೆಯಲ್ಲಿ ಗದ್ದಲಕ್ಕೆಕಾರಣವಾದ ರೆಡ್ ಡೈರಿಯಲ್ಲಿ ಏನಿದೆ?

Red Diary: ಚುನಾವಣೆಗೆ ಸಿದ್ಧವಾಗಿರುವ ರಾಜಸ್ಥಾನದಲ್ಲಿ ಸದ್ದು ಮಾಡುತ್ತಿರುವ ರೆಡ್ ಡೈರಿ; ಏನಿದು ವಿಚಾರ?
ರೆಡ್ ಡೈರಿ
Follow us on

ಜೈಪುರ ಜುಲೈ 25: ರಾಜಸ್ಥಾನ ಚುನಾವಣೆಗೆ (Rajasthan Election) ಇನ್ನೇನು ನಾಲ್ಕು ತಿಂಗಳು ಉಳಿದಿದ್ದು, ರೆಡ್ ಡೈರಿ (Red Diary) ವಿಚಾರ ವಿಧಾನಸಭೆಯಲ್ಲಿ ನಾಟಕೀಯ ದೃಶ್ಯಗಳಿಗೆ ಕಾರಣವಾಯಿತು. ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿರುವ ಈ ರೆಡ್ ಡೈರಿ ಏನು? ರಾಜಕೀಯ ಜಟಾಪಟಿಗೆ ಕಾರಣವಾಗಿರುವ ಇದರಲ್ಲೇನಿದೆ? ಮುಂದೆ ಓದಿ ನೋಡಿ.

ರಾಜಸ್ಥಾನದ ಜುಂಜುನು ಜಿಲ್ಲೆಯ ಉದಯಪುರವತಿಯಿಂದ ಶಾಸಕರಾದ ರಾಜೇಂದ್ರ ಸಿಂಗ್ ಗುಢಾ ಅವರು ನಿನ್ನೆ (ಸೋಮವಾರ) ವಿಧಾನಸಭೆಗೆ ಬಂದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿಷಯಗಳನ್ನು ಬಯಲು ಮಾಡುತ್ತೇನೆ ಎಂದು ರೆಡ್ ಡೈರಿಯನ್ನು ತೋರಿಸಿದ್ದಾರೆ. ಅವರು ಹೀಗೆ ಮಾಡುತ್ತಿದ್ದಂತೆ ಮಾರ್ಷಲ್​​ಗಳು ಅವರನ್ನು ಸದನದಿಂದ ಹೊರ ತಳ್ಳಿದ್ದಾರೆ. ಇದಾದ ನಂತರ ಗುಢಾ ಅವರು, ತಮ್ಮ ಮೇಲೆ ಹಲ್ಲೆ ನಡೆಸಲಾಗಿದ್ದು, ಕೆಲ ಕಾಂಗ್ರೆಸ್ ಮುಖಂಡರು ತಮ್ಮ ಕೈಯಿಂದ ಡೈರಿಯನ್ನು ಕಿತ್ತು ಕೆಲವು ಪುಟಗಳನ್ನು ಹರಿದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರದ ವೈಫಲ್ಯದ ಕುರಿತು  ಟೀಕೆಗಳ ನಂತರ ಗುಢಾ ಅವರನ್ನು ಸಚಿವ ಸ್ಥಾನದಿಂದ ಗೆಹ್ಲೋಟ್ ಸರ್ಕಾರ ವಜಾಗೊಳಿಸಿತ್ತು. ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ  ವಿಡಿಯೊದ ಕುರಿತು ಸದನದಲ್ಲಿ ಗದ್ದಲವಾದಾಗ ಗುಢಾ ಅವರು “ಮಹಿಳಾ ಸುರಕ್ಷತೆಯಲ್ಲಿ ನಾವು ವಿಫಲರಾಗಿದ್ದೇವೆ ಎಂಬುದು ನಿಜ. ಇದನ್ನು ನಾವು ಒಪ್ಪಿಕೊಳ್ಳಬೇಕು. ಮಣಿಪುರದ ಬದಲಿಗೆ, ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಏಕೆ ಹೆಚ್ಚಿದೆ ಎಂಬುದನ್ನು ನಾವು ಪುನರ್ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಎರಡು ಬಾರಿ ಶಾಸಕರಾಗಿರುವ ಗುಢಾ ಈಗ ರೆಡ್ ಡೈರಿ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.

ಏನಿದು ರೆಡ್ ಡೈರಿ?

ಡೈರಿಯಲ್ಲಿ ಮುಖ್ಯಮಂತ್ರಿ ಗೆಹ್ಲೋಟ್ ಬಗ್ಗೆ ಸ್ಫೋಟಕ ಮಾಹಿತಿ ಇದೆ ಎಂದು ಹೇಳಿದ್ದಾರೆ. ಈ ಡೈರಿ ಮುಖ್ಯಮಂತ್ರಿಯವರ ಆಪ್ತ ಸಹಾಯಕ ಮತ್ತು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮೇಂದ್ರ ರಾಥೋಡ್ ಅವರದ್ದು ಎಂದು ಗುಢಾ ಹೇಳಿದ್ದಾರೆ. ಸಚಿನ್ ಪೈಲಟ್ ನೇತೃತ್ವದ 2020 ರ ದಂಗೆಯ ಸಮಯದಲ್ಲಿ ತನ್ನ ಸರ್ಕಾರವನ್ನು ಉಳಿಸಲು ಶಾಸಕರು, ಸ್ವತಂತ್ರರು ಮತ್ತು ಇತರರಿಗೆ ಗೆಹ್ಲೋಟ್ ಶಿಬಿರವು ಮಾಡಿದ ಪಾವತಿಗಳ ವಿವರಗಳನ್ನು ಈ ಡೈರಿ ಒಳಗೊಂಡಿದೆ ಎಂದು ಗುಢಾ ಹೇಳಿದ್ದಾರೆ.

ಬಿಜೆಪಿ ಬೆಂಬಲಿತ ಸ್ವತಂತ್ರ ಮತ್ತು ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ ಅವರ ಕಠಿಣ ಸ್ಪರ್ಧೆಯ ಹೊರತಾಗಿಯೂ ತನ್ನ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ ಮಾಡಿದ ಹಣದ ವಿವರಗಳನ್ನು ಡೈರಿ ಒಳಗೊಂಡಿದೆ ಎಂದಿದ್ದಾರೆ ಇವರು. ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ಈ ಡೈರಿ ರಾಥೋಡ್ ಅವರ ಮನೆಯಲ್ಲಿತ್ತು. ಗೆಹ್ಲೋಟ್ ಅವರ ಕೋರಿಕೆಯ ಮೇರೆಗೆ ತೆರಿಗೆ ಅಧಿಕಾರಿಗಳು ಅದನ್ನು ಕಂಡುಕೊಳ್ಳುವ ಮೊದಲು ರೆಡ್ ಡೈರಿಯನ್ನು ವಶಕ್ಕೆ ತೆಗೆದುಕೊಳ್ಳಲು ನಾನು ಯಶಸ್ವಿಯಾಗಿದ್ದೇನೆ ಎಂದ ಗುಢಾ, ಡೈರಿ ಸುಟ್ಟು ಹಾಕುವಂತೆ ಮುಖ್ಯಮಂತ್ರಿ ಹೇಳಿದ್ದರು ಎಂದಿದ್ದಾರೆ.

ಕಾಂಗ್ರೆಸ್ ಗುಢಾ ಅವರ ಆರೋಪಗಳನ್ನು ತಳ್ಳಿ ಹಾಕಿದ್ದು, ಅವುಗಳನ್ನು ಕಪೋಲಕಲ್ಪಿತ ಎಂದು ಕರೆದಿದೆ. ಪಕ್ಷದ ಹಿರಿಯ ನಾಯಕಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಅವರು ಶಾಸಕ ಮತ್ತು ಬಿಜೆಪಿ ಜತೆಯಾಗಿ ಈ ಸಂಚು ರೂಪಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಬಿಜೆಪಿಗೆ ರಾಜಕೀಯ ಅಸ್ತ್ರ

ರೆಡ್ ಡೈರಿ ಸುತ್ತಲಿನ ಸಸ್ಪೆನ್ಸ್ ವಿಧಾನಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷ ಬಿಜೆಪಿಗೆ ರಾಜಕೀಯ ಅಸ್ತ್ರವನ್ನು ಒದಗಿಸಿದೆ. ಇತ್ತ ಆಡಳಿತಾರೂಢ ಕಾಂಗ್ರೆಸ್ ತನ್ನ ಆಂತರಿಕ ಕಚ್ಚಾಟದಿಂದ ಚುನಾವಣೆಯಲ್ಲಿ ಹಿನ್ನಡೆಯಾಗದಂತೆ ನೋಡಿಕೊಳ್ಳುತ್ತಿದೆ. ಕೇಂದ್ರ ಸಚಿವ ಮತ್ತು ರಾಜಸ್ಥಾನದ ಪ್ರಮುಖ ಬಿಜೆಪಿ ನಾಯಕ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು “ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಮುರಿದಿದೆ” ಎಂದು ಆರೋಪಿಸಿದ್ದಾರೆ. ಅದೇ ವೇಳೆ ರೆಡ್ ಡೈರಿ ವಿಷಯಗಳು ಹೊರಬಂದರೆ ಅನೇಕ ನಾಯಕರ ರಾಜಕೀಯ ಅಸ್ತಿತ್ವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ.

ರಾಜಸ್ಥಾನದ ಪ್ರತಿಯೊಬ್ಬರೂ ರೆಡ್ ಡೈರಿಯ ರಹಸ್ಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ.  ಸರ್ಕಾರ ಮತ್ತು ಅದರ ಮುಖ್ಯಸ್ಥರು ಅದರ ಬಗ್ಗೆ ಏಕೆ ಹೆದರುತ್ತಾರೆ? ಎಂದು ಶೆಖಾವತ್ ಕೇಳಿದ್ದಾರೆ

ಇದನ್ನೂ ಓದಿ: ಅತ್ಯಾಚಾರದಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ; ವಿಧಾನಸಭೆಯಲ್ಲೇ ಹೇಳಿಕೆ ನೀಡಿದ ಸಚಿವ​ ರಾಜೇಂದ್ರ ಸಿಂಗ್ ವಜಾ

ಯಾರು ಈ ರಾಜೇಂದ್ರ ಸಿಂಗ್ ಗುಢಾ

ರಾಜೇಂದ್ರ ಸಿಂಗ್ ಗುಢಾ ಅವರು ಉದಯಪುರವತಿಯಿಂದ ಎರಡು ಬಾರಿ ಶಾಸಕರಾಗಿದ್ದಾರೆ. ಅವರು ಈ ಹಿಂದೆ ಮಾಯಾವತಿಯವರ ಬಹುಜನ ಸಮಾಜ ಪಕ್ಷದಲ್ಲಿದ್ದರು. 2019 ರಲ್ಲಿ, ಅವರು ಕಾಂಗ್ರೆಸ್‌ಗೆ ಬದಲಾದ ಆರು ಬಿಎಸ್‌ಪಿ ಶಾಸಕರಲ್ಲಿ ಒಬ್ಬರಾಗಿದ್ದರು. ಹೀಗೆ ಬದಲಾದಾಗ ಇದು 2020 ರ ದಂಗೆಯನ್ನು ಎದುರಿಸಲು ಸಹಾಯ ಮಾಡುವ ಹೆಚ್ಚುವರಿ ಸ್ಥಿರತೆಯನ್ನು ಒದಗಿಸಿತು. ಕೇವಲ ಒಂದು ವರ್ಷದ ನಂತರ ಇವರು ಗೆಹ್ಲೋಟ್ ಬಣದೊಂದಿಗೆ ಸೇರಿಕೊಂಡರು.

ಬಿಎಸ್ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ನಂತರ ರಾಜಕೀಯ ಅಧಿಕಾರ ಮತ್ತು ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ಗೆ ಹಾರಿದ ಅವಕಾಶವಾದಿ ಗುಢಾ ಅಂತಾರೆ ಕಾಂಗ್ರೆಸ್ ನಾಯಕರು. ಚುನಾವಣೆ ಹತ್ತಿರ ಬಂದಾಗಲೆಲ್ಲಾ ರಾಜಕೀಯ ಅವಕಾಶಗಳನ್ನು ಅನ್ವೇಷಿಸುವ ಅಭ್ಯಾಸವನ್ನು ಗುಢಾ ಹೊಂದಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Tue, 25 July 23