ಆಂಧ್ರಪ್ರದೇಶ: ಈ ಗ್ರಾಮದಲ್ಲಿ ದೇವರನ್ನು ಅಲ್ಲ; ಮಹಾತ್ಮಾ ಗಾಂಧಿಯನ್ನು ಪೂಜಿಸಲಾಗುತ್ತದೆ, ಕಾರಣ ಏನು ಗೊತ್ತಾ?
ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಮುಂಗಾರು ಆರಂಭಕ್ಕೆ ಗ್ರಾಮಸ್ಥರು ಮಹಾತ್ಮ ಗಾಂಧಿಯನ್ನು ತಮ್ಮ ಪ್ರೀತಿಯ ದೇವರೆಂದು ಪೂಜಿಸುತ್ತಾರೆ!
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಳೆಗಾಲದ ಆರಂಭದಲ್ಲಿ ಜನ ಜಾನುವಾರುಗಳಿಗೆ ರೋಗಗಳು ಬಾರದಂತೆ ಅಥವಾ ಬೆಳೆಗಳು ಉತ್ತಮವಾಗಿರಲು ಗ್ರಾಮ ದೇವತೆ ಉತ್ಸವನ್ನು ನಡೆಸಲಾಗುತ್ತದೆ. ತಾಳ ಮೇಳದೊಂದಿಗೆ ಗ್ರಾಮದಲ್ಲಿ ಸಂಚರಿಸಿ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ ಶ್ರೀಕಾಕುಳಂ ಜಿಲ್ಲೆಯ ಪಲಾಸ ಮಂಡಲದ ಕೇದಾರಿಪುರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಗ್ರಾಮ ದೇವರಾಗಿ ಪೂಜಿಸಲಾಗುತ್ತದೆ.
ಕರೆನ್ಸಿ ನೋಟುಗಳು ಮತ್ತು ಅಂಚೆ ಚೀಟಿಗಳಲ್ಲಿ ಗಾಂಧಿ ಕಾಣಿಸಿಕೊಳ್ಳುವುದು ಸಹಜ. ಆದರೆ ಇಡೀ ಭಾರತ ದೇಶವೇ ಗೌರವಿಸುವ ಆ ಮಹಾತ್ಮ ಕೇದಾರಿಪುರಂ ಗ್ರಾಮಸ್ಥರಿಗೆ ದೇವರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಳ್ಳಿಯಲ್ಲಿ ಈ ಪದ್ಧತಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಆಷಾಢ ಮಾಸ ಮುಗಿಯುತ್ತಿದ್ದಂತೆ ಗುರುವಾರದಂದು ಗಾಂಧಿ ಉತ್ಸವ ನಡೆಯುತ್ತದೆ. ಬೆಳೆಗಳು ಚೆನ್ನಾಗಿ ಬೆಳೆಯಬೇಕೆಂದು ಬಯಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಹಬ್ಬದ ನಂತರವೇ ಖಾರಿಫ್ ಋತುವಿನ ಭತ್ತದ ಕೊಯ್ಲು ಆರಂಭವಾಗುತ್ತದೆ.
ಪ್ರಾಣಿಬಲಿ ಸಾಮಾನ್ಯವಾಗಿ ಗ್ರಾಮ ದೇವತೆಗಳ ಉತ್ಸವಗಳ ಕೇಂದ್ರಬಿಂದುವಾಗಿದೆ. ಹೆಚ್ಚಿನ ಸಂಖ್ಯೆಯ ಕೋಳಿ, ಮೇಕೆ ಮತ್ತು ಕುರಿಗಳನ್ನು ಕೊಂದು, ರಕ್ತ ಹರಿಸುತ್ತಾರೆ. ಆದರೆ ಈ ಹಬ್ಬದಲ್ಲಿ ಅಂಥದ್ದೇನೂ ಕಾಣುವುದಿಲ್ಲ. ಮಹಾತ್ಮ ಗಾಂಧೀಜಿಯವರು ಬೋಧಿಸಿದ ಅಹಿಂಸಾ ಮಾರ್ಗದಲ್ಲಿ ಈ ಹಬ್ಬ ಮುಂದುವರಿಯುತ್ತಿದೆ. ಗಾಂಧಿ ಉತ್ಸವದ ದಿನದಂದು ಇಡೀ ಗ್ರಾಮದಲ್ಲಿ ಮಕ್ಕಳೊಂದಿಗೆ ಪಥ ಸಂಚಲನ ನಡೆಯುತ್ತದೆ.
ತಮಟೆ ವಾದ್ಯಗಳು ಮತ್ತು ನೃತ್ಯಗಳೊಂದಿಗೆ ಎಲ್ಲಾ ಗ್ರಾಮಸ್ಥರು ಮೆರವಣಿಗೆ ಗ್ರಾಮದ ಹೃದಯ ಭಾಗದಲ್ಲಿರುವ ಗಾಂಧಿ ಪ್ರತಿಮೆಯನ್ನು ತಲುಪುತ್ತಾರೆ. ಅಂದು ಇಡೀ ಗ್ರಾಮವೇ ಸಂಭ್ರಮದಿಂದ ಕೂಡಿರುತ್ತದೆ. ಗಾಂಧಿ ಪ್ರತಿಮೆಯ ಮುಂದೆ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಇರಿಸಲಾಗುತ್ತದೆ. ಅಲ್ಲಿ ಪೂಜೆ ಪುನಸ್ಕಾರ ಮಾಡುವುದು ಇಲ್ಲಿ ವಾಡಿಕೆ.