NDA’s 25th Anniversary: ಎನ್​ಡಿಎ 25ನೇ ವಾರ್ಷಿಕೋತ್ಸವ ಆಚರಣೆಗೆ ಪ್ರಧಾನಿ ಮೋದಿ ಕರೆ; ಪ್ರಲ್ಹಾದ್ ಜೋಶಿ

ಎನ್​ಡಿಎ ಮೈತ್ರಿಕೂಟದ 25ನೇ ವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ವಾರ್ಷಿಕೋತ್ಸವದ ಆಚರಣೆಗೆ ಅವರು ನೀಡಿರುವ ಸಲಹೆಗಳ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು.

NDA's 25th Anniversary: ಎನ್​ಡಿಎ 25ನೇ ವಾರ್ಷಿಕೋತ್ಸವ ಆಚರಣೆಗೆ ಪ್ರಧಾನಿ ಮೋದಿ ಕರೆ; ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Follow us
Ganapathi Sharma
|

Updated on:Jul 25, 2023 | 8:01 PM

ನವದೆಹಲಿ: ಒಟ್ಟಿಗೆ ಕುಳಿತುಕೊಂಡು ವಿಚಾರ ವಿನಿಮಯ ಮಾಡಿಕೊಳ್ಳಿ ಮತ್ತು ಅಟಲ್ ಜೀ, ಅಡ್ವಾಣಿ ಜೀ ಅವರ ಪರಂಪರೆಯನ್ನು ಮುಂದುವರಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ. ಇದು, ಎನ್‌ಡಿಎ ಮೈತ್ರಿಕೂಟದ 25 ನೇ ವಾರ್ಷಿಕೋತ್ಸವವನ್ನು (NDA’s 25th Anniversary) ಆಚರಿಸುವ ದೃಷ್ಟಿಯಿಂದ ಬಿಜೆಪಿಯ (BJP) ಸಂಸದೀಯ ಪಕ್ಷದ ಸಭೆಗೆ ಮೋದಿ ಅವರು ನೀಡಿದ ಸಂದೇಶಗಳಾಗಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಂಗಳವಾರ ಹೇಳಿದ್ದಾರೆ.

ಸಂಸತ್ತಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್‌ಡಿಎ 25 ವರ್ಷಗಳನ್ನು ಪೂರೈಸಿದ ಸಂದರ್ಭವನ್ನು ಹೆಚ್ಚು ಆತ್ಮವಿಶ್ವಾಸದಿಂದ ಮತ್ತು ಇಚ್ಛಾಶಕ್ತಿಯೊಂದಿಗೆ ಆಚರಿಸಲು ಮತ್ತು ಮುನ್ನಡೆಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ ಎಂದು ಹೇಳಿದರು.

ಸೋಮವಾರ ನಿಧನರಾದ ಆರ್‌ಎಸ್‌ಎಸ್ ಮುಖಂಡ ಮದನ್ ದಾಸ್ ದೇವಿ, ಈ ವರ್ಷದ ಆರಂಭದಲ್ಲಿ ನಿಧನರಾದ ಗಿರೀಶ್ ಬಾಪಟ್ ಸೇರಿದಂತೆ ಮೂರು ಮಂದಿ ದಿವಂಗತ ಸಂಸದರು ಮತ್ತು ರತನ್ ಲಾಲ್ ಕಟಾರಿಯಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಬಿಜೆಪಿ ಸಂಸದೀಯ ಸಭೆ ಪ್ರಾರಂಭವಾಯಿತು ಎಂದು ಜೋಶಿ ಮಾಹಿತಿ ನೀಡಿದರು.

ಇದು ಎನ್‌ಡಿಎ ಮೈತ್ರಿಕೂಟದ 25 ನೇ ವರ್ಷವಾಗಿದೆ. ಬಿಜೆಪಿಯ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್‌ಕೆ ಅಡ್ವಾಣಿ ಅವರ ಪರಂಪರೆಯಾಗಿದೆ ಈ ಮೈತ್ರಿಕೂಟ ಎಂದು ಮೋದಿ ಹೇಳಿದರು. ರಜತ ಮಹೋತ್ಸವವನ್ನು ನಾವು ಆಚರಿಸಬೇಕು. ಸಭೆಗಳನ್ನು ನಡೆಸುವುದರಿಂದ ಹಿಡಿದು ವಿಚಾರ ವಿನಿಮಯದವರೆಗೆ ಎಲ್ಲ ರೀತಿಯಲ್ಲೂ ತೊಡಗಿಸಿಕೊಳ್ಳಬೇಕು ಎಂಬುದಾಗಿ ಪ್ರಧಾನಿ ಸಲಹೆ ನೀಡಿದ್ದಾರೆ ಎಂದು ಜೋಶಿ ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದ್ದು, ದೇಶವು ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಮೂರನೇ ಸ್ಥಾನ ತಲುಪಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ನಾವು 2014 ರಲ್ಲಿ ಅಧಿಕಾರಕ್ಕೆ ಬಂದಾಗ, ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪೈಕಿ 10 ನೇ ಸ್ಥಾನದಲ್ಲಿದ್ದೆವು. ಇದೀಗ ಎರಡನೇ ಅವಧಿಯಲ್ಲಿ ಐದನೇ ಸ್ಥಾನವನ್ನು ತಲುಪಿದ್ದೇವೆ. ಮೂರನೇ ಅವಧಿಯಲ್ಲಿ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ ಎಂಬುದಾಗಿ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: ಮೋದಿಯವರು ಜನರಿಗೆ ನೀಡಿದ ಭರವಸೆ ಮತ್ತು ನಂಬಿಕೆಯ ಜ್ವಾಲೆಯನ್ನು ನಂದಿಸುವುದು ಸಾಧ್ಯವಿಲ್ಲ: ಧರ್ಮೇಂದ್ರ ಪ್ರಧಾನ್

ಲೋಕಸಭೆ ಚುನಾವಣೆಯಲ್ಲಿ 350 ಸ್ಥಾನ ಜಯಿಸುತ್ತೇವೆ; ಜೋಶಿ ವಿಶ್ವಾಸ

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ವಿರೋಧ ಪಕ್ಷಗಳ ಯೋಜನೆಗೆ ಪ್ರತಿಕ್ರಿಯಿಸಿದ ಜೋಶಿ, ನಮ್ಮ ಮೊದಲ ಅವಧಿಯಲ್ಲಿಯೂ ಅವರು (ವಿರೋಧ) ನಮ್ಮ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು. ಆದರೆ, 2019 ರಲ್ಲಿ ಲೋಕಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 282 ರಿಂದ 303 ಕ್ಕೆ ಏರಿತು. ಅವರು ಈ ಬಾರಿಯೂ ಅವಿಶ್ವಾಸ ನಿರ್ಣಯವನ್ನು ತರಲಿ ಮತ್ತು ನಾವು 350 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಪಕ್ಷಗಳು ಅದೇ ಸ್ಥಾನದಲ್ಲಿ ಉಳಿಯಲು ಬಯಸಿವೆ; ಮೋದಿ

ಮಣಿಪುರ ವಿಷಯದ ಕುರಿತು ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲದ ಬಗ್ಗೆ ಮಂಗಳವಾರ ಪ್ರತಿಪಕ್ಷಗಳ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಅವರ ನಡವಳಿಕೆಯು ಅವರು ಪ್ರತಿಪಕ್ಷದಲ್ಲೇ ಉಳಿಯಲು ನಿರ್ಧರಿಸುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ನಡವಳಿಕೆಯಿಂದ ಅವರು ವಿರೋಧ ಪಕ್ಷದಲ್ಲೇ ಉಳಿಯಲು ನಿರ್ಧರಿಸಿದ್ದಾರೆಂಬುದು ತೋರುತ್ತದೆ. ನಾವು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡಬೇಕಾಗಿದೆ ಮತ್ತು ಆ ನಿಟ್ಟಿನಲ್ಲಿ ಮುಂದುವರಿಯಬೇಕಿದೆ ಎಂದು ಮೋದಿ ಹೇಳಿದ್ದಾರೆ.

ಈ ಬಾರಿಯೂ ಆಗಸ್ಟ್ 15 ರಂದು ‘ಹರ್ ಘರ್ ತಿರಂಗ’ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿರುವುದಾಗಿಯೂ ಜೋಶಿ ಮಾಹಿತಿ ನೀಡಿದರು.

ಜಾಗತಿಕ ಮಟ್ಟದಲ್ಲಿ ಇಂದು ಭಾರತದ ವರ್ಚಸ್ಸು ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಈ ದಿಕ್ಕಿನಲ್ಲಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿರುವುದಾಗಿ ಜೋಶಿ ತಿಳಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Tue, 25 July 23