ರಷ್ಯಾದ ಪ್ರವಾಸಿಗರಿಗೆ 30 ದಿನಗಳಲ್ಲಿ ಉಚಿತ ಇ-ವೀಸಾ; ಪುಟಿನ್ ಸಮ್ಮುಖದಲ್ಲಿ ಪ್ರಧಾನಿ ಮೋದಿ ಘೋಷಣೆ

ದ್ವಿಪಕ್ಷೀಯ ಮಾತುಕತೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ದೆಹಲಿಯ ಹೈದರಾಬಾದ್‌ ಹೌಸ್​​ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಾಗಿದೆ. ಭಾರತ-ರಷ್ಯಾ ನಡುವೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ರಕ್ಷಣೆ, ವ್ಯಾಪಾರ, ಇಂಧನ ಪೂರೈಕೆ ಸೇರಿದಂತೆ ಹಲವು ಒಪ್ಪಂದವಾಗಿದೆ. ಈ ಬಗ್ಗೆ ಮೋದಿ ಹಾಗೂ ಪುಟಿನ್ ಮಾಹಿತಿ ಹಂಚಿಕೊಂಡಿದ್ದಾರೆ.

ರಷ್ಯಾದ ಪ್ರವಾಸಿಗರಿಗೆ 30 ದಿನಗಳಲ್ಲಿ ಉಚಿತ ಇ-ವೀಸಾ; ಪುಟಿನ್ ಸಮ್ಮುಖದಲ್ಲಿ ಪ್ರಧಾನಿ ಮೋದಿ ಘೋಷಣೆ
Putin And Modi Press Conference

Updated on: Dec 05, 2025 | 4:14 PM

ನವದೆಹಲಿ, ಡಿಸೆಂಬರ್ 5: 2 ದಿನಗಳ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ರಷ್ಯಾದ ಪ್ರವಾಸಿಗರಿಗೆ ಭಾರತ ಇ-ವೀಸಾ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದನ್ನು 30 ದಿನಗಳಲ್ಲಿ ಇ-ವೀಸಾಗಳ ಪ್ರಕ್ರಿಯೆ ನಡೆಸಲಾಗುವುದು. ಮೊದಲ ಇ-ಟೂರಿಸ್ಟ್ ವೀಸಾ ಮತ್ತು ಗುಂಪು ಪ್ರವಾಸಿ ವೀಸಾ ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಮೋದಿ ಹೇಳಿದ್ದಾರೆ. ಈ ವೀಸಾ ಉಚಿತವಾಗಿರುತ್ತದೆ.

ಭಾರತ ಮತ್ತು ರಷ್ಯಾ ಎರಡೂ ದೇಶಗಳ ನಡುವೆ ಆರ್ಥಿಕ ಸಹಕಾರವನ್ನು ಹೆಚ್ಚಿಸಲು ವಿಷನ್- 2030 ದಾಖಲೆಗೆ ಸಹಿ ಹಾಕಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಉಪಕ್ರಮವು ಎರಡೂ ರಾಷ್ಟ್ರಗಳಿಗೆ ಹಲವಾರು ವ್ಯಾಪಾರ ಮಾರ್ಗಗಳನ್ನು ತೆರೆಯುತ್ತದೆ ಎಂದು ಅವರು ತಿಳಿಸಿದ್ದಾರೆ. “ಆರ್ಥಿಕ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು, ನಾವು ವಿಷನ್ 2030 ದಾಖಲೆಗೆ ಸಹಿ ಹಾಕಿದ್ದೇವೆ. ಇಂದು ನಾವಿಬ್ಬರೂ ಭಾರತ-ರಷ್ಯಾ ವ್ಯಾಪಾರ ವೇದಿಕೆಯಲ್ಲಿ ಭಾಗವಹಿಸುತ್ತೇವೆ. ಈ ವೇದಿಕೆಯು ನಮ್ಮ ವ್ಯವಹಾರ ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗೆ FTA ಅನ್ನು ಸಾಕಾರಗೊಳಿಸಲು ಎರಡೂ ದೇಶಗಳು ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ” ಎಂದು ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ

ಭಯೋತ್ಪಾದನೆಯ ವಿಷಯದಲ್ಲಿ ಜಾಗತಿಕ ಏಕತೆ ಅಗತ್ಯವಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ರಷ್ಯಾ ಎರಡೂ ಅದರ ವಿರುದ್ಧ ಹೆಗಲಿಗೆ ಹೆಗಲು ಕೊಟ್ಟು ಭಯೋತ್ಪಾದನೆ ವಿರುದ್ಧ ಹೋರಾಡಿವೆ ಮತ್ತು ಮುಂದೆಯೂ ಹೋರಾಡಲಿದೆ ಎಂದು ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ಪ್ರೋಟೋಕಾಲ್ ಬದಿಗೊತ್ತಿ ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಪ್ರಧಾನಿ ಮೋದಿ

ಹಾಗೇ, 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರದಲ್ಲಿ 100 ಶತಕೋಟಿ ಡಾಲರ್‌ಗಳನ್ನು ಸಾಧಿಸುವ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಪ್ರಸ್ತಾವಿತ ಭಾರತ-ಇಎಇಯು ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿ ಮತ್ತು ಔಷಧಗಳು, ಕೃಷಿ ಮತ್ತು ಗ್ರಾಹಕ ಉತ್ಪನ್ನಗಳಲ್ಲಿ ಭಾರತೀಯ ರಫ್ತುಗಳನ್ನು ಹೆಚ್ಚಿಸುವ ಮಾರ್ಗಗಳನ್ನು ಅವರು ಚರ್ಚಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ