ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಅವರ ಕುಟುಂಬಕ್ಕೆ ಸೋಮವಾರ ಬೆದರಿಕೆ ಕರೆಗಳು ಬಂದಿವೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ (Reliance Foundation Hospital) ಡಿಸ್ಪ್ಲೇ ಸಂಖ್ಯೆಗೆ ಬೆದರಿಕೆ ಕರೆ ಮಾಡಲಾಗಿದೆ ಎಂದು ಮುಂಬೈ ಪೊಲೀಸರು (Mumbai police) ತಿಳಿಸಿದ್ದಾರೆ. ಸೋಮವಾರ ಒಟ್ಟು ಎಂಟು ಬೆದರಿಕೆ ಕರೆಗಳು ಬಂದಿವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾವು ಆಸ್ಪತ್ರೆಯವರಿಂದ ದೂರು ಸ್ವೀಕರಿಸಿದ್ದು ಅದನ್ನು ಪರಿಶೀಲಿಸುತ್ತಿದ್ದೇವೆ. ಆಸ್ಪತ್ರೆಯ ಡಿಸ್ಪ್ಲೇ ನಂಬರ್‌ಗೆ ಕರೆ ಮಾಡಲಾಗಿದೆ ಎಂದು ತೋರುತ್ತಿದೆ ಎಂದು ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಿಡ್ ಡೇ ವರದಿ ಮಾಡಿದೆ. ಮೂರು ಗಂಟೆಯೊಳಗೆ ಇಡೀ ಕುಟುಂಬವನ್ನು ಕೊಲೆ ಮಾಡುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ
Reliance Foundation Hospital files a complaint about receiving calls posing threat to Reliance Industries chairman Mukesh Ambani and his family. More than three calls were received at the hospital. Case being filed, probe underway: Mumbai Police
— ANI (@ANI) August 15, 2022
ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆ ನೀಡುವ ಒಟ್ಟು ಎಂಟು ಕರೆಗಳು ಬಂದಿವೆ. ಮುಂಬೈ ಪೊಲೀಸರಿಗೆ ನಾನು ದೂರು ನೀಡಿದ್ದೇನೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸಿಇಒ ಡಾ ತರಂಗ್ ಗಿಯಾನ್ ಚಂದಾನಿ ಹೇಳಿದ್ದಾರೆ. ಇದಕ್ಕಿಂತ ಮುನ್ನ 2021ರಲ್ಲಿ ಅಂಬಾನಿ ಮನೆಯ ಬಳಿ ಸ್ಫೋಟಕವಿರಿಸಿದ್ದ ಎಸ್ಯುವಿ ಕಾರು ಪತ್ತೆಯಾಗಿತ್ತು. ಆ ಕಾರಿನೊಳಗೆ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಅಂಬಾನಿ ಕುಟುಂಬಕ್ಕೆ ಬೆದರಿಕೆಯೊಡ್ಡಿರುವ ಪತ್ರವೂ ಇತ್ತು. ಈ ಬೆದರಿಕೆ ಹಿನ್ನಲೆಯಲ್ಲಿ ಮುಖೇಶ್ ಅವರಿಗೆ ಜೆಡ್ ಪ್ಲಸ್ ಸುರಕ್ಷಾ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಅದಾಗ್ಯೂ, ಇದರ ಖರ್ಚನ್ನು ಅಂಬಾನಿ ಅವರೇ ಭರಿಸುತ್ತಿದ್ದಾರೆ. ಅಂಬಾನಿ ಮತ್ತು ಅವರ ಕುಟುಂಬಕ್ಕೆ ನೀಡಿರುವ ಜೆಡ್ ಪ್ಲಸ್ ಸುರಕ್ಷಾ ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2020 ನವೆಂಬರ್ ನಲ್ಲಿ ಸುಪ್ರೀಂಕೋರ್ಟ್ ತಳ್ಳಿ ಹಾಕಿತ್ತು.
ಸಾಮಾನ್ಯವಾಗಿ ಸುರಕ್ಷಾ ವ್ಯವಸ್ಥೆಯು X, Y, Y-plus, Z, Z-plus ನಿಂದ SPG (Special Protection Group) ಹೀಗಿರುತ್ತದೆ. ಈ ರೀತಿಯ ಸುರಕ್ಷಾ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬನಿಗೆ 55 ಮಂದಿ ಭದ್ರತಾ ಸಿಬ್ಬಂದಿಗಳಿರುತ್ತಾರೆ. ವಿಐಪಿ ಮತ್ತು ವಿವಿಐಪಿಗಳಿಗೆ ಜೆಡ್ ಪ್ಲಸ್ ಸುರಕ್ಷಾವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಎನ್ಎಸ್ ಜಿಗಳು ಭದ್ರತೆಗಿರುತ್ತಾರೆ. ಜೆಡ್ ಕೆಟಗರಿಯಲ್ಲಿ 22 ಭದ್ರತಾ ಸಿಬ್ಬಂದಿಗಳಿರುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಜೆಡ್ ಪ್ಲಸ್ ಮತ್ತು ಜೆಡ್ ಸುರಕ್ಷಾ ವ್ಯವಸ್ಥೆಯಲ್ಲಿ ಬೆಂಗಾವಲು ವಾಹನಗಳೂ ಇರುತ್ತವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Mon, 15 August 22