ಈಗಾಗಲೇ ಗೂಗಲ್ ಸಂಸ್ಥೆ ಜನರಿಗೆ ಹಲವು ರೀತಿಯ ಸೌಲಭ್ಯವನ್ನು ಕಲ್ಪಿಸುತ್ತಲೇ ಬಂದಿದೆ. ಕಡಿಮೆ ಸಮಯದಲ್ಲಿ ವ್ಯವಹರಿಸಲು ಜನರಿಗೆ ಅನುವು ಮಾಡಿಕೊಟ್ಟ ಗೂಗಲ್ ಇದೀಗ ಎಲ್ಲರಿಗೂ ಅಚ್ಚುಮೆಚ್ಚು.
ಫೋಟೋಗಳನ್ನು ತೆಗೆದುಕೊಳ್ಳುವ ಹುಚ್ಚು ಯುವ ಜನತೆಗೆ ಜೋರು. ವಿವಿಧ ಭಂಗಿಗಳಲ್ಲಿ ನಿಂತು ಫೋಟೋಗಳನ್ನು ಕ್ಲಿಕ್ಕಿಸುವುದು ಮಾತ್ರವಲ್ಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಒಂದು ರೀತಿಯ ಫ್ಯಾಶನ್. ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಂತೆ ಮೊಬೈಲ್ ಸ್ಟೋರೇಜ್ ಫುಲ್ ಎಂದು ಬಂದೇ ಬಿಡುತ್ತದೆ. ಹೀಗಾಗಿ, ಹೆಚ್ಚು ಫೋಟೋಗಳನ್ನು ಸಂಗ್ರಹಿಸಿಡಲು ಗೂಗಲ್ ಸಂಸ್ಥೆ ಗೂಗಲ್ ಫೋಟೋಸ್ ಎಂಬ ಅಪ್ಲಿಕೇಶನ್ ಕೂಡ ಬಿಡುಗಡೆಗೊಳಿಸಿತ್ತು.
ಗೂಗಲ್ ಖಾತೆಯಲ್ಲಿ ಸಂಗ್ರಹಣೆ ಆಗುವುದರಿಂದ ಫೋಟೋಗಳು ಡಿಲೀಟ್ ಆಗುತ್ತದೆ ಎನ್ನುವ ಆತಂಕವಿರಲಿಲ್ಲ. ಡ್ರೈವ್ಗಳ ಮೂಲಕವೂ ಸಂಗ್ರಹಿಸಿಡಲು ಅವಕಾಶವಿದೆ. ಹೆಚ್ಚು ಜನಪ್ರಿಯಗೊಂಡಿದ್ದ ಗೂಗಲ್ ಫೋಟೋಸ್ ಸ್ಟೋರೇಜ್ ಅಪ್ಲಿಕೇಶನ್ಸ್ನಲ್ಲಿ ಮಿತಿಯಿಲ್ಲದೆ ಸಂಗ್ರಹಿಸಲು ಅವಕಾಶವಿತ್ತು. ಆದರೆ 2021ರ ಜೂನ್ನಿಂದ ಈ ವ್ಯವಸ್ಥೆಗೆ ಗೂಗಲ್ ಸಂಸ್ಥೆ ಕಡಿವಾಣ ಹಾಕಿದೆ. ಇ-ಮೇಲ್, ಡ್ರೈವ್, ಗೂಗಲ್ ಫೋಟೋಸ್ನಲ್ಲಿ ಸಂಗ್ರಹಿಸಲು ಕೇವಲ15 ಜಿ.ಬಿ ಸ್ಟೋರೇಜ್ ನೀಡುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ. ವಾರಕ್ಕೆ 4 ಲಕ್ಷ ಕೋಟಿ ಫೋಟೋಸ್ ಮತ್ತು 2,800 ಕೋಟಿ ವಿಡಿಯೋಗಳು ಸಂಗ್ರಹಣೆಯಾಗುತ್ತಿದ್ದರಿಂದ ಸರ್ವರ್ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. ಇದನ್ನು ಮೀರಿ ಹೆಚ್ಚು ಜಿ.ಬಿಗಳನ್ನು ಇಚ್ಛಿಸುವ ಬಳಕೆದಾರರು 100 ಜಿ.ಬಿಗೆ ಪ್ರತಿ ತಿಂಗಳಂತೆ 130ರೂ. ಹಣವನ್ನು ಪಾವತಿಸಬೇಕಾಗುತ್ತದೆ.