ದೆಹಲಿ: ಕೊರೊನಾ ಸೋಂಕಿನ ಕಾರಣದಿಂದ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಪಾತಕಿ ಛೋಟಾ ರಾಜನ್ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮತ್ತೆ ತಿಹಾರ್ ಜೈಲಿಗೆ ಮರಳಿದ್ದಾನೆ. ಏಪ್ರಿಲ್ 24ರಂದು ಕೊವಿಡ್-19 ಸೋಂಕು ದೃಢಪಟ್ಟ ನಂತರ ಛೋಟಾ ರಾಜನ್ನನ್ನು ಏಮ್ಸ್ಗೆ ದಾಖಲಿಸಲಾಗಿತ್ತು.
ತಿಹಾರ್ ಜೈಲಿನ ಡಿಜಿ ಸಂದೀಪ್ ಗೊಯೆಲ್, ಈಗ 61 ವರ್ಷ ವಯಸ್ಸಿನ ಛೋಟಾ ರಾಜನ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವುದನ್ನು ಹಾಗೂ ತಿಹಾರ್ ಜೈಲಿಗೆ ವಾಪಸಾಗಿರುವುದನ್ನು ದೃಢಪಡಿಸಿದ್ದಾರೆ. 2015ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಬಂಧಿತನಾದ ಬಳಿಕ ರಾಜನ್, ತಿಹಾರ್ ಜೈಲಿನಲ್ಲಿದ್ದಾನೆ.
ಒಂದು ಕಾಲದಲ್ಲಿ ದಾವುದ್ ಇಬ್ರಾಹಿಂ ಸಹಚರನಾಗಿದ್ದ ಭೂಗತ ಪಾತಕಿ ಛೋಟಾ ರಾಜನ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ಮೇ 7ರಂದು ವರದಿಯಾಗಿತ್ತು. ಆದರೆ ಅದು ಸುಳ್ಳುಸುದ್ದಿ ಎಂದು ಏಮ್ಸ್ ತಿಳಿಸಿತ್ತು. 2015ರಲ್ಲಿ ಛೋಟಾ ರಾಜನ್ನನ್ನು ಬಂಧಿಸಲಾಗಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ಕಾರಾಗೃಹವಾಸ ಅನುಭವಿಸುತ್ತಿದ್ದ ರಾಜನ್ನನ್ನು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಿಹಾರ್ ಜೈಲಿನ 20,500 ಕೈದಿಗಳ ಪೈಕಿ ಕನಿಷ್ಠ 170 ಕೈದಿಗಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗಿದೆ. ಅಲ್ಲದೇ ಸುಮಾರು ತಿಹಾರ್ ಜೈಲಿನ ಸುಮಾರು 70 ಅಧಿಕಾರಿಗಳಿಗೂ ಸೋಂಕು ತಗುಲಿದೆ.
ಮಾಜಿ ಭೂಗತ ದೊರೆ ಛೋಟಾ ರಾಜನ್ ವಿರುದ್ಧ 68 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. 35 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ನಾಲ್ಕು ಪ್ರಕರಣಗಳಲ್ಲಿ ಛೋಟಾ ರಾಜನ್ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಇದನ್ನೂ ಓದಿ: Chhota Rajan: ಬಂಧಿತ ಪಾತಕಿ ಛೋಟಾ ರಾಜನ್ ಕೊರೊನಾ ಸೋಂಕಿನಿಂದ ಸಾವು: ಸುಳ್ಳುಸುದ್ದಿ ಎಂದ ಏಮ್ಸ್
Published On - 9:29 pm, Tue, 11 May 21