ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು (ಮಂಗಳವಾರ) ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ಭೇಟಿ ನೀಡಲಿದ್ದು, ‘ಗರೀಬ್ ಕಲ್ಯಾಣ್ ಸಮ್ಮೇಳನ’ದಲ್ಲಿ (Garib Kalyan Sammelan) ಭಾಗವಹಿಸಲಿದ್ದಾರೆ. ಹಾಗೇ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ 11ನೇ ಕಂತಿನ ಆರ್ಥಿಕ ಪ್ರಯೋಜನವನ್ನು ಬಿಡುಗಡೆ ಮಾಡಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ‘ಗರೀಬ್ ಕಲ್ಯಾಣ್ ಸಮ್ಮೇಳನ‘ದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿ ನೇತೃತ್ವದ ಸರ್ಕಾರ ಎಂಟು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ಕಾರ್ಯಕ್ರಮವನ್ನು ದೇಶದಾದ್ಯಂತ ರಾಜ್ಯ ರಾಜಧಾನಿಗಳು, ಜಿಲ್ಲಾ ಕೇಂದ್ರಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಗರೀಬ್ ಕಲ್ಯಾಣ ಸಮ್ಮೇಳನವು ದೇಶಾದ್ಯಂತ ಚುನಾಯಿತ ಸಾರ್ವಜನಿಕ ಪ್ರತಿನಿಧಿಗಳು ನೇರವಾಗಿ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಪರಿಕಲ್ಪನೆಯನ್ನು ಹೊಂದಿದೆ. ಸರ್ಕಾರವು ನಡೆಸುತ್ತಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪ್ರತಿಕ್ರಿಯೆಯನ್ನು ಪಡೆಯುವ ಪ್ರಯತ್ನ ಮಾಡಲಾಗುತ್ತದೆ. ಆಯಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸತ್ತಿನ ಸದಸ್ಯರು, ವಿಧಾನಸಭೆಯ ಸದಸ್ಯರು ಮತ್ತು ಇತರ ಚುನಾಯಿತ ಸಾರ್ವಜನಿಕ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ‘ಗರೀಬ್ ಕಲ್ಯಾಣ್ ಸಮ್ಮೇಳನ’ ಇಂದು ಬೆಳಗ್ಗೆ 9.45ಕ್ಕೆ ಪ್ರಾರಂಭವಾಗಲಿದ್ದು, ಇದರಲ್ಲಿ ಪ್ರಧಾನಿ ನೇರವಾಗಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿಯವರು ಕಾರ್ಯಕ್ರಮಕ್ಕೆ ಆಗಮಿಸುವುದರೊಂದಿಗೆ ವಿವಿಧ ರಾಜ್ಯ ಮತ್ತು ಸ್ಥಳೀಯ ಮಟ್ಟದ ಕಾರ್ಯಕ್ರಮಗಳು ರಾಷ್ಟ್ರೀಯಗೊಳ್ಳಲಿದೆ. ಈ ಸಮ್ಮೇಳನದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತ ಸರ್ಕಾರದ 9 ಸಚಿವಾಲಯಗಳು, ಇಲಾಖೆಗಳ ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ. ದೇಶದ ನಾಗರಿಕರ ಜೀವನ ಸೌಕರ್ಯವನ್ನು ಸುಧಾರಿಸಲು ಸರ್ಕಾರಿ ಕಾರ್ಯಕ್ರಮಗಳ ತಲುಪುವಿಕೆ ಮತ್ತು ವಿತರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ಈ ಸಮ್ಮೇಳನದ ಪ್ರಯತ್ನವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿಯಲ್ಲಿ 11ನೇ ಕಂತು ಆರ್ಥಿಕ ಪ್ರಯೋಜನವನ್ನು ಪ್ರಧಾನ ಮಂತ್ರಿ ಬಿಡುಗಡೆ ಮಾಡಲಿದ್ದಾರೆ. 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 21,000 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿಯವರು ದೇಶಾದ್ಯಂತ (PM-KISAN) ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ: ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಇಂದು ಪ್ರಧಾನಿ ಮೋದಿ ನೇರ ಸಂವಾದ -ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಭಾಗಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿಮ್ಲಾದಿಂದ ವರ್ಚುಯಲ್ ವೇದಿಕೆಯಲ್ಲಿ ನೇರವಾಗಿ ದೇಶದ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಈ ರಾಷ್ಟ್ರೀಯ ಕಾರ್ಯಕ್ರಮದೊಂದಿಗೆ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಲಿಂಕ್ ಮಾಡಲಾಗುವುದು. ಸಮಾಜದ ಬಡ ವರ್ಗದ ಕೋಟ್ಯಂತರ ಫಲಾನುಭವಿಗಳು ಈ ಯೋಜನೆಗಳಡಿ ಸೌಲಭ್ಯ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ವಸತಿ, ಕುಡಿಯುವ ನೀರು ಪೂರೈಕೆ, ಆಹಾರ, ಆರೋಗ್ಯ, ಜೀವನೋಪಾಯ, ಆರ್ಥಿಕ ಒಳಗೊಳ್ಳುವಿಕೆ ಯೋಜನೆಗಳ ಲಾಭವನ್ನು ನಾಗರಿಕರು ಪಡೆದಿರುವ ಬಗ್ಗೆ ಮತ್ತದರ ಪ್ರಭಾವದ ಕುರಿತು ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ರಾಷ್ಟ್ರಾದ್ಯಂತ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ ಏಕಕಾಲಕ್ಕೆ ಪ್ರಧಾನ ಮಂತ್ರಿ ಮೋದಿ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಅತಿ ದೊಡ್ಡ ಕಾರ್ಯಕ್ರಮ ಇದಾಗಿರುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ ಮತ್ತು ನಗರ), ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪೋಷಣ್ ಅಭಿಯಾನ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ ಮತ್ತು ನಗರ), ಜಲ ಜೀವನ್ ಮಿಷನ್ ಮತ್ತು ಅಮೃತ್ ಯೋಜನೆ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ಹಾಗೂ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸೌಲಭ್ಯ ಪಡೆದಿರುವ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ದ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ವೆಬ್‌ಕಾಸ್ಟ್ ಮೂಲಕ ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಈ ರಾಷ್ಟ್ರೀಯ ಸಮ್ಮೇಳನವನ್ನು ದೂರದರ್ಶನದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. MyGov ಆ್ಯಪ್ ಮೂಲಕ ರಾಷ್ಟ್ರೀಯ ಕಾರ್ಯಕ್ರಮವನ್ನು ವೆಬ್‌ಕಾಸ್ಟ್ ಮಾಡಲು ಸಹ ನಿಬಂಧನೆಗಳನ್ನು ಮಾಡಲಾಗಿದೆ. ಇದಕ್ಕಾಗಿ ಜನರು ತಮ್ಮ ಹೆಸರನ್ನು ಅಲ್ಲಿ ನೋಂದಾಯಿಸಿಕೊಳ್ಳಬೇಕು. ಇದನ್ನು ಇತರ ಸಾಮಾಜಿಕ ಮಾಧ್ಯಮ ಚಾನಲ್‌ಗಳಾದ ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳ ಮೂಲಕವೂ ವೀಕ್ಷಿಸಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:47 am, Tue, 31 May 22