BIG NEWS: ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
Ghulam Nabi Azad: ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ (Congress Leader), ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ (Ghulam Nabi Azad) ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಸ್ಥಾನಗಳಿಗೂ ಶುಕ್ರವಾರ (ಆಗಸ್ಟ್ 26) ರಾಜೀನಾಮೆ ನೀಡಿದ್ದಾರೆ. ಐದು ಪುಟಗಳ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ಪಕ್ಷವು ‘ಸುಧಾರಿಸಲು ಸಾಧ್ಯವಾಗದ ಸ್ಥಿತಿ ತಲುಪಿದೆ’ ಎಂದು ಬರೆದಿದ್ದಾರೆ.
ಇತ್ತೀಚೆಗಷ್ಟೇ ಅವರು ಆರೋಗ್ಯದ ಕಾರಣ ಮುಂದಿಟ್ಟು ಜಮ್ಮು ಮತ್ತು ಕಾಶ್ಮೀರ ಘಟಕದ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಈ ಮೂಲಕ ಪಕ್ಷದ ಉನ್ನತ ನಾಯಕತ್ವದ ಕಾರ್ಯವೈಖರಿ ಬಗ್ಗೆ ತಮ್ಮ ಅಸಮಾಧಾನವನ್ನು ಮತ್ತೆ ಹೊರಹಾಕಿದ್ದರು. ಪಕ್ಷದ ನಾಯಕತ್ವ ಕಾರ್ಯನಿರ್ವಹಿಸುತ್ತಿರುವ ರೀತಿ ಬದಲಾಗಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದ ಜಿ-23 ಸಮಿತಿಯಲ್ಲಿ ಗುಲಾಂ ನಬಿ ಆಜಾದ್ ಸಹ ಇದ್ದರು. ಗುಲಾಂ ನಬಿ ಆಜಾದ್ ಅವರನ್ನು ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಯ (JKCC) ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನೇಮಕಾತಿ ಆದೇಶ ಹೊರಬಿದ್ದ ಕೆಲಹೊತ್ತಿನಲ್ಲಿಯೇ ಅವರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದರು. ಪಕ್ಷದ ಜಮ್ಮು ಕಾಶ್ಮೀರ ರಾಜಕೀಯ ವ್ಯವಹಾರ ಸಮಿತಿಗೂ ಆಜಾದ್ ರಾಜೀನಾಮೆ ನೀಡಿದ್ದರು.
ಈ ನೇಮಕಾತಿಯ ಬಗ್ಗೆ ಆಜಾದ್ ಅಸಮಾಧಾನ ಹೊಂದಿದ್ದರು. ಕಾಂಗ್ರೆಸ್ನ ರಾಷ್ಟ್ರೀಯ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯರಾಗಿದ್ದ ಅವರು ರಾಜ್ಯಮಟ್ಟದ ಸಮಿತಿಗೆ ನೇಮಿಸಿದ್ದನ್ನು ಹಿಂಬಡ್ತಿ (demotion) ಎಂದೇ ಪರಿಗಣಸಿದ್ದರು. ತಮ್ಮ ರಾಜೀನಾಮೆಗೆ ಆರೋಗ್ಯದ ಕಾರಣಗಳನ್ನು ಆಜಾದ್ ಮುಂದಿಟ್ಟಿದ್ದಾರೆ. ಆದರೆ ಅವರ ರಾಜೀನಾಮೆಯ ನಿಜವಾದ ಕಾರಣಗಳು ಬೇರೆಯೇ ಇವೆ ಎಂದು ರಾಜಕೀಯ ಮೂಲಗಳು ತಿಳಿಸಿದ್ದವು.
ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಗುಲಾಂ ನಬಿ ಆಜಾದ್ ಅವರ ಆಪ್ತ ಗುಲಾಂ ಅಹ್ಮದ್ ಮಿರ್ ಈ ಹಿಂದೆ ಅಧ್ಯಕ್ಷರಾಗಿದ್ದರು. ಜುಲೈ 6ರಂದು ಮಿರ್ ಸಲ್ಲಿಸಿದ್ದ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅಂಗೀಕರಿಸಿದ್ದರು. ನಿನ್ನೆಯಷ್ಟೇ ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಹೊಸ ಅಧ್ಯಕ್ಷರಾಗಿ ವಿಕರ್ ರಸೂಲ್ ವಾನಿ ಅವರನ್ನು ನೇಮಿಸಲಾಗಿತ್ತು. ಈ ಬೆಳವಣಿಗೆಯೂ ಗುಲಾಂ ನಬಿ ಆಜಾದ್ ಅವರಿಗೆ ಸರಿಕಂಡಿರಲಿಲ್ಲ.
ಈ ಮೊದಲು ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಗುಲಾಂ ನಬಿ ಆಜಾದ್ ಅವರನ್ನೇ ಅಧ್ಯಕ್ಷರಾಗಿ ನೇಮಿಸಲಾಗುವುದು ಎಂಬ ಮಾತುಗಳು ಹರಿದಾಡುತ್ತಿದ್ದವು. ಆಜಾದ್ ಅಧ್ಯಕ್ಷರಾಗಿ ಮತ್ತು ತಾರಿಕ್ ಹಮೀದ್ ಕರ್ ಉಪಾಧ್ಯಕ್ಷರಾಗಿ 11 ಸದಸ್ಯರನ್ನು ಒಳಗೊಂಡ ಪ್ರಚಾರ ಸಮಿತಿಯನ್ನು ಕಾಂಗ್ರೆಸ್ ರಚಿಸಿತ್ತು. ಆದರೆ, ಪಿಸಿಸಿ ಮುಖ್ಯಸ್ಥರ ನೇಮಕ ಮಾಡಿರುವುದು ಪಕ್ಷದ ಅನೇಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಜಾದ್ ಅವರೇ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಏಕಾಏಕಿ ಈ ತೀರ್ಮಾನ ಬದಲಾಗಿತ್ತು.
Congress leader Ghulam Nabi Azad resigns from all positions including primary membership of Congress Party pic.twitter.com/hOFp1FQkCj
— ANI (@ANI) August 26, 2022
(ಹೆಚ್ಚಿನ ಮಾಹಿತಿ ನೀಡಲಾಗುವುದು)
Published On - 11:41 am, Fri, 26 August 22