Global Hunger Index: ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 107ನೇ ಸ್ಥಾನ; ದೇಶದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಎಂದ ಸರ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 16, 2022 | 7:46 AM

ಈ ಸೂಚ್ಯಂಕವನ್ನು ನಿರಾಕರಿಸಿರುವ ಕೇಂದ್ರ ಸರ್ಕಾರವು, ‘ಇದು ತಪ್ಪು ಮಾಹಿತಿ ಮತ್ತು ವಿಶ್ಲೇಷಣೆಗಳನ್ನು ಒಳಗೊಂಡಿದೆ’ ಎಂದು ಅಭಿಪ್ರಾಯಪಟ್ಟಿದೆ.

Global Hunger Index: ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 107ನೇ ಸ್ಥಾನ; ದೇಶದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಎಂದ ಸರ್ಕಾರ
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಮತ್ತೆ ಕುಸಿದಿದೆ
Follow us on

ದೆಹಲಿ: ಜಾಗತಿಕ ಹಸಿವು ಸೂಚ್ಯಂಕ (Global Hunger Index – GHI) ಶನಿವಾರ (ಅ 15) ಬಿಡುಗಡೆ ಆಗಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ಆರು ಸ್ಥಾನ ಕಡಿಮೆಯಾಗಿದೆ. ಈ ಸೂಚ್ಯಂಕಕ್ಕಾಗಿ ಪರಿಗಣಿಸಲಾಗಿದ್ದ 121 ದೇಶಗಳ ಪೈಕಿ ಭಾರತವು 107ನೇ ಸ್ಥಾನದಲ್ಲಿದೆ. ಈ ಸೂಚ್ಯಂಕವನ್ನು ನಿರಾಕರಿಸಿರುವ ಕೇಂದ್ರ ಸರ್ಕಾರವು, ‘ಇದು ತಪ್ಪು ಮಾಹಿತಿ ಮತ್ತು ವಿಶ್ಲೇಷಣೆಗಳನ್ನು ಒಳಗೊಂಡಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ಕಳೆದ 22 ವರ್ಷಗಳಲ್ಲಿ (2000ರಿಂದ) ಭಾರತವು ಗಣನೀಯ ಪ್ರಗತಿ ಸಾಧಿಸಿದೆ. ಆದರೆ ಮಕ್ಕಳ ಪೋಷಣೆಗೆ ಸಂಬಂಧಿಸಿದಂತೆ ಇನ್ನೂ ಒಂದಿಷ್ಟು ಕೆಲಸ ಆಗಬೇಕಿದೆ’ ಎಂದು ವರದಿಯು ತಿಳಿಸಿದೆ. ‘ಭಾರತದ ಜಿಎಚ್ಐ ಸ್ಕೋರ್ 2000ನೇ ಇಸವಿಯಲ್ಲಿ 38.8 ಅಂಕಗಳಿತ್ತು. ಇದು ಅಪಾಯಕಾರಿ ಪರಿಸ್ಥಿತಿ ಎಂದು ಪರಿಗಣಿಸಲಾಗಿತ್ತು. 2022ರಲ್ಲಿ ಭಾರತದ ಸ್ಕೋರ್ 29.1ಕ್ಕೆ ಪ್ರಗತಿ ಕಂಡಿದೆ. ಇದು ಗಂಭೀರ ಪರಿಸ್ಥಿತಿ, ಆದರೆ ಅಪಾಯಕಾರಿ ಅಲ್ಲ ಎಂದು ಸೂಚ್ಯಂಕ ಸಿದ್ಧಪಡಿಸಿರುವ ವಿಶ್ಲೇಷಕರು ಹೇಳಿದ್ದಾರೆ. ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಭಾರತದ ಅನುಪಾತವು ಮಧ್ಯಮಮಟ್ಟದಲ್ಲಿ ಇದೆ. 5 ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನ ಮಕ್ಕಳ ಮರಣ ಪ್ರಮಾಣವು ಕಡಿಮೆ. ಆದರೆ ವಯಸ್ಸಿಗೆ ತಕ್ಕಷ್ಟು ತೂಕ ಹೊಂದಿರದ ಮಕ್ಕಳ ಪ್ರಮಾಣವು ಶೇ 19.3ರಷ್ಟು ಇದೆ. ಇದು ಜಗತ್ತಿನಲ್ಲಿಯೇ ಅಧಿಕ ಎಂದು ವರದಿಯು ತಿಳಿಸಿದೆ.

ಜಾಗತಿಕ ಹಸಿವು ಸೂಚ್ಯಂಕ ವರದಿ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ‘ತನ್ನ ಜನರ ಆಹಾರ ಮತ್ತು ಪೌಷ್ಟಿಕಾಂಶದ ಅಗತ್ಯವನ್ನು ಪೂರೈಸಲು ವಿಫಲವಾಗಿರುವ ದೇಶ ಎಂದು ಬಿಂಬಿಸುವ ಮೂಲಕ ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಐರ್ಲೆಂಡ್ ಮತ್ತು ಜರ್ಮನಿಯ ಸರ್ಕಾರೇತರ ಸಂಸ್ಥೆಗಳಾದ ಕನ್ಸರ್ನ್ ವರ್ಲೆಂಡ್ ಮತ್ತು ವೆಲ್ಟ್ ಹಂಗರ್ ಹಿಲ್ಫ್ ಈ ವರದಿಯನ್ನು ಬಿಡುಗಡೆ ಮಾಡಿವೆ. 121 ದೇಶಗಳ ಪಟ್ಟಿಯಲ್ಲಿ ಭಾರತವು 107ನೇ ಸ್ಥಾನದಲ್ಲಿದೆ.

‘ವಾಸ್ತವದಿಂದ ಸಂಪರ್ಕ ಕಡಿದುಕೊಂಡಿರುವ ವರದಿ’ ಎಂದು ಹಸಿವು ಸೂಚ್ಯಂಕ ವರದಿಗೆ ಸಚಿವಾಲಯವು ಆಕ್ಷೇಪ ವ್ಯಕ್ತಪಡಿಸಿದೆ. ಕೊವಿಡ್ ಪಿಡುಗು ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಸರ್ಕಾರ ಮಾಡಿದ ಪ್ರಯತ್ನಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ. ಭಾರತ ಸರ್ಕಾರವು ವಿಶ್ವದಲ್ಲಿಯೇ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವನ್ನು ನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೇಳಿದೆ.

ಪಾಕಿಸ್ತಾನ, ನೇಪಾಳ, ಬಾಂಗ್ಲಾಕ್ಕಿಂತ ಹಿಂದುಳಿದ ಭಾರತ

ಭಾರತವು 121 ದೇಶಗಳ ಜಾಗತಿಕ ಹಸಿವು ಸೂಚ್ಯಂಕ (GHI) 2022ರಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 6 ಸ್ಥಾನ ಕುಸಿತ ಕಂಡಿದೆ. 2021ರಲ್ಲಿ 101ನೇ ಸ್ಥಾನದಲ್ಲಿದ್ದ ಭಾರತ (India) ಈ ವರ್ಷ 107ನೇ ಸ್ಥಾನಕ್ಕೆ ಕುಸಿದಿದೆ. ಯುದ್ಧಪೀಡಿತ ದೇಶವಾದ ಅಫ್ಘಾನಿಸ್ತಾನವನ್ನು (Afghanistan) ಹೊರತುಪಡಿಸಿ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತಲೂ ಭಾರತ ಹಿಂದುಳಿದಿದೆ. ನೆರೆಯ ಪಾಕಿಸ್ತಾನ- 99, ಶ್ರೀಲಂಕಾ- 64, ಬಾಂಗ್ಲಾದೇಶ- 84, ನೇಪಾಳ-81 ಮತ್ತು ಮಯನ್ಮಾರ್- 71ನೇ ಸ್ಥಾನವನ್ನು ಪಡೆದಿವೆ. ಈ ಎಲ್ಲಾ ದೇಶಗಳು ಭಾರತಕ್ಕಿಂತ ಮೇಲಿವೆ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕಿಂತ ಕೆಳಗಿರುವ ದೇಶಗಳೆಂದರೆ, ಜಾಂಬಿಯಾ, ಅಫ್ಘಾನಿಸ್ತಾನ್, ಟಿಮೋರ್-ಲೆಸ್ಟೆ, ಗಿನಿಯಾ-ಬಿಸ್ಸಾವ್, ಸಿಯೆರಾ ಲಿಯೋನ್, ಲೆಸೊಥೊ, ಲೈಬೀರಿಯಾ, ನೈಜರ್, ಹೈಟಿ, ಚಾಡ್, ಡೆಮ್. ಕಾಂಗೋ, ಮಡಗಾಸ್ಕರ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಯೆಮೆನ್.