
ಅಮೃತಸರ, ಜುಲೈ 15: ಅಮೃತಸರದ ಐತಿಹಾಸಿಕ ಗೋಲ್ಡನ್ ಟೆಂಪಲ್‌ಗೆ (Golden Temple) 2 ದಿನಗಳಲ್ಲಿ ಎರಡನೇ ಬಾಂಬ್ ಬೆದರಿಕೆ ಬಂದಿದ್ದು, ಇದು ಭಕ್ತರು ಮತ್ತು ಅಧಿಕಾರಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಇಂದು ಇಮೇಲ್ ಮೂಲಕ ಬಂದಿರುವ ಬೆದರಿಕೆಯಲ್ಲಿ ಸಿಖ್ ದೇವಾಲಯದ ಗರ್ಭಗುಡಿಯನ್ನು ಗುರಿಯಾಗಿಸಲು ಆರ್‌ಡಿಎಕ್ಸ್ ತುಂಬಿದ ಸ್ಫೋಟಕ ಸಾಧನವನ್ನು ಬಳಸಲಾಗುವುದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ, ಬಾಂಬ್ ನಿಷ್ಕ್ರಿಯ ದಳಗಳು, ಸ್ನಿಫರ್ ಡಾಗ್ ಘಟಕಗಳು ಮತ್ತು ಬಿಎಸ್‌ಎಫ್ ಸಿಬ್ಬಂದಿ ಮತ್ತು ಪೊಲೀಸ್ ಕಮಾಂಡೋಗಳು ಸೇರಿದಂತೆ ಹೆಚ್ಚುವರಿ ಭದ್ರತಾ ಪಡೆಗಳನ್ನು ಗೋಲ್ಡನ್ ಟೆಂಪಲ್ ಸಂಕೀರ್ಣ ಮತ್ತು ಸುತ್ತಮುತ್ತ ನಿಯೋಜಿಸಲಾಗಿದೆ.
ಗೋಲ್ಡನ್ ಟೆಂಪಲ್ ಸುತ್ತಮುತ್ತಲಿನ ಪ್ರವೇಶ ಮತ್ತು ನಿರ್ಗಮನ ಸ್ಥಳಗಳು ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿವೆ. ಎಲ್ಲಾ ಪ್ರಯಾಣಿಕರನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (SGPC) ಕಾರ್ಯದರ್ಶಿ ಪ್ರತಾಪ್ ಸಿಂಗ್, ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. “ಗೋಲ್ಡನ್ ಟೆಂಪಲ್ ವಿಶ್ವದ ನಂಬಿಕೆಯ ಕೇಂದ್ರವಾಗಿದೆ. ನಮಗೆ ಸ್ಫೋಟದ ಬೆದರಿಕೆ ಇಮೇಲ್ ಬಂದಿದೆ. ನಾವು ಪಂಜಾಬ್ ಮುಖ್ಯಮಂತ್ರಿ ಮತ್ತು DGPಗೆ ಪತ್ರ ಬರೆದಿದ್ದೇವೆ” ಎಂದು ಅವರು ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಗೋಲ್ಡನ್ ಟೆಂಪಲ್ನಲ್ಲಿ ಬಂದೂಕು ಇಟ್ಟಿರಲಿಲ್ಲ; ಭಾರತೀಯ ಸೇನೆ ಸ್ಪಷ್ಟನೆ
ಬೆದರಿಕೆಯ ಹೊರತಾಗಿಯೂ ಪ್ರತಾಪ್ ಸಿಂಗ್ ಸಾರ್ವಜನಿಕರು ಮತ್ತು ಭಕ್ತರು ಭಯಭೀತರಾಗುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. “ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಲೇ ಇದ್ದಾರೆ. ಭಾರತದಲ್ಲಿರಲಿ ಅಥವಾ ವಿದೇಶಗಳಲ್ಲಿರಲಿ ಯಾರೂ ಗಾಬರಿಯಾಗಬೇಡಿ ಎಂದು ನಾನು ಮನವಿ ಮಾಡುತ್ತೇನೆ” ಎಂದು ಅವರು ಹೇಳಿದರು.
ಇಂತಹ ಬೆದರಿಕೆ ಬಂದ ಸತತ ಎರಡನೇ ದಿನ ಇದು. ಸೋಮವಾರವೂ ಇದೇ ರೀತಿಯ ಇಮೇಲ್ ಬಂದಿದ್ದು, ಭದ್ರತಾ ಕಾಳಜಿಯಿಂದಾಗಿ ಇಮೇಲ್‌ಗಳ ವಿಷಯವನ್ನು ಬಹಿರಂಗಪಡಿಸಲಾಗಿರಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ